ಹಿಜಾಬ್, ಕೇಸರಿ ಶಾಲು ವಿವಾದದ ಬಗ್ಗೆ ಚರ್ಚೆ; ವಿಧಾನ ಮಂಡಲ ಅಧಿವೇಶನ, ಜನತಾ ಜಲಧಾರೆ ಇತ್ಯಾದಿ ಅಂಶಗಳ ಬಗ್ಗೆ ಸಮಾಲೋಚನೆ: ಮೇಲ್ಮನೆಯಲ್ಲಿ ಜೆಡಿಎಸ್ ಮುಖ್ಯ ಸಚೇತಕರಾಗಿ ಕೋಲಾರದ ಗೋವಿಂದರಾಜು ನೇಮಕ
ಬೆಂಗಳೂರು: ಪಕ್ಷ ಸಂಘಟನೆ, 2023ರ ಚುನಾವಣೆ, ಪಕ್ಷದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಜನತಾ ಜಲಧಾರೆ ಆರಂಭ ಮಾಡುವುದು, ವಿಧಾನ ಮಂಡಲ ಅಧಿವೇಶನ, ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಸೇರಿದಂತೆ ಹತ್ತು ಹಲವು ಮಹತ್ವದ ವಿಷಯಗಳ ಬಗ್ಗೆ ಜೆಡಿಎಸ್ ಪ್ರಮುಖರ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ರೆಸಾರ್ಟ್ ಒಂದರಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಾಲ್ಗೊಂಡಿದ್ದರು. ಈ ಸಭೆಯ ಅಧ್ಯಕ್ಷತೆಯನ್ನು ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಷೆಂಪೂರ್ ಅವರು ವಹಿಸಿದ್ದರು.
ಮೇಲ್ಮನೆ ಮುಖ್ಯ ಸಚೇತಕರಾಗಿ ಗೋವಿಂದ ರಾಜು
ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಮುಖ್ಯ ಸಚೇತಕರಾಗಿ ಕೋಲಾರದ ಗೋವಿಂದರಾಜು ಅವರನ್ನು ನೇಮಕ ಮಾಡುವ ಬಗ್ಗೆ ಕೋರ್ ಕಮಿಟಿ ನಿರ್ಣಯ ಕೈಗೊಂಡಿತು.
ಜನತಾ ಜಲಧಾರೆ
ರಾಜ್ಯದ ನೀರಾವರಿ ಹಕ್ಕುಗಳನ್ನು ಸಾಧಿಸಿಕೊಳ್ಳುವ ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವ ಬಗ್ಗೆ ಮುಖ್ಯವಾಗಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ರಾಜ್ಯದ 180ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಹಾದು ಹೋಗುವ ಜಲಧಾರೆ ಗಂಗಾ ರಥಯಾತ್ರೆ ಸಾಗುವ ಹಾದಿಯಲ್ಲಿ ಏನೆಲ್ಲಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು? ಇಡೀ ರಥಯಾತ್ರೆ ಸ್ವರೂಪ, ಜಲ ಸಂಗ್ರಹ, ಮುಖಂಡರ ಪಾಲ್ಗೊಳ್ಳುವಿಕೆ ಇತ್ಯಾದಿ ಅಂಶಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಜನತಾ ಪತ್ರಿಕೆ
ನಾಡು ನುಡಿ ನೆಲ ಜಲ ಇತ್ಯಾದಿ ಜನಪರ ವಿಷಯ ವಿಶ್ಲೇಷಣೆ ಹೊಂದಿರುವ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ‘ಜನತಾ ಪತ್ರಿಕೆ ‘ ಚಂದಾದಾರಿಕೆ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ವಾರ್ಷಿಕ 300 ರೂ. ಚಂದಾ ಸ್ವೀಕಾರ ಮಾಡುವ ಬಗ್ಗೆ ನಿರ್ಣಯ ಕೈಗೊಂಡು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪತ್ರಿಕೆಯನ್ನು ಪ್ರಸರಣ ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಜೆಪಿ ಅವರ ಹೆಸರಿನಲ್ಲಿ ಗ್ರಂಥಾಲಯ
ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಹೆಸರಿನಲ್ಲಿ ಜಗತ್ತಿನ ಅತ್ಯುತ್ತಮ ಪುಸ್ತಕಗಳ ಗ್ರಂಥಾಲಯವನ್ನು ಸ್ಥಾಪನೆ ಮಾಡುವ ಬಗ್ಗೆಯೂ ಸಭೆ ನಿರ್ಧಾರ ಕೈಗೊಂಡಿತು. ಜತೆಗೆ ಡಿಜಿಟಲ್ ಗ್ರಂಥಾಲಯವನ್ನೂ ಕೂಡ ಸ್ಥಾಪನೆ ಮಾಡಲಾಗುವುದು.
ಸುಧಾಕರ್ ಶೆಟ್ಟಿ ನೇಮಕ
ಜೆಡಿಎಸ್ ನ ಕರ್ನಾಟಕ ಕೈಗಾರಿಕೆ ಹಾಗೂ ವಾಣಿಜ್ಯ ಘಟಕದ ಅಧ್ಯಕ್ಷರನ್ನಾಗಿ ಪಕ್ಷದ ಹಿರಿಯ ಮುಖಂಡ ಸುಧಾಕರ್ ಶೆಟ್ಟಿ ಅವರನ್ನು ನೇಮಕ ಮಾಡಿ, ನೇಮಕಾತಿ ಆದೇಶವನ್ನು ಸಭೆಯಲ್ಲಿ ಕೊಡಲಾಯಿತು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಮಾಜಿ ಶಾಸಕ ಟಿಎ ಶರವಣ, ಶಾಸಕ ವೆಂಕಟರಾವ್ ನಾಡಗೌಡ, ಹಿರಿಯ ನಾಯಕಿ ರುತ್ ಮನೋರಮಾ, ಮಾಜಿ ಸಚಿವ ಸಿ ಎಸ್ ಪುಟ್ಟರಾಜು, ಗಾಂಧಿನಗರ ನಾರಾಯಣಸ್ವಾಮಿ, ಸುಧಾಕರ್ ಶೆಟ್ಟಿ, ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಲ್ಸನ್ ರೆಡ್ಡಿ, ಶಾಸಕ ಶ್ರೀಕಂಠೇಗೌಡ, ಕೆ ಎಂ ತಿಮ್ಮರಾಯಪ್ಪ, ಶಾಸಕ ಕೆ ಎ ತಿಪ್ಪೇಸ್ವಾಮಿ, ಸಮೃದ್ಧಿ ಮಂಜುನಾಥ್, ನಾಸಿರ್ ಭಗವಾನ್ ಭಾಗಿಯಾಗಿದ್ದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದೇನು?
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಅದರಲ್ಲೂ ಕೈವಾರ ಪುಣ್ಯಕ್ಷೇತ್ರ ಬಳಿ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆದಿದೆ. ನಾಡಿನ ಪ್ರಗತಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.ಪಕ್ಷ ಸಂಘಟನೆ, ಜನತಾ ಜಲಧಾರೆ ಇತ್ಯಾದಿ ಅಂಶಗಳ ಬಗ್ಗೆ ಮಾತುಕತೆ ನಡೆಯಿತು ಎಂದು ಮಾಜಿ ಮುಖ್ಯಮಂತ್ರಿ ಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.