ರಕ್ಕಸ ರೂಪ ತಾಳಿದ ರಷ್ಯಾ ಸೇನೆ
ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ, ಅಂತರಾಷ್ಟ್ರೀಯ ಸಮುದಾಯದ ವಿರೋಧ, ಸಂಧಾನ ಮಾತುಕತೆ ನಡುವೆಯೂ ರಷ್ಯಾ ಉಕ್ರೇನ್ ಮೇಲಿನ ಆಕ್ರಮಣವನ್ನು ತೀವ್ರಗೊಳಿಸಿದೆ.
ಎರಡು ದೇಶಗಳ ನಡುವಿನ ಯುದ್ಧ ಐದನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ದೇಶಾದ್ಯಂತ ವಾಯುದಾಳಿ, ಕ್ಷಿಪಣಿ ಪ್ರಯೋಗ, ಗುಂಡಿನ ಚಕಮಕಿ ಮುಂದುವರೆದಿದೆ.
ಈ ವರೆಗಿನ ಹೋರಾಟದಲ್ಲಿ 352 ಉಕ್ರೇನ್ ನಾಗರೀಕರು ಮೃತಪಟ್ಟಿದ್ದು, ಎರಡೂ ಕಡೆ ಸಾಕಷ್ಟು ಜೀವ ಹಾನಿಯಾಗಿದೆ. ಅಪಾರ ಪ್ರಮಾಣ ಆಸ್ತಿ ನಷ್ಟವಾಗಿದೆ.
ಉಕ್ರೇನಿಯರು ಜೀವ ಭಯದಿಂದ ಮೆಟ್ರೋ ನಿಲ್ದಾಣಗಳ ಕೆಳ ಮಹಡಿ, ಬಂಕರ್ ಹಾಗೂ ಸುರಂಗ ಮಾರ್ಗಗಳಲ್ಲಿ ಅಡಗಿ ಕುಳಿತಿದ್ದಾರೆ.
ಅಡಗಿ ಕುಳಿತಿದ್ದವರಿಗೆ ಆಹಾರ, ನೀರು, ಜೀವರಕ್ಷಕ ಔಷಗಳ ಕೊರತೆ ಕಾಡುತ್ತಿದೆ. ವಿಶ್ವಸಂಸ್ಥೆಯ ನಿರಾಶ್ರಿತರ ಪುನರ್ವಸತಿ ತಂಡ ಉಕ್ರೇನ್‍ಗೆ ತಲುಪಿದೆಯಾದರೂ ರಷ್ಯಾದ ಆಕ್ರಮಣದಿಂದ ಸಂತ್ರಸ್ಥರಿಗೆ ನೆರವು ನೀಡಲು ಸಾಧ್ಯವಾಗುತ್ತಿಲ್ಲ,ಒಟ್ಟಾರೆ ಜೀವನ ದುಸ್ತರವಾಗಿದೆ.
ಈ ನಡುವೆ ಉಕ್ರೇನ್‍ನಲ್ಲಿ ನೆಲೆಸಿದ್ದ ವಿದೇಶಿಗರು ಹಾಗೂ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಪ್ರಕ್ರಿಯೆ ತ್ರಾಸದಾಯಕವಾಗಿ ಮುಂದುರೆದಿದೆ. ರಷ್ಯಾ ವಿದೇಶಿಗಳ ಸ್ಥಳಾಂತರಕ್ಕೆ ರಾಜತಾಂತ್ರಿಕ ಮಾತುಕತೆಯ ಮೂಲಕ ಸಹಕಾರ ನೀಡುತ್ತಿದೆ.
ರಷ್ಯಾ ಈಗಾಗಲೇ ಕ್ಯಿವ್ ಮತ್ತು ಕರ್ಕಿವ್ ನಗರಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದಾಗಿ ಘೋಷಣೆ ಮಾಡಿದೆ. ಆದರೆ ಉಕ್ರೇನ್ ಇದನ್ನು ನಿರಾಕರಿಸಿ, ದೇಶದ ಎಲ್ಲಾ ಭಾಗಗಳು ಈವರೆಗೂ ತಮ್ಮ ಹಿಡಿತದಲ್ಲೇ ಇವೆ ಎಂದು ಸ್ಪಷ್ಟ ಪಡಿಸಿದೆ.
ರಷ್ಯಾ ಜನವಸತಿ ಪ್ರದೇಶದ ಮೇಲೆ ದಾಳಿ ಮಾಡಿದೆ. ಝ್ಯಟೋಮ್ಯಾರ್ ನಗರದ ಐತಿಹಾಸಿಕ ಕಟ್ಟಡ ಮತ್ತು ಸಿನಿಮಾ ಮಂದಿರ ಸೆಲ್ ದಾಳಿಯಿಂದ ಧ್ವಂಸಗೊಂಡಿದೆ. ಚೆರ್ನಿವ್ ನಗರದ ಮೇಲೆ ಕ್ಷಿಪಣಿ ಅಪ್ಪಳಿಸಿದ್ದರಿಂದ ಜನವಸತಿ ಕಟ್ಟಡ ಹಾನಿಯಾಗಿದೆ.