ಕೋವಿಡ್ ಮೂಡ್ ನಿಂದ ಹೊರಬಂದ ಜನ
by GS Bharath Gudibande
ಗುಡಿಬಂಡೆ: ತಾಲೂಕಿನ ಎಲ್ಲೋಡು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಹ್ಮ ರಥೊತ್ಸವ ಭಾನುವಾರ ಸಂಭ್ರಮದಿಂದ ನಡೆಯಿತು.
ಮಾಘಮಾಸದ ಅಂಗವಾಗಿ ನಡೆಯುವ ಈ ರಥೋತ್ಸವಕ್ಕೆ ತಹಸೀಲ್ದಾರ್ ಸಿಬ್ಗತ್ ವುಲ್ಲ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿಲಾಯಿತು.
ಪ್ರತಿ ವರ್ಷದಂತೆ ಮಾಘ ಮಾಸದಲ್ಲಿ ನಡೆಯುವ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಸ್ಥಾನದಲ್ಲಿ ರಥೋತ್ಸದ ಅಂಗವಾಗಿ ಬೆಳಗಿನ ಜಾವದಿಂದಲೇ ವಿಶೇಷ ಪ್ರಾರ್ಥನೆ, ಧಾರ್ಮಿಕ ವಿಧಿ ವಿಧಾನಗಳು, ಪೂಜಾ ಕೈಂಕರ್ಯಗಳು ಹಾಗೂ ಮಹಾ ಮಂಗಳಾರತಿ ನಡೆಯಿತು.
ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಪಲ್ಲಕ್ಕಿಯಲ್ಲಿ ಲಕ್ಷ್ಮೀ ಆದಿನಾರಾಯಣಸ್ವಾಮಿ ಉತ್ಸವಮೂರ್ತಿಯನ್ನು ಮಂಗಳವಾದ್ಯ ಹಾಗೂ ಭಕ್ತರ ಜಯ ಘೋಷಗಳ ಮೂಲಕ ವಿವಿಧ ಹೂವುಗಳಿಂದ ನಿಂತಿದ್ದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ರಾಜ್ಯ ಮತ್ತು ನೆರೆಯ ನೆರೆಯ ಆಂಧ್ರ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಾವಿರಾರು ಭಕ್ತರ ಸಮೂಹ ಗೋವಿಂದ ಗೋವಿಂದ ಜಯಘೋಷಗಳೊಡನೆ ರಥವನ್ನು ಎಳೆದು ಭಕ್ತಿಭಾವ ಮೆರೆದರು. ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೆ ಸಾವಿರಾರು ಜನ ಪಾಲ್ಗೊಂಡಿದ್ದರು.
ಮಜ್ಜಿಗೆ ಪಾನಕ ಪ್ರಸಾದ ವಿತರಣೆ
ದೇವಾಲಯದ ಆವರಣದಲ್ಲಿ ಬಿಸಿಲಿನಲ್ಲಿ ಧಣಿದ ಭಕ್ತಾಧಿಗಳಿಗೆ ಮಜ್ಜಿಗೆ ಪಾನಕ ವಿತರಿಸಲಾಯಿತು. ದೇವರಲ್ಲಿ ಹರಕೆ ಹೊತ್ತ ಭಕ್ತರು ಸಹ ಮಜ್ಜಿಗೆ, ಪಾನಕ, ಕೋಸುಂಬರಿ ಹಾಗೂ ಪ್ರಸಾದವನ್ನು ವಿನಿಯೋಗ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿಬ್ಗತ್ ವುಲ್ಲಾ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ಸಿಪಿಐ ಲಿಂಗರಾಜು, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಪೊಲೀಸ್ ಇಲಾಖೆ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ರಾಜಕೀಯ ಗಣ್ಯರು ಭಾಗವಹಿಸಿದ್ದರು.
ವಿವಿಧ ಸಂಘ ಸಂಸ್ಥೆಗಳು ಅನ್ನದಾಸೋಹವನ್ನು ಏರ್ಪಡಿಸಿದ್ದವು. ಈ ಜಾತ್ರೆಯಲ್ಲಿ ರಥೋತ್ಸವಕೆ ಹಣ್ಣು ಮತ್ತು ಧವಸವನ್ನು ರಥಕ್ಕೆ ಎಸೆದು ಭಕ್ತಿ ಭಾವವನ್ನು ಪ್ರದರ್ಶಿಸಿದರು.
ಜಾತ್ರೆ, ರಥೋತ್ಸವದ ಅಂಗವಾಗಿ ಈ ಬಾರಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಜಾತ್ರೆ ಎಂಬ ಬದುಕ ಸಂಭ್ರಮ ಹಾದಿಯುದ್ದಕ್ಕೂ ಕಾಮನಬಿಲ್ಲಿನ ರಂಗು ಮೂಡಿಸಿರೋ ಅಂಗಡಿಗಳ ಸಾಲು
ಸುಬ್ಬರಾಯಪ್ಪ, ಕವಿ, ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು /ಗುಡಿಬಂಡೆ
ಚೆಂದ ಚೆಂದದ ಬಟ್ಟೆ ತೊಟ್ಟು ದೇವರಿಗೆ ಕೈ ಮುಗಿದು ತೇರಿಗೆ ಬಾಳೆಹಣ್ಣು ಬೀರುವ ಭಾವಗಳ ತೇರು
ಚಿತ್ರ ವಿಚಿತ್ರದ ಕನ್ನಡಕಗಳ ಹಾಕಿ ಫೀ ಎಂದು ಪೀಪಿ ಊದುತ್ತಾ ಹೋಗುವ ಹುಡುಗರ ಹಾರಾಟ, ಬಳೆ, ಸರ ಒಲೆ ,ಜುಮುಕಿಗಳ ಹಿಂದೆ ಓಡುವ ಹುಡುಗಿಯರ ಸಡಗರ. ಉಸಿರುಬುಡ್ಡೆಯ ಮಾರುವವನ ಹಿಂದಿರುವ ಚಿಲ್ಟೂ ಪಲ್ಟುಗಳು, ಬದುಕಿನ ಹಾಗೆ ಮೇಲೆ ಕೆಳಗೆ ಹೋಗ್ತಾನೆ ಇರುವ ಜಾತ್ರೆಯ ರಾಟೆ, ಪಾನಕ ಕೋಸಂಬರಿ ಕೊಡುವೆಡೆಗೆ ಮೊಮ್ಮಗನನ್ನು ಎಳೆದೊಯ್ಯುವ ತಾತ ಹೀಗೇ ಸಾಗುತ್ತಲೇ ಇರುತ್ತವೆ.”ಜಾತ್ರೆಯೊಂದೇ ಚಿತ್ತಾರಗಳು ನೂರು”