ಭಾರೀ ಅಂತರದಿಂದ ರಷ್ಯಾ ಆಟಗಾರ್ತಿಯನ್ನು ಮಣಿಸಿ ಉಕ್ರೇನ್ʼನ ಎಲಿನಾ
ಮೆಕ್ಸಿಕೊ ಸಿಟಿ: ಒಂದೆಡೆ ಉಕ್ರೇನ್ ಮೇಲೆ ರಷ್ಯಾ ರಕ್ಕಸ ದಾಳಿ ನಡೆಸಿ ಮಾರಣಹೋಮ ನಡೆಸುತ್ತಿದ್ದರೆ ಮತ್ತೊಂದೆಡೆ ಟೆನಿಸ್ ಟೂರ್ನಿಯಲ್ಲಿ ಉಕ್ರೇನ್ ಮುಂದೆ ರಷ್ಯಾ ಸೋತು ಸುಣ್ಣವಾಗಿದೆ.
ಇಂದಿಲ್ಲಿ ನಡೆದ ಮೊಂಟರಿ ಟೆನಿಸ್ ಟೂರ್ನಿಯಲ್ಲಿ ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಅವರು ರಷ್ಯಾದ ಎದುರಾಳಿ ಅನಸ್ತಾನಿಯಾ ಪೊಟಪೋವಾ ಅವರನ್ನು ಭಾರೀ ಅಂತರದಲ್ಲಿ ಮಣಿಸಿದ್ದಾರೆ.
ಈ ಸೋಲು ರಷ್ಯಾಕ್ಕೆ ಆಘಾತ ಉಂಟು ಮಾಡಿದ್ದರೆ, ಉಕ್ರೇನ್ ದೇಶದ ಜನರು ದುಃಖದ ನಡುವೆಯೂ ಈ ಗೆಲುವಿನ ನಗೆ ಬೀರಿದ್ದಾರೆ. ತಮ್ಮ ದೇಶದ ರಾಷ್ಟ್ರಧ್ವಜದ ಬಣ್ಣ ಹಳದಿ ಮತ್ತು ನೀಲಿ ಉಡುಪು ಧರಿಸಿ ಕಣಕ್ಕಿಳಿದ ಎಲಿನಾ ಅವರು 6-2, 6-1 ಸೆಟ್ಟುಗಳ ಅಂತರದಲ್ಲಿ ಅನಸ್ತಾನಿಯಾ ಅವರನ್ನು ಸೋಲಿಸಿದರು.
ಒಂದೆಡೆ ಯುದ್ಧದಲ್ಲಿ ತಮ್ಮ ದೇಶದ ಜನರ ನೆತ್ತರು ಬಗೆಯುತ್ತಿದ್ದ ರಷ್ಯಾದ ವಿರುದ್ಧ ಆಡಲು ಮೊದಲು ಒಲ್ಲದ ಎಲಿನಾ, ನಂತರ ತನ್ನ ದೇಶಕ್ಕಾಗಿ ಏನಾದರೂ ಮಾಡಲೇಬೇಕು ಎನ್ನುವ ದೃಢ ನಿಶ್ಚಯದಿಂದ ಕೋರ್ಟ್ʼಗೆ ಇಳಿದಿದ್ದರು.
ಗೆಲುವಿನ ನಂತರ ಮಾತನಾಡಿದ ಎಲಿನಾ, ಈ ಪಂದ್ಯದಿಂದ ಬರುವ ಸಂಭಾವನೆಯನ್ನು ಉಕ್ರೇನ್ ಸೇನೆಗೆ ಅರ್ಪಿಸುವುದಾಗಿ ಹೇಳಿ, ಬಿಕ್ಕಿಬಿಕ್ಕಿ ಅತ್ತರು. “ನನ್ನ ಹೃದಯದಿಂದ ಜಿನುಗುತ್ತಿರುವ ರಕ್ತ ನಿಲ್ಲುತ್ತಿಲ್ಲ” ಎಂದು ಕಂಬನಿ ಮಿಡಿದಿದ್ದಾರೆ. ಕೂಡಲೇ ಯುದ್ಧ ನಿಲ್ಲಬೇಕು ಎಂದು ಹೇಳಿದ್ದಾರೆ. ಎಲಿನಾ ಮಾತುಗಳನ್ನು ಕೇಳುತ್ತಲೇ ಪ್ರೇಕ್ಷಕರಿಂದ ತುಂಬಿ ತುಂಬಿಹೋಗಿದ್ದ ಟೆನಿಸ್ ಕ್ರೀಡಾಂಗಣ, “ಎಲಿನಾ.. ಲಾಂಗ್ ಲೀವ್, ಉಕ್ರೇನ್.. ಗಾಡ್ ಬ್ಲೆಸ್ ಯು” ಎಂದು ಕೂಗಿದರು.