ಯಾರಿಗೆ ಕಾಮಧೇನು? ಯಾರಿಗೆ ಅಕ್ಷಯ ಪಾತ್ರೆ? ಮಾಹಿತಿ ಕಲೆ ಹಾಕಿರುವ ವರಿಷ್ಠರು; ರಾಷ್ಟ್ರೀಯ ಸ್ಥಾನಮಾನದ ಲಾಬಿಗೆ ಬ್ರೇಕ್
ಬೆಂಗಳೂರು: ರಾಜಕಾರಣಿಗಳು ಮತ್ತು ಗುತ್ತಿಗೆದಾರರ ಪಾಲಿನ ಅಕ್ಷಯಪಾತ್ರೆ, ಕಾಮಧೇನು ಆಗಿರುವ ಎತ್ತಿನಹೊಳೆ ಯೋಜನೆಯ ಅಸಲಿ ಬಣ್ಣ ಕಳಚುವ ದಿನಗಳು ಹತ್ತಿರದಲ್ಲೇ ಇವೆ.
ಮತ್ತೊಮ್ಮೆ ಅಂದಾಜು ವೆಚ್ಚವನ್ನು ಏರಿಸಿಕೊಂಡು, ರಾಷ್ಟ್ರೀಯ ಯೋಜನೆ ಸ್ಥಾನಮಾನಕ್ಕಾಗಿ ಹೊಂಚು ಹಾಕುತ್ತಾ ಗುತ್ತಿಗೆದಾರರ ಜೇಬು ತುಂಬಿಸಲೆಂದೇ ಇರುವ ಎತ್ತಿನಹೊಳೆ ವ್ಯವಹಾರ ಈಗ ಭಾರೀ ಸದ್ದು ಮಾಡುತ್ತಿದ್ದು, ಮುಖ್ಯವಾಗಿ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ʼಕೆಲವರʼ ನಿದ್ದೆಗೆಡಿಸಿದೆ.
ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ನೀರು ಹರಿಸುವ ಈ ಯೋಜನೆಯ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿದ್ದು, ಎರಡೂ ಜಿಲ್ಲೆಗಳ ಜನರಿಗೆ ಮೂರು ನಾಮ ಹಾಕುವ ʼಬರೀ ಹೋಳುʼ ಎನ್ನುವಂಥ ಈ ಯೋಜನೆ ಹಿಂದಿರುವ ʼಐನಾತಿ ಕುಳʼಗಳ ಬುಡಕ್ಕೆ ನೀರು ಬರುವ ಎಲ್ಲ ಸಾಧ್ಯತೆಗಳು ನಿಶ್ಚಳವಾಗಿದೆ.
ಎತ್ತಿನಹೊಳೆ ಯೋಜನೆ ಬಗ್ಗೆ ಪದೇಪದೆ ಆಕ್ಷೇಪಗಳು, ಅನುಮಾನಗಳು ವ್ಯಕ್ತವಾಗುತ್ತಿರುವುದು, ಮನಸೋ ಇಚ್ಛೆ ಡಿಪಿಆರ್ ಮಾಡಿ ವೆಚ್ಚವನ್ನು ಏರಿಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಅಲರ್ಟ್ ಆಗಿದೆ. ಈಗಾಗಲೇ ಸಾವಿರಾರು ಕೋಟಿ ರೂಪಾಯಿ ನುಂಗಿ ನೀರು ಕುಡಿದಿರುವ ಈ ಯೋಜನೆಯತ್ತ ಕಣ್ಣು ಹಾಕಿರುವ ದಿಲ್ಲಿ ಬಿಜೆಪಿಗರು, ಯೋಜನೆ ಹೆಸರಿನಲ್ಲಿ ʼಎತ್ತುವಳಿʼ ಮಾಡಿದವರ ವಿವರಗಳನ್ನು ತರಿಸಿಕೊಂಡಿದೆ ಎನ್ನುವುದು ಹೊಸ ಬ್ರೇಕಿಂಗ್ ನ್ಯೂಸ್. ಈ ಬಗ್ಗೆ ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಮಾಹಿತಿ ಸಿಕ್ಕಿದೆ.
ಚಿಕ್ಕಬಳ್ಳಾಪುರ-ಕೋಲಾರ ನೀರು ಬರುವುದಿಲ್ಲ ಎನ್ನುವುದು ಗೊತ್ತಿದ್ದರೂ, ಸ್ವತಃ ಕೇಂದ್ರ ಜಲ ಆಯೋಗವೇ ಯೋಜನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ ಕೇಳದೇ ಖಾಸಗಿ ಏಜೆನ್ಸಿಯಿಂದ ಡಿಪಿಆರ್ ಮಾಡಿಸಿ ಅತೀವ ಆಸಕ್ತಿ ತೋರಿಸಿ, ಅಡಿಗಲ್ಲು ಹಾಕಿಸಿ ಈವರೆಗೂ ಹತ್ತು ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ವೆಚ್ಚ ಮಾಡಿಸಿರುವ ಯೋಜನೆ ಅನುಮಾನಗಳ ಆಗರವಾಗಿದೆ. ಈ ಅಂಶವೂ ಬಿಜೆಪಿ ಹೈಕಮಾಂಡ್ ಗಮನಕ್ಕೆ ಹೋಗಿದೆ.
ಅಲ್ಲದೆ; ಎತ್ತಿನಹೊಳೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನಕ್ಕೆ ಲಾಬಿ ಮಾಡುತ್ತಿರುವ ಪ್ರಭಾವೀ ರಾಜಕಾರಣಿಗಳ ಬಗ್ಗೆಯೂ ಹೈಕಮಾಂಡ್ ಕಣ್ಣಿಟ್ಟಿದೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಾಶವಾಗುತ್ತಿರುವ ಜಲ ಮೂಲಗಳು, ಕಲ್ಲು ಬಂಡೆಗಳ ಲೂಟಿ ಹಾಗೂ ಪರಿಸರ ಸಂಪತ್ತು ನಾಶದ ಬಗ್ಗೆಯೂ, ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ಬಿಜೆಪಿ ವರಿಷ್ಠರಿಗೆ ದೂರು ಹೋಗಿದೆ.
ಜೆಡಿಎಸ್ ಎಂಟ್ರಿಯಿಂದ ಕುಳಗಳಿಗೆ ತಳಮಳ
ಇದೇ ವೇಳೆಯಲ್ಲಿ ಕೇವಲ ಎರಡು ಜಿಲ್ಲೆಗಳಿಗೆಂದು ರೂಪಿಸಲಾದ ಎತ್ತಿನಹೊಳೆ ಯೋಜನೆಯೂ ಕೆಲವರ ಜೇಬು ತುಂಬಿಸುವ ಕಾಮಧೇನುವಾಗಿದೆ ಎಂದು ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡರು ಕಲಾಪದಲ್ಲಿಯೇ ನೇರವಾಗಿ ದೂರಿದ್ದು ಕೆಲ ಐನಾತಿಗಳ ನಿದ್ದೆ ಹಾಳು ಮಾಡಿದೆ.
ಹಾಗೆಯೇ; ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಇದಕ್ಕೆ ದನಿಗೂಡಿಸಿದ್ದು, ಈ ಯೋಜನೆಯ ಫಲಾನುಭವಿಗಳಾಗಿರುವ ವಿವಿಧ ಪಕ್ಷಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿರುವ ಪ್ರಭಾವೀ ಕುಳಗಳಿಗೆ ತಳಮಳ ಶುರುವಾಗಿದೆ.
ಎತ್ತಿನಹೊಳೆ ಯೋಜನೆಗೆ 20,000 ಕೋಟಿ ರೂ. ಅಲ್ಲ, 50,000 ಕೋಟಿ ರೂ.ಗಳನ್ನು ಸುರಿದರೂ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ಒಂದು ಹನಿ ನೀರೂ ಹರಿಯುವುದಿಲ್ಲ. ಒಂದು ವೇಳೆ ಹರಿದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಸದನದಲ್ಲೇ ಭೋಜೇಗೌಡರು ಹೇಳಿದ್ದು ಎರಡೂ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳಿಗೆ ಕಣ್ಣುರಿ ಉಂಟು ಮಾಡಿದೆ.
ಎತ್ತಿನಹೊಳೆ ಎಂದರೆ ದುಡ್ಡು ಹೊಡೆಯುವ ಕಾರ್ಯಕ್ರಮವಾಗಿದೆ. ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳ ಜನರ ಹೆಸರಿನಲ್ಲಿ ಗುತ್ತಿಗೆದಾರರ ಜೇಬು ತುಂಬಿಸಲಾಗುತ್ತಿದೆಯೇ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಬಜೆಟ್ ಭಾಷಣದಲ್ಲೇ ನೇರ ಆರೋಪ ಮಾಡಿದ್ದರು.
ಪ್ರಸಕ್ತ ಬಜೆಟ್ʼನಲ್ಲಿ ಈ ಯೋಜನೆಗೆ 3,000 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಹಾಗೆ ನೋಡಿದರೆ ಮೊದಲಿಗೆ ಇವೆರಡೂ ಜಿಲ್ಲೆಗಳಿಗೆ ನೀರು ತರುವ ನಿರ್ಧಾರ ಮಾಡಿದ್ದು 2011-12ರಲ್ಲಿ. ಆಗ ಜಲ ಸಂಪನ್ಮೂಲ ಸಚಿವರಾಗಿದ್ದವರು ಈಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು. ನೀರಿನ ಲಭ್ಯತೆಯ ಖಾತರಿಯೇ ಇಲ್ಲದೆ ಲೋಕಸಭೆ ಚುನಾವಣೆ ಘೋಷಣೆ ಆದಾಗ ಚಿಕ್ಕಬಳ್ಳಾಪುರದಲ್ಲಿ ತರಾತುರಿಯಲ್ಲಿ ಕಾರ್ಯಕ್ರಮ ಮಾಡಿ ಶಂಕುಸ್ಥಾಪನೆ ಮಾಡಲಾಯಿತು. ಈಗ ನೀರು ಯಾವಾಗ ಬರುತ್ತದೆ ಎಂದು ಅವರು ಕೇಳಿದ್ದಾರೆ.
ನೇತ್ರಾವತಿ ನದಿಯಿಂದ ಮೂರು ಹಂತಗಳಲ್ಲಿ ನೀರನ್ನು ಬರಪೀಡಿತ ಜಿಲ್ಲೆಗಳಿಗೆ 24 ಟಿಎಂಸಿ ನೀರನ್ನು ಹರಿಸುವ ಈ ಯೋಜನೆಗೆ 2013ರಲ್ಲಿ 8,323 ಕೋಟಿ, 2014ರಲ್ಲಿ 12,912 ಕೋಟಿಗೆ ಎಸ್ಟಿಮೇಟ್ ಮಾಡಲಾಯಿತು. ಆದರೆ ಹತ್ತು ವರ್ಷ ಆದರೂ ಯೋಜನೆ ಇನ್ನೂ ತೆವಳುತ್ತಲೇ ಇದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಇಷ್ಟು ದಿನವಾದರೂ ಕೇವಲ ಲೈನ್ ಎಸ್ಟಿಮೇಟ್ ಮೂಲಕವೇ ಕಾಮಗಾರಿ ಮಾಡಲಾಗುತ್ತಿದೆ. ಇಷ್ಟಾದರೂ ಇಂದು ಹೊಸದಾಗಿ 3,000 ಕೋಟಿ ರೂ. ಹಣ ಇಡಲಾಗಿದೆ. ತುಮಕೂರಿನ ದೇವರಾಯನ ದುರ್ಗದಲ್ಲಿ 10 ಟಿಎಂಸಿ ನೀರು ಸಂಗ್ರಹಿಸಲು ಜಲಾಶಯ ಕಟ್ಟಬೇಕು ಅಂತ ಹೊರಟ ಸರಕಾರ, ಕ್ರಮೇಣ ಅದನ್ನು ಕೈಬಿಟ್ಟು ಮಧುಗಿರಿಯ ಬೈರಗೊಂಡ್ಲು ಬಳಿ 5.7 ಟಿಎಂಸಿ ಜಲಾಶಯ ಕಟ್ಟಲು ಹೊರಡುತ್ತಾರೆ. ಆದರೆ, ಅಲ್ಲಿ ಅರಣ್ಯ ಪ್ರದೇಶ ಮುಳುಗಡೆ ಆಗುತ್ತದೆ ಎನ್ನುವ ಕಾರಣಕ್ಕೆ ಆ ಜಲಾಶಯದ ನೀರು ಸಂಗ್ರಹಣೆ ಪ್ರಮಾಣವನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಹೀಗಾದರೆ ಹೇಗೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಅಲ್ಲಿ ಭೂ ಸ್ವಾಧೀನ ದೊಡ್ಡ ಬಿಕ್ಕಟ್ಟಾಗಿದೆ. ದೊಡ್ಡಬಳ್ಳಾಪುರದಲ್ಲಿ ಏಕೆರೆಗೆ 32 ಲಕ್ಷ ಬೇಕೆಂದು ರೈತರು ಕೇಳುತ್ತಿದ್ದಾರೆ. ಕೊರಟಗೆರೆಗೆ 8 ಲಕ್ಷ ಗೈಡ್ ಲೈನ್ಸ್ ವ್ಯಾಲ್ಯೂ ನಿಗದಿ ಮಾಡಿದ್ದು, ಅವರೂ ಈಗ 32 ಲಕ್ಷ ರೂ. ಕೇಳುತ್ತಿದ್ದಾರೆ. ಹೀಗೆ ವೆಚ್ಚ ಏರುತ್ತಾ ಹೋಗಿ ಈಗ 25 ಸಾವಿರ ಕೋಟಿ ರೂ. ಮರು ಅಂದಾಜಿಗೆ ಬಂದು ನಿಂತಿದೆ ಎಂದು ಯೋಜನೆಯ ಕಗ್ಗಂಟುಗಳನ್ನು ಮಾಜಿ ಮುಖ್ಯಮಂತ್ರಿಗಳು ಬಿಡಿಸಿಟ್ಟಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಅಡಿಗಲ್ಲು ಹಾಕಿದಾಗ ಒಂದೇ ವರ್ಷದಲ್ಲಿ ನೀರು ಕೊದಲಾಗುವುದು ಎಂದು ಸರಕಾರ ಹೇಳಿತ್ತು. ಅವತ್ತೇ ನಾನು ಕೋಲಾರದಲ್ಲಿ ಹೇಳಿದ್ದೆ, ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಅಂತ. ಆಗ ನನಗೆ ಸ್ವಲ್ಪ ಕೂದಲಿತ್ತು. ಹೇ.. ಅವನಿಗೆ ಕೂದಲೇ ಇಲ್ಲ, ಅವನೆಲ್ಲಿ ತಲೆ ಬೋಳಿಸ್ಕೋತಾನೆ ಅಂದಿದ್ರು, ನನಗೆ ನೆನಪಿದೆ. ಇದು ಎತ್ತಿನಹೊಳೆಯ ಹಣೆಬರಹ.
ಹೆಚ್.ಡಿ.ಕುಮಾರಸ್ವಾಮಿ
ಓಪನ್ ಕೆನಾಲ್ ಗ್ರಾವಿಟಿಯಲ್ಲಿ, 15 ಡೆಲಿವರಿ ಪಾಯಿಂಟ್ ಮೂಲಕ ತುಮಕೂರು, ರಾಮನಗರ, ಚಿಕ್ಕಮಗಳೂರು, ಹಾಸನ ಜಿಲ್ಲೆಗೆ ನೀರು ಕೊಡೋದಕ್ಕೆ ಪಾಯಿಂಟ್ ಗಳನ್ನು ಮಾಡಿದ್ದಾರೆ. ಇಷ್ಟಕ್ಕೆ 14 ಟಿಎಂಸಿ ನೀರು ಅಗತ್ಯ. ಆದರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 10 ಟಿಎಂಸಿ ನೀರು ಬೇಕು. ಅಷ್ಟು ನೀರನ್ನು ಎಲ್ಲಿಂದ ತರುತ್ತಾರೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಈ ಇಬ್ಬರೂ ನಾಯಕರು ಎತ್ತಿನಹೊಳೆ ಯೋಜನೆ ಪ್ರತಿಫಲದ ಬಗ್ಗೆ, ಅದರ ವ್ಯವಹಾರಗಳ ಬಗ್ಗೆ ಮಾತನಾಡಿರುವುದು ಯೋಜನೆಯ ಸಾಚಾತನದ ಬಗ್ಗೆ ಅನೇಕ ಅನುಮಾಗಳನ್ನು ಹುಟ್ಟುಹಾಕಿವೆ. ಈಗಾಗಲೇ ಎರಡೂ ಜಿಲ್ಲೆಗಳಲ್ಲಿಸ್ಥಳೀಯ ರಾಜಕಾರಣಿಗಳ ಬಗ್ಗೆ ಜನರ ಅನೇಕ ರೀತಿಯಲ್ಲಿ ಆಡಿಕೊಳ್ಳುತ್ತಿದ್ದಾರೆ. ಹತ್ತು ವರ್ಷಗಳಿಂದ ಎತ್ತಿನಹೊಳೆ ನೀರು ಬರುತ್ತದೆ ಎಂದು ಜನರು ನಂಬಿಕೊಂಡಿದ್ದು, ಒಂದು ವೇಳೆ ನೀರು ಹರಿಯದಿದ್ದರೆ ಅವರೆಲ್ಲ ಜನರ ಆಕ್ರೋಶಕ್ಕೆ ತುತ್ತಾಗುವುದು ಖಚಿತ ಎಂದು ನೀರಾವರಿ ಹೋರಾಟಗಾರರು ಹೇಳುತ್ತಿದ್ದಾರೆ.