ಹಣ ಪಡೆಯುತ್ತಿದ್ದ ವೇಳೆಯೇ ಅಧಿಕಾರಿಗಳ ದಾಳಿ
by GS Bharath Gudibande
ಗುಡಿಬಂಡೆ: ಇ-ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆಯಲ್ಲೇ ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶ್ರೀನಿವಾಸ್ ಎಂಬಾತ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಗುಡಿಬಂಡೆ ತಾಲೂಕು ಸೋಮೇನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅವರು, ಇ-ಖಾತೆ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಬೇಸರಗೊಂಡ ಚಿಂತಕಾಯಲಪಲ್ಲಿ ವೆಂಕಟೇಶ್ ಎಂಬುವವರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಶ್ರೀನಿವಾಸ್, ಇ-ಖಾತೆ ಮಾಡಿಕೊಡಲು 6 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸರಗೊಂಡ ವೆಂಕಟೇಶ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ 4,500 ರೂ.ಗಳನ್ನು ಪಿಡಿಒ ಶ್ರೀನಿವಾಸ್ ದೂರುದಾರರಿಂದ ಹಣ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಇನ್ನು ಪಿಡಿಒ ಶ್ರೀನಿವಾಸ್ ರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ, ಎಸಿಬಿ ಅಧಿಕಾರಿಗಳ ದಾಳಿ ತಾಲೂಕಿನಾದ್ಯಂತ ಸಂಚಲನ ಉಂಟು ಮಾಡಿದ್ದು, ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದೆ.