ಚೊಚ್ಚಲ ಬಜೆಟ್ ಮಂಡಿಸಿದ ಬೊಮ್ಮಾಯಿ; ಕೃಷಿ, ನೀರಾವರಿ, ಶಿಕ್ಷಣಕ್ಕೆ ಒತ್ತು; ಕೋವಿಡ್ ನೆಪವೊಡ್ಡಿ ಮುಂಗಡ ಪತ್ರದ ಗಾತ್ರವನ್ನು ಶೇ.25 ಮಿತಿ ದಾಟಿಸಿದ ಬೊಮ್ಮಾಯಿ
ಬೆಂಗಳೂರು: 2.65 ಲಕ್ಷ ಕೋಟಿ ಗಾತ್ರದ ಚೊಚ್ಚಲ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದು; ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಸಮಾಜ ಕಲ್ಯಾಣ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
ಒಟ್ಟು ಆಯವ್ಯಯದ ಗಾತ್ರವನ್ನು 2,65,720 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದ್ದು, ಈ ಬಾರಿ 14,699 ಕೋಟಿ ರೂ. ರಾಜಸ್ವ ಕೊರತೆ ಮತ್ತು 61,564 ಕೋಟಿ ವಿತ್ತೀಯ ಕೊರತೆಯನ್ನು ಅಂದಾಜಿಸಲಾಗಿದೆ. ಮುಂದಿನ ಆರ್ಥಿಕ ವರ್ಷಕ್ಕೆ 5,18,366 ಕೋಟಿ ರೂ.ಗಳ ಸಾಲದ ಗಾತ್ರ ಹೆಚ್ಚಾಗಲಿದ್ದು, ಇದು ಜಿಡಿಪಿಯ ಶೇ.27.49ರಷ್ಟು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಸಾಲದ ಗಾತ್ರ ಜಿಡಿಪಿಯ ಶೇ.25ರ ಒಳಗೆ ಮಿತಿಯಲ್ಲಿರಬೇಕು ಎಂಬ ನಿಯಮವಿದೆ. ಕೊರೊನಾದಿಂದಾಗಿ ಇದನ್ನು ಸಡಿಲಿಸಲಾಗಿದ್ದು, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅನಿಯಮ -2002ಕ್ಕೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.
2022-23ರಲ್ಲಿ ಕೇಂದ್ರ ಸರ್ಕಾರದಿಂದ ಜಿಎಸ್‍ಟಿ ನಷ್ಟ ಪರಿಹಾರ ಸೇರಿದಂತೆ ಒಟ್ಟು ರಾಜಸ್ವ ಸಂಗ್ರಹವನ್ನು 1,31,833 ಕೋಟಿ ರೂ.ಗಳೆಂದು ಅಂದಾಜು ಮಾಡಿದ್ದಾರೆ. ತೆರಿಗೆಯೇತರ ರಾಜಸ್ವದಿಂದ 10,941 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನಿಂದ 29,783 ಕೋಟಿ ಸಹಾಯ ಧನದ ರೂಪದಲ್ಲಿ 17,281 ಕೋಟಿ ನೆರವನ್ನು ಅಂದಾಜಿಸಲಾಗಿದೆ.
ಕಳೆದ ಸಾಲಿನಲ್ಲಿ 2,43,734 ಕೋಟಿ ರೂ. ಗಾತ್ರದ ಬಜೆಟ್‍ಗೆ ಹೋಲಿಸಿದರೆ ಜಮೆಯ ಗಾತ್ರ 2.57 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಬಜೆಟ್‍ನ ಪರಿಷ್ಕೃತ ಅಂದಾಜು ವೆಚ್ಚ 2,53,165 ಕೋಟಿ ರೂ.ಗಳಾಗಿದ್ದು, ಇದು ಶೇ.7.7ರಷ್ಟು ಹೆಚ್ಚಳವಾಗಿದೆ.
ಇಲಾಖಾವಾರು ಹಂಚಿಕೆ: ಶಿಕ್ಷಣ ಇಲಾಖೆಗೆ 31,980ಕೋಟಿ , ಜಲಸಂಪನ್ಮೂಲ 20,601, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ 15,325, ನಗರಾಭಿವೃದ್ಧಿ 16,076, ಕಂದಾಯ 14,388, ಆರೋಗ್ಯ ಮತ್ತು ಕುಟುಂಬ ಕಲ್ಯಾಣ 13,982 , ಇಂಧನ 12,655, ಒಳಡಾಳಿತ ಮತ್ತು ಸಾರಿಗೆ 11,272 , ಲೋಕೋಪಯೋಗಿ 10,447, ಸಮಾಜ ಕಲ್ಯಾಣ 9,381, ಕೃಷಿ ಮತ್ತು ತೋಟಗಾರಿಕೆ 8,457, ಮಹಿಳಾ ಮತ್ತು ಮಕ್ಕಳ ಕಲ್ಯಾಣ 4,713, ವಸತಿ 3,590, ಆಹಾರ ಮತ್ತು ನಾಗರಿಕ ಪೂರೈಕೆ 2,988, ಇತರೆ 93,676 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.