ಮಕ್ಕಳೊಂದಿಗೆ ಗಿರಿಧಾಮದಲ್ಲಿ ಹಾಡಿ ನಲಿದ ಹ್ಯಾಟ್ರಿಕ್ ಹೀರೋ ದಂಪತಿ
ಚಿಕ್ಕಬಳ್ಳಾಪುರ: ಪುನಿತ್ ರಾಜ್‍ಕುಮಾರ್ ಅವರ ಪ್ರೀತಿಯ ಶಕ್ತಿಧಾಮದ ಹೆಣ್ಣು ಮಕ್ಕಳನ್ನು ನಟ ಡಾ.ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಚಿಕ್ಕಬಳ್ಳಾಪುರದ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಕರೆತಂದು ದೇವರ ದರ್ಶನ ಪಡೆದರು.
ಮೈಸೂರಿನಲ್ಲಿ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಹುಟ್ಟು ಹಾಕಿದ ಸಂಸ್ಥೆಯನ್ನು ಪುನೀತ್ ರಾಜ್ ಕುಮಾರ್ ಕಾಳಜಿಯಿಂದ ಅಲ್ಲಿರುವ ಹೆಣ್ಣು ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿ ಹೊತ್ತಿದ್ದರು.
ಆದರೆ, ಪುನೀತ್ ರಾಜ್ ಕುಮಾರ್ ಹಠಾತ್ ನಿಧನದ ನಂತರ ಶಕ್ತಿಧಾಮದ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡಬಾರದು ಎಂಬ ಕಾರಣಕ್ಕೆ ಸ್ವತಃ ಡಾ.ಶಿವರಾಜ್ ಕುಮಾರ್ ಅವರೇ ಶಕ್ತಿಧಾಮದ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ವಹಿಸಿದ್ದಾರೆ.
ಇತ್ತೀಚೆಗೆ ಶಕ್ತಿಧಾಮದ ಮಕ್ಕಳನ್ನು ಶಿವರಾಜ್ ಕುಮಾರ್ ಚಿತ್ರೀಕರಣ ಸ್ಥಳಕ್ಕೂ ಕರೆದೊಯ್ದಿದ್ದರು.ಇದೀಗ ಚಿಕ್ಕಬಳ್ಳಾಪುರದ ನಂದಿ ಗ್ರಾಮಕ್ಕೆ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದಾರೆ.
ಬೆಳಗ್ಗೆ ನಂದಿಯಲ್ಲಿರುವ ಜಗದ್ವಿಖ್ಯಾತ ಭೋಗ ನಂದೀಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ಮಕ್ಕಳು ಸಾಲಿನಲ್ಲಿ ಹೋಗಿ ದೇವರ ದರ್ಶನ ಪಡೆದರು. ಮಕ್ಕಳೊಂದಿಗೆ ಶಿವರಾಜ್ ಕುಮಾರ್‍ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ದೇವರ ದರ್ಶನ ಪಡೆದರು.
ದೇವರ ದರ್ಶನ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಶಕ್ತಿಧಾಮದ ಹೆಣ್ಣು ಮಕ್ಕಳಿಗೆ ನಾವು ಬೇರೆಯವರು , ನಾವೇ ಬೇರೆ ಎಂಬ ಕಲ್ಪನೆ ಬರಬಾರದು ಎಂಬ ಕಾರಣಕ್ಕೆ ನಾವೂ ಅವರ ಜೊತೆಗೆ ಬಂದಿದ್ದೇವೆ ಎಂದು ಹೇಳಿದರು.
ನಾವು ಮಾತ್ರವಲ್ಲ. ಇಡೀ ರಾಜ್ ಕುಮಾರ್ ಕುಟುಂಬ ಸೇರಿದಂತೆ ಹಲವರ ಆಶೀರ್ವಾದ ಈ ಮಕ್ಕಳ ಮೇಲೆ ಇದೆ ಎಂದು ತಿಳಿಸಿದರು.
1999ರಲ್ಲಿ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರು ಹುಟ್ಟು ಹಾಕಿದ ಸಂಸ್ಥೆ ಶಕ್ತಿಧಾಮ.
ಹೆಣ್ಣು ಮಕ್ಕಳಿಗಾಗಿಯೇ ಇರುವ ಸಂಸ್ಥೆ ಶಕ್ತಧಾಮ.ಇಲ್ಲಿನ ಮಕ್ಕಳಿಗೆ ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ.
ಆ ಮಕ್ಕಳಿಗೆ ಅನಾಥ ಪ್ರಜ್ಞಾ ಕಾಡಬಾರದು ಎಂಬ ಕಾರಣಕ್ಕೆ ನಾವು ಆಗಾಗ್ಗೆ ಈ ರೀತಿಯ ಶಿಕ್ಷಣೇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಅವರಲ್ಲಿ ಆ ರೀತಿಯ ಭಾವನೆಯೇ ಬರಬಾರದು ಎಂಬುದು ನಮ್ಮ ಉದ್ದೇಶ ಎಂದರು.
ಸದ್ಯ ಶಕ್ತಿಧಾಮದಲ್ಲಿ 150 ಹೆಣ್ಣು ಮಕ್ಕಳಿದ್ದಾರೆ. ಈಗ ಸಂಖ್ಯೆ 200ಕ್ಕೆ ಏರಿಕೆಯಾಗಿದ್ದು, ನಮ್ಮ ಇಡೀ ಕುಟುಂಬ ಅವರನ್ನು ನೋಡಿಕೊಳ್ಳಲಿದೆ ಎಂದು ಶಿವಣ್ಣ ತಿಳಿಸಿದರು.