ಉಚ್ಛಾಟನೆಗೆ ಕಾರಣ ಕೊಟ್ಟ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಮಂಡ್ಯ ಜಿಲ್ಲೆಯ ದಿವಂಗತ ನಾಯಕರು ಹಾಗೂ ಒಕ್ಕಲಿಗ ಸಮುದಾಯದ ಹಿರಿಯರೂ ಆಗಿದ್ದ ದಿವಂಗತ ಜಿ.ಮಾದೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಲೋಕಸಭೆಯ ಮಾಜಿ ಸದಸ್ಯ ಎಲ್.ಆರ್.ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದಕ್ಕೆ ಮೊದಲು ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ,ಕುಮಾರಸ್ವಾಮಿ ಅವರು; ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರ ಅನುಮತಿ ಪಡೆಯಲಾಗಿದ್ದು, ಶಿವರಾಮೇಗೌಡರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ಸೂಚಿಸಲಾಗಿದೆ. ಇನ್ನೇನು ಆದೇಶ ಹೊರಬೀಳಲಿದೆ ಎಂದಿದ್ದರು. ಅವರು ಈ ಹೇಳಿಕೆ ನೀಡಿದ ಕೆಲ ಗಂಟೆಗಳಲ್ಲೇ ಉಚ್ಛಾಟನೆ ಆದೇಶ ಹೊರಬಿದ್ದಿದೆ.
ಶಿವರಾಮೇಗೌಡರ ಹೇಳಿಕೆಯ ಬಗ್ಗೆ ಕುಮಾರಸ್ವಾಮಿ ಅವರು ಹೇಳಿದ್ದಿಷ್ಟು;
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಸಮುದಾಯದ ಹಿರಿಯ ನಾಯಕರು ಹಾಗೂ ಇಡೀ ರಾಜ್ಯವೇ ಗೌರವಿಸುತ್ತಿದ್ದ ಜಿ. ಮಾದೇಗೌಡರಂಥ ಹಿರಿಯರ ಬಗ್ಗೆ ಶಿವರಾಮೇಗೌಡರು ಅಸಭ್ಯವಾಗಿ ಮಾತನಾಡಿರುವುದು ಅಕ್ಷ್ಯಮ್ಯ. ಮಾದೇಗೌಡರ ಬಗ್ಗೆ ಅವರು ಮಾತನಾಡಿರುವ ಆಡಿಯೋವನ್ನು ನಾನೂ ಕಳಿದ್ದೇನೆ. ಇಂಥ ನಡವಳಿಕೆಯನ್ನು ಸಹಿಸುವ ಪ್ರಶ್ನೆ ಇಲ್ಲ.
ಮಂಡ್ಯದ ರಾಜಕೀಯದ ಬಗ್ಗೆ ಮಾತನಾಡುತ್ತಾ ಶಿವರಾಮೇಗೌಡರು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಸಭ್ಯವಾಗಿ ಅವರು ಮಾತನಾಡಿರುವ ಮೊಬೈಲ್ ಕರೆಯ ಆಡಿಯೋ ಈಗ ವೈರಲ್ ಆಗಿದೆ. ತಮಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಅವರು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ಮಾದೇಗೌಡರ ಬಗ್ಗೆ ಅಂತಹ ಕೆಳಮಟ್ಟದ ಭಾಷೆ ಬಳಸುವ ಅಗತ್ಯ ಇರಲಿಲ್ಲ.
ಮಾದೇಗೌಡರಿಗೂ ಹಾಗೂ ನಮ್ಮ ಪಕ್ಷಕ್ಕೂ ರಾಜಕೀಯವಾಗಿ ವಿಭಿನ್ನತೆ ಇತ್ತು ನಿಜ. ಹಾಗೆಂದು ಅವರ ಬಗ್ಗೆ ಅಗೌರವದಿಂದ ನಡೆದುಕೊಳ್ಳುವುದನ್ನು ಒಪ್ಪಲಾಗದು. ಅಲ್ಲದೆ, ಮಾದೇಗೌಡರು ಇಂದು ನಮ್ಮ ನಡುವೆ ಬದುಕಿಲ್ಲ. ದಿವಂಗತ ನಾಯಕರ ಹೆಸರನ್ನು ಶಿವರಾಮೇಗೌಡರು ಯಾಕೆ ತಂದರೋ ಗೊತ್ತಿಲ್ಲ. ಇಂತಹ ಮಾತುಗಳು ಯಾರಿಗೂ ಶೋಭೆ ತರುವುದಿಲ್ಲ.
ತಕ್ಷಣವೇ ಅವರ ವಿರುದ್ಧ ಕ್ರಮ ಜರುಗಿಸುವಂತೆ ನಮ್ಮ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದೇನೆ. ಅಂತವರು ಪಕ್ಷದಲ್ಲಿ ಇದ್ದರೆ ಶೋಭೆ ಇರುವುದಿಲ್ಲ ಎಂದ ಕುಮಾರಸ್ವಾಮಿ ಅವರು; ಮಾತೆತ್ತಿದರೆ ಹಣದ ಬಗ್ಗೆ ಶಿವರಾಮೇಗೌಡ ಹಣದ ಬಗ್ಗೆ ಮಾತನಾಡುತ್ತಾರೆ. ಹಣವನ್ನು ಇವರೊಬ್ಬರೇ ಕಂಡಿಲ್ಲ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಣ ಖರ್ಚು ಮಾಡಿದ್ದೆ ಎಂದು ಹೇಳಿದ್ದಾರೆ. 30 ಕೋಟಿ ರೂ. ಖರ್ಚು ಮಾಡಿರೋದನ್ನು ಹೇಳಿಕೊಂಡಿದ್ದಾರೆ. ಅವರು ಅಷ್ಟು ಹಣವನ್ನು ಅದ್ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ.
ಪದೇ ಪದೆ ಶಿವರಾಮೇಗೌಡರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇಲ್ಲಿಯವರೆಗೆ ಇಂಥ ಚಾಳಿಯನ್ನು ತಿದ್ದಿಕೊಳ್ಳುತ್ತಾರೆ ಅಂದುಕೊಂಡು ಸುಮ್ಮನಿದ್ದೆವು. ಆದರೆ ಅದು ಆಗಲಿಲ್ಲ. ಎಲ್ಲಕ್ಕೂ ಒಂದು ಇತಿಮಿತಿ ಇದೆ.
ಇಬ್ರಾಹಿಂ ಏನ್ಮಾಡ್ತಾರೆ ಅಂತ ನೋಡೋಣ
ಕಾಂಗ್ರೆಸ್ ಬಿಟ್ಟಿರುವ ಇಬ್ರಾಹಿಂ ಅವರು ಈಗಾಗಲೇ ರಾಜ್ಯ ಪ್ರವಾಸ ಅವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಬಿಟ್ಟಿದ್ದೇನೆ ಎಂದಿರುವ ಮತ್ತೆ ಆ ಪಕ್ಷಕ್ಕೆ ಹೋಗಲ್ಲ ಅಂತ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಿನ್ನೆ ಇದೇ ಮಾತನ್ನು ಅವರು ಪುನಾ ತಿಳಿಸಿದ್ದಾರೆ. ನೋಡೋಣ ಏನಾಗುತ್ತದೆ ಎಂದು.
ಎಲ್ಲ ಕಡೆ ಬಿಟ್ಟು ಹೋಗುತ್ತಿದ್ದಾರೆ
ಪಕ್ಷಗಳನ್ನು ನಾಯಕರು ಬಿಟ್ಟು ಹೋಗುವುದು ಬರೀ ಕರ್ನಾಟಕದಲ್ಲಿ ಮಾತ್ರ ಆಗುತ್ತಿದೆ ಎಂದಲ್ಲ. ಉತ್ತರ ಪ್ರದೇಶ, ಗೋವಾ ಪಂಜಾಬ್ ರಾಜ್ಯಗಳಲ್ಲಿ ಕೂಡ ಆಗುತ್ತಿದೆ. ಚುನಾವಣೆ ಸಂದರ್ಭಗಳಲ್ಲಿ ಈ ರೀತಿಯ ಪಕ್ಷಾಂತರ ಜಾಸ್ತಿ. ಬೆಳಗ್ಗೆ ಒಂದು ಪಕ್ಷದಲ್ಲಿ ಇದ್ದರೆ, ಸಂಜೆ ಇನ್ನೊಂದು ಪಾರ್ಟಿಗೆ ಹೋಗುತ್ತಾರೆ. ಇಂದು ರಾಜಕೀಯ ನಾಯಕರಲ್ಲಿ ನಿಷ್ಠೆ ಎಂಬುದು ಇಲ್ಲ. ಇಂಥವರು ಇಂಥಹದ್ದೇ ಪಕ್ಷದಲ್ಲಿ ಇರುತ್ತಾರೆ ಎಂದು ಊಹೆ ಮಾಡಲು ಕೂಡ ಸಾಧ್ಯವಿಲ್ಲ.