ಮೂಲಾಧಾರಗಳ ಮೇಲೆ ನಿಂತ ಮುಂಗಡ ಪತ್ರ
ನವದೆಹಲಿ: ಪ್ರಸಕ್ತ 39.45 ಲಕ್ಷ ಕೋಟಿ ರೂ. ವೆಚ್ಚದ ಬಜೆಟನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‍ನಲ್ಲಿ ಮಂಡಿಸಿದರು. ಸತತ ನಾಲ್ಕನೆ ಬಾರಿಗೆ ಬಜೆಟ್ ಮಂಡನೆ ಮಾಡಿರುವ ಅವರು, ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು ಶೇ.10ರಿಂದ 14ಕ್ಕೆ ಹೆಚ್ಚಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಕೇಂದ್ರ ಸರ್ಕಾರಿ ನೌಕರರ ಸರಿಸಮನಾಗಿ ತರಲು ಅನುಕೂಲ ಕಲ್ಪಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಶೇ.6.4ರಷ್ಟು ವಿತ್ತೀಯ ಕೊರತೆಯನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿತ್ತು. ಅದನ್ನು ಪರಿಷ್ಕರಿಸಲಾಗಿದ್ದು. ಶೇ. 6.9ರಷ್ಟು ಎಂದು ನಿರೀಕ್ಷಿಸಲಾಗಿದೆ. 2025-26ರ ವೇಳೆಗೆ ವಿತ್ತೀಯ ಕೊರತೆ ಜಿಡಿಪಿಯ ಶೇ.4.5ರಷ್ಟಿರುವ ಅಂದಾಜನ್ನು ಕೇಂದ್ರ ಸಚಿವರು ಪ್ರಸ್ತಾಪಿಸಿದ್ದಾರೆ.
ರಾಜ್ಯ ಸರ್ಕಾರಗಳು ವಿತ್ತೀಯ ಕೊರತೆಯನ್ನು ಶೇ.4ರವರೆಗೂ ನಿಭಾಯಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ರಾಜ್ಯ ಸರ್ಕಾರಗಳು 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲ ಪಡೆಯಲು ಕೇಂದ್ರ ಸಹಾಯ ನೀಡಲಿದೆ. ರಾಜ್ಯ ಸರ್ಕಾರಗಳಿಗೆ ಬಂಡವಾಳ ಹೂಡಿಕೆಗಾಗಿ ಒಂದು ಲಕ್ಷ ಕೋಟಿ ರೂ.ಗಳನ್ನು ವಿತ್ತ ಸಚಿವರು ತಮ್ಮ ಆಯವ್ಯಯದಲ್ಲಿ ಕಾಯ್ದಿರಿಸಿದ್ದಾರೆ.
ರಾಸಾಯನಿಕಗಳ ಮೇಲಿನ ಆಮದು ತೆರಿಗೆಯನ್ನು ಕಡಿತ ಮಾಡಲಾಗಿದೆ. ಸಣ್ಣ ಮತ್ತು ಮಧ್ಯಮಗಾತ್ರದ ವ್ಯವಹಾರಗಳಲ್ಲಿ ನಡೆಯುವ ಉಕ್ಕು ತ್ಯಾಜ್ಯದ ಮೇಲಿನ ಅಬಕಾರಿ ಸುಂಕ ವಿನಾಯ್ತಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಸ್ಟೈನ್‍ಲೆಸ್ ಸ್ಟೀಲ್, ಹೈಸ್ಟೀಲ್ ಬಾರ್‍ಗಳ ಮೇಲಿನ ಅಬಕಾರಿ ಸುಂಕವನ್ನು ಹಿಂಪಡೆಯಲಾಗಿದೆ.
ಮಿಶ್ರವಿಲ್ಲದ ಇಂಧನದ ಮೇಲೆ 2022ರ ಅಕ್ಟೋಬರ್ ನಿಂದ ಪ್ರತಿ ಲೀಟರ್ ಮೇಲೆ 2ರೂ.ಗಳ ಹೆಚ್ಚುವರಿ ಸುಂಕವನ್ನು ವಿಧಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
7 ಮೂಲಾಧಾರಗಳು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮುಂಗಡ ಪತ್ರ ಕೆಳಗಿನ ಏಳು ಅಂಶಗಳ ಮೇಲೆ ನಿಂತಿದೆ.
1) ಪಿಎಂ ಗತಿಶಕ್ತಿ
2) ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ
3) ಉತ್ಪಾದಕತೆಯ ವೃದ್ಧಿ
4) ಅವಕಾಶಗಳ ಹೆಚ್ಚಳ
5) ವಿದ್ಯುತ್ ಉತ್ಪಾದನೆ, ವಿತರಣೆಯಲ್ಲಿ ಸುಧಾರಣೆ
6) ಪರಿಸರ ಸಂರಕ್ಷಣೆ
7) ವ್ಯವಸ್ಥಿತ ಹೂಡಿಕೆಗಳಿಗೆ ಒತ್ತು
Comments 1