ಬರಡಾಗುವತ್ತ ಗುಡಿಬಂಡೆ ಅಮಾನಿ ಭೈರಸಾಗರ ಕೆರೆ
by GS Bharath Gudibande
ಗುಡಿಬಂಡೆ: ಪಟ್ಟಣದ ಜನರ ಜಲದಾಹ ನೀಗಿಸುವ ಅಮಾನಿ ಭೈರಸಾಗರ ಕೆರೆಯಿಂದ ತಾಲ್ಲೂಕಿನ 28 ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಶಾಸಕ ಎಸ್.ಎನ್.ಸುಬ್ಬರೆಡ್ಡಿ ಮುಂದಾಗಿರುವುದಕ್ಕೆ ಪಟ್ಟಣದ ಜನರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ʼಜಲಜೀವನ್ ಮಿಷನ್ʼ ಯೋಜನೆ ಅಡಿಯಲ್ಲಿ ಅಮಾನಿ ಭೈರಸಾಗರ ಕೆರೆಯಿಂದ ತಾಲೂಕಿನ 28 ಹಳ್ಳಿಗಳ 2,578 ಮನೆಗಳಿಗೆ ನೇರವಾಗಿ ನಲ್ಲಿ ಮೂಲಕ ನೀರು ಒದಗಿಸುವ ಯೋಜನೆಗೆ ಹಣ ಮಂಜೂರಾಗಿದ್ದು, ಸಚಿವ ಸಂಪುಟದ ಅನುಮೋದನೆಯೂ ಸಿಕ್ಕಿರುವುದು ಪಟ್ಟಣದ ಜನರ ನಿದ್ದೆ ಕೆಡಿಸಿದೆ.
ಪಟ್ಟಣದಲ್ಲಿ 2,500 ಮನೆಗಳಿಗೆ 1,700 ನಲ್ಲಿ
28 ಹಳ್ಳಿಗಳ ಮನೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಹೋಗಿ ಗುಡಿಬಂಡೆ ಜನರಿಗೆ ಕುಡಿಯಲು ನೀರು ಇಲ್ಲದಂತೆ ಮಾಡಿ ಜನರು ಮತ್ತೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಇನ್ನೂ ಅದೆಷ್ಟೋ ಮನೆಗಳಿಗೆ ಪಟ್ಟಣದಲ್ಲಿ ನಲ್ಲಿ ವ್ಯವಸ್ಥೆಯೇ ಇಲ್ಲ. ಅಂತಹ ಮನೆಗಳನ್ನು ಗುರುತಿಸಿ ನೀರು ಪೂರೈಸುವ ವ್ಯವಸ್ಥೆಯನ್ನು ಮಾಡದೇ ಈಗ ಶಾಸಕರು ಪಟ್ಟಣದ ಜನರಿಗೆ ನೀರು ತಪ್ಪಿಸುವ ಕೆಲಸ ಮಾಡಲು ಹೊರಟಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆ ಮುಖಂಡರು ಟೀಕಿಸಿದ್ದಾರೆ.
ಗಂಗೆ ಯೋಜನೆಯಿಂದ ಬೋಟಿಂಗ್ ಗೆ ಅಡ್ಡಿ
ಎಸ್.ಎನ್.ಸುಬ್ಬಾರೆಡ್ಡಿ ಅವರು ಶಾಸಕರಾಗಿ ಬಂದ ದಿನದಿಂದ ಗುಡಿಬಂಡೆಯಲ್ಲಿನ ಪ್ರವಾಸೋದ್ಯಮ ಮಾಡುವೆ, ಅಮಾನಿ ಭೈರಸಾಗರ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ ವರ್ಷಗಳೇ ಕಳೆದಿವೆ. ಆದರೆ ಇಂದಿಗೂ ಅದಾವುದನ್ನೂ ಮಾಡಿಲ್ಲ. ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಯಾವ ಯೋಜನೆಯನ್ನೂ ಕಾರ್ಯಗತ ಮಾಡಿಲ್ಲ. ಈಗ ಇರುವ ನೀರನ್ನು ಹಳ್ಳಿಗಳಿಗೆ ಕೊಟ್ಟರೆ ಗುಡಿಬಂಡೆ ಪಟ್ಟಣದ ಜನರಿಗೆ ಕುಡಿಯಲು ನೀರು ಇರುವುದಿಲ್ಲ, ಹಾಗಾಗಿ ಶಾಸಕರು ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಎನ್ನುವುದು ಪಟ್ಟಣದ ಪ್ರಮುಖರೊಬ್ಬರು ಹೇಳುವ ಮಾತು.
ಪಕ್ಷಬೇಧ ಬಹುತೇಕ ಮುಖಂಡರು ಈ ಯೋಜನೆಯನ್ನು ವಿರೋಧ ಮಾಡುತ್ತಿದ್ದಾರೆ. ಹಳ್ಳಿಗಳಿಗೆ ನೀರು ಕೊಡುವುದು ತಪ್ಪಲ್ಲ, ಆದರೆ ಅಮಾನಿ ಭೈರಸಾಗರದಲ್ಲಿ ಎಷ್ಟು ನೀರು ಸಂಗ್ರಹವಾಘುತ್ತದೆ? ಗುಡಿಬಂಡೆ ಪಟ್ಟಣದಲ್ಲಿ ಎಷ್ಟು ಜನಸಂಖ್ಯೆ ಇದೆ? ಕೆರೆಯಲ್ಲಿ ಎಷ್ಟು ಹೂಳು ತುಂಬಿದೆ? ಎನ್ನುವುದನ್ನು ವೈಜ್ಞಾನಿಕವಾಗಿ ಪರಿಶೀಲನೆ ಮಾಡಬೇಕು. ಕೆರೆಯಲ್ಲಿ ಹಿಂದೆ ಹೂಳು ತೆಗೆಯುವ ಕೆಲಸವನ್ನು ನಾಮಕಾವಸ್ತೆಗೆ ಮಾಡಿ ಹಣ ಕೊಳ್ಳೆ ಹೊಡೆದಿದ್ದು ಬಿಟ್ಟರೆ ಕೆರೆಯ ಹೂಳು ಕೆರೆಯಲ್ಲೇ ಬಿದ್ದಿದೆ ಎನ್ನುವುದು ಹೆಸರು ಹೇಳಲಿಚ್ಛಿಸದ ಇನ್ನೊಬ್ಬ ಮುಖಂಡರ ಅಳಲು.
ಪ್ರತಿ ಹಳ್ಳಿಗೂ ಕೆರೆ ಇದೆ. ಆ ಕೆರೆಗಳಲ್ಲಿ ಹೂಳು ತುಂಬಿದೆ ಹಾಗೂ ಒತ್ತುವರಿ ಆಗಿದೆ. ತೂಬುಗಳು ಹಾಳಾಗಿರುವ ಹಿನ್ನೆಲೆಯಲ್ಲಿ ಕೆರೆಗಳಿಗೆ ಹರಿದು ಬರುವ ನೀರು ನಿಲ್ಲುತ್ತಿಲ್ಲ. ಕೆಲ ತಿಂಗಳ ಹಿಂದೆ ತಾಲೂಕಿನಲ್ಲಿ ಭಾರೀ ಮಳೆ ಸುರಿದಿದೆ. ಆದರೆ ಅನೇಕ ಕೆರೆಗಳಲ್ಲಿ ಈಗ ನೀರಿಲ್ಲ. ಇದಕ್ಕೆ ಕಾರಣರು ಯಾರು? ಸಣ್ಣ ನೀರಾವರಿ ಇಲಾಖೆ ಕೇವಲ ದೊಡ್ಡ ಕೆರೆಗಳತಚ್ತ ಗಮನ ಕೊಟ್ಟು ಹಳ್ಳಿ ಕೆರೆಗಳನ್ನು ನಿರ್ಲಕ್ಷ್ಯ ಮಾಡಿದೆ. ಶಾಸಕರು ಅಂಥ ಕೆರೆಗಳನ್ನು ಅಭಿವೃದ್ಧಿಪಡಿಸಿ ಆಯಾ ಗ್ರಾಮಗಳಿಗೆ ನೀರು ಒದಗಿಸಬೇಕು, ಆ ಮೂಲಕ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಆರ್ಥಿಕವಾಗಿಯೂ ಇದು ಉತ್ತಮ ಪರಿಕಲ್ಪನೆ ಎನ್ನುತ್ತಾರೆ ಅವರು.
ಬುಲೆಟ್ ಶ್ರೀನಿವಾಸ್, ಅಧ್ಯಕ್ಷ, ಜಯಕರ್ನಾಟಕ, ಗುಡಿಬಂಡೆ
ಮನೆ ಮನೆಗೆ ಗಂಗೆ ಯೋಜನೆ ಬಹಳ ಒಳ್ಳೆಯ ಕೆಲಸ. ಆದರೆ ಒಬ್ಬರ ನೀರು ಕಿತ್ತುಕೊಂಡು ಮತ್ತೊಬ್ಬರಿಗೆ ಕೊಡುವುದು ಯಾವ ನ್ಯಾಯ? ಶಾಸಕರು ಈಗ ನೀರಿನ ಸೌಲಭ್ಯ ಕಲ್ಪಿಸುತ್ತಿರುವ 28 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇಲ್ಲ. ಹೀಗಿರುವಾಗ ಪಟ್ಟಣದಲದಲಿ 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇವರು ನೀರಿಲ್ಲದೆ ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಲಿದೆ. ಕೃಷಿ ಚಟುವಟಿಕೆಗಳಿಗೆ ಬಳಸದೆ ಕುಡಿಯಲು ಮಾತ್ರ ಉಪಯೋಗ ಮಾಡುತ್ತಿದ್ದಾಗ ಅದಕ್ಕೆ ಸಮಸ್ಯೆ ಮಾಡಬಾರದು.