ಹಿಜಾಬ್, ಕೇಸರಿಶಾಲು ವಿವಾದ ಸಮಾಜದ ಶಾಂತಿ ಕದಡುವ ಕೃತ್ಯ ಎಂದ ಮಾಜಿ ಸಿಎಂ
ರಾಮನಗರ: ಹಿಜಾಬ್ ಮತ್ತು ಕೇಸರಿ ಶಾಲು ವಿವಾದಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೇಸರಿ ಶಾಲು ಅಥವಾ ಹಿಜಾಬ್ ಹಾಕಿಕೊಂಡು ಶಾಲೆಗೆ ಹೋದಾಕ್ಷಣ ಸಮಾಜವೇನು ಉದ್ಧಾರ ಆಗಲ್ಲ. ಕೆಲವರಿಗೆ ಇದು ರಾಜಕೀಯ ವಿಷಯವಾಗಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ನಮ್ಮ ರೈತರ ಮಕ್ಕಳಿಗೆ ಹಸಿರು ಶಾಲು ಹಾಕಿಕೊಂಡು ಶಾಲೆಗೆ ಹೋಗಿ ಎಂದು ಕರೆ ಕೊಡಬೇಕಾಗುತ್ತದೆ ಎಂದು ಅವರು ಹೇಳಿದರು.
ಚನ್ನಪಟ್ಟಣದಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಹಿಜಾಬ್ ಮತ್ತು ಕೇಸರಿ ಶಾಲು ಬಳಿಸಿಕೊಂಡು ಸಮಾಜದ ಶಾಂತಿ ಕದಡುವ ಕೆಲಸ ಆಗುತ್ತಿದೆ. ಇದು ಆಗಬಾರದು. ಕೆಲವರು ಈ ವಿಷಯಗಳನ್ನು ಇಟ್ಟುಕೊಂಡು ಪ್ರಚೋದಿಸುತ್ತಿವೆ. ರಾಷ್ಟ್ರೀಯ ಪಕ್ಷಗಳು ಮತಗಳನ್ನು ಪಡೆಯುವ ಉದ್ದೇಶದಿಂದ ಈ ವಿವಾದವನ್ನು ಬೆಳೆಸುತ್ತಿವೆ. ಇದು ಸಮಾಜಕ್ಕೆ ಅಪಾಯಕಾರಿ” ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸಮಸ್ಯೆಗಳು ಬೆಟ್ಟದಷ್ಟಿವೆ. ಜನರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಆದರೆ, ಕೆಲವರು ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಸುಖಾಸುಮ್ಮನೆ ಮಕ್ಕಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು.