ಯುದ್ಧಭೂಮಿಯಿಂದ ಏರ್‌ಲಿಫ್ಟ್ ಆದ ಚಿಕ್ಕಬಳ್ಳಾಪುರ ವಿದ್ಯಾರ್ಥಿಗಳು; ಹತ್ತು ದಿನಗಳ ನರಕಯಾತನೆ ಬಿಡಿಸಿಟ್ಟ ಹುಡುಗರು
by GS Bharath Gudibande
ಚಿಕ್ಕಬಳ್ಳಾಪುರ: ಯುದ್ಧಪೀಡಿತ ಉಕ್ರೇನ್’ನಿಂದ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿದ್ದಾರೆ. ಶನಿವಾರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈ ಇಬ್ಬರು ವಿದ್ಯಾರ್ಥಿಗಳು ಪೋಷಕರನ್ನು, ಕುಟುಂಬದವರನ್ನು ಕಂಡ ಕೂಡಲೇ ಭಾವಪರವಶರಾದರು. ಅಲ್ಲದೆ, ಇವರಿಬ್ಬರೂ ಸುರಕ್ಷಿತವಾಗಿ ವಾಪಸ್ಸಾಗಿದ್ದು, ಕುಟುಂಬ ಸದಸ್ಯರಿಗೆ ನಿರಾಳತೆ ತಂದಿದೆ.
ಶನಿವಾರ ಉಕ್ರೇನ್ ಗಡಿ ಪ್ರದೇಶದಿಂದ ಕೇಂದ್ರ ಸರಕಾರ ಯಶಸ್ವಿಯಾಗಿ ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಏರ್ ಲಿಫ್ಟ್ ಮಾಡುತ್ತಿದ್ದು, ಜಿಲ್ಲೆಯ ಹತ್ತಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. ಗುಡಿಬಂಡೆಯ ನವನೀತ್ ಕುಮಾರ್ ಮತ್ತು ಗೌರಿಬಿದನೂರು ಮೂಲದ ಗೌತಮ್ ಎಂಬ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತಲುಪಿದ್ದಾರೆ.
ರಾಯಭಾರ ಕಚೇರಿಯಿಂದ ಬಸ್, ಊಟದ ವ್ಯವಸ್ಥೆ
ಅಲ್ಲಿನ ವಾತವರಣದ ಉಷ್ಣಾಂಶ -3 ಮತ್ತು -4 ಡಿಗ್ರಿ ಇತ್ತು, ಅದರಲ್ಲಿ ನಾವು 9 ಗಂಟೆ ಬ್ಯಾಗ್’ಗಳನ್ನು ಹೊತ್ತುಕೊಂಡು ಕ್ಯೂನಲ್ಲಿದ್ದರೂ ಭಾರತೀಯರಿಗೆ ಯಾರಿಗೂ ಅವಕಾಶ ಸಿಗಲಿಲ್ಲ. ಉಕ್ರೇನ್ ಮತ್ತು ಬೇರೆ ದೇಶದವರನ್ನು ರ್ಬೋಡಿಂಗ್’ಗೆ ಕಳುಹಿಸುತ್ತಿದ್ದರು. ಮಾಲ್ದೋವಾ ಕ್ರಾಸ್ ಮಾಡಿದ ನಂತರ ಏನು ಸಮಸ್ಯೆ ಆಗಲಿಲ್ಲ. ಅಲ್ಲಿ ನಮ್ಮ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಭಾರತೀಯ ರಾಯಭಾರ ಕಚೇರಿಯಿಂದ ಪಿಶೋಚಿನ್ ಪ್ರದೇಶದಿಂದ ಬಸ್ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ನಮ್ಮನ್ನು ಸುರಕ್ಷತವಾಗಿ ಕರೆದುಕೊಂಡು ಬಂದಿದ್ದಾರೆ. ಅಲ್ಲಿನ ರಾಯಭಾರ ಕಚೇರಿ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ವಿದ್ಯಾರ್ಥಿಗಳಿಬ್ಬರು ತಿಳಿಸಿದರು.
ಉಕ್ರೇನ್’ನಲ್ಲಿ ನನ್ನ ಜೊತೆ ರಾಜ್ಯದ 8 ವಿದ್ಯಾರ್ಥಿಗಳು ಇದ್ದರು. ಈಗ ನಮ್ಮಲ್ಲಿ ಮೂವರು ಮಾತ್ರ ಭಾರತಕ್ಕೆ ವಾಪಸ್ ಬಂದಿದೇವೆ. ಉಳಿದವರು ಹಿಂದೆಯೇ ಬರುತ್ತಿದ್ದಾರೆ, ಹಾಗೆ ನೋಡಿದರೆ ಉಕ್ರೇನ್ ಒಂದು ಶಾಂತಿಯುತ, ಅಭಿವೃದ್ಧಿಶೀಲ ದೇಶವಾಗಿತ್ತು. ಹತ್ತು ದಿನಗಳಿಂದ ಯುದ್ಧ ಸಂಭವಿಸಿ ಅಶಾಂತಿ ನಿರ್ಮಾಣವಾಗಿದೆ ಎಂದು ಇಬ್ಬರೂ ವಿದ್ಯಾರ್ಥಿಗಳು ಹೇಳಿದರು.
ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾ ಸೇನೆ ಮತ್ತು ಉಕ್ರೇನ್ ಸೇನೆ ಏನಾದರೂ ತೊಂದರೆ ಕೊಟ್ಟರಾ? ಎನ್ನುವ ಪ್ರಶ್ನೆಗೆ; ನಮಗೆ ಅಂತಹ ಅನುಭವ ಆಗಿಲ್ಲ, ನಮಗೆ ಯಾವುದೇ ಸಮಸ್ಯೆ ಮಾಡದೇ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ ಎಂದು ಅವರು ಉತ್ತರಿಸಿದರು.
ಯುದ್ದ ಆರಂಭದ ದಿನದಿಂದ ನಾವು ಬಂಕರ್ʼಗಳಲ್ಲೇ ಅಡಗಿದ್ದೆವು. ಊಟದ ಸಮಸ್ಯೆ ಇತ್ತು. ಉಕ್ರೇನ್ ಗಡಿ ಪ್ರದೇಶದಲ್ಲಿ ನಮಗೆ ಹೆಚ್ಚು ಸಮಸ್ಯೆ ಆಗಿತ್ತು. ಬಾಂಬ್, ಶೆಲ್ ಮತ್ತು ಕ್ಷಿಪಣಿ ಶಬ್ದ ಬರುತ್ತಿದಂತೆ ನಾವು ಬಂಕರ್ʼಗಳ ಒಳಕ್ಕೆ ಓಡಿ ಹೋಗುತ್ತಿದ್ದೆವು. 30ಕ್ಕೂ ಹೆಚ್ಚು ಬಾಂಬ್ ಶಬ್ದಗಳನ್ನು ನಾನು ಕೇಳಿದ್ದೇನೆ. 8 ದಿನ ಬಂಕರ್ ನಲ್ಲೇ ಇದ್ದೆ. ತುಂಬಾ ಭಯವಾಗಿತ್ತು. ಉಕ್ರೇನ್ ನಲ್ಲಿರುವ ಎಲ್ಲರೂ ಸುರಕ್ಷಿತವಾಗಿ ಬರಬೇಕು ಹಾಗೂ ನಾನು ನಾಲ್ಕು ದಿನಗಳಿಂದ ಪ್ರಯಾಣ ಮಾಡುತ್ತಿದ್ದೇನೆ. ಸದ್ಯ ಮುಂದಿನ ಶಿಕ್ಷಣದ ಬಗ್ಗೆ ಏನೂ ಹೇಳಲಿಕ್ಕೆ ಆಗಲ್ಲ. ಆ ಬಗ್ಗೆ ಮುಂದೇನು ಎನ್ನುವ ಪ್ರಶ್ನೆ ಇದೆ. ಸ್ವಲ್ಪ ಸಮಯ ಕಾದು ನೋಡುವುದು ಉತ್ತಮ.
ಗೌತಮ್ / ಉಕ್ರೇನ್’ನಿಂದ ಬಂದ ಗೌರಿಬಿದನೂರು ವಿದ್ಯಾರ್ಥಿ
ಅಕ್ಕಪಕ್ಕದಲ್ಲಿ ಬಾಂಬಿಂಗ್ ಆದರೂ ಮನೆಯಲ್ಲಿ ಹೇಳ್ತಾ ಇರಲಿಲ್ಲ. ಯಾಕೆಂದರೆ ನಮ್ಮ ತಂದೆ-ತಾಯಿ ತುಂಬಾ ಭಯಪಟ್ಟಿದ್ದರು. ಹಾಗಾಗಿ ಅವರಿಗೆ ಸ್ವಲ್ಪ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆ. ಯುದ್ದ ಆರಂಭವಾದ ನಂತರ ನಾವು ಬಂಕರ್ ಗಳಲ್ಲೇ ಜೀವನ ಮಾಡಬೇಕಾಗಿತ್ತು. ಊಟ ಮತ್ತು ನೀರಿಗೆ ಸಮಸ್ಯೆ ಇತ್ತು. ನಂತರ ಭಾರತ ಸರಕಾರ ನಮ್ಮನ್ನು ಗಡಿ ಪ್ರದೇಶಕ್ಕೆ ಬರುವಂತೆ ಸೂಚನೆ ನೀಡಿತು. ಅದರಂತೆ ಹಂತ ಹಂತವಾಗಿ ಉಕ್ರೇನ್ ಗಡಿ ಪ್ರದೇಶ ತಲುಪಿ ಅಲ್ಲಿಂದ ಭಾರತಕ್ಕೆ ಬಂದೆವು.
ನವನೀತ್ ಕುಮಾರ್, ಉಕ್ರೇನ್ʼನಿಂದ ಬಂದ ಗುಡಿಬಂಡೆ ವಿದ್ಯಾರ್ಥಿ