ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಅರವಿಂದ ಬೆಲ್ಲದ್ ಅವರಿಗೆ ಅವಕಾಶ?
ಬೆಂಗಳೂರು: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದೆ, ನಿರೀಕ್ಷೆಗೂ ಮೀರಿದ ಗೆಲುವನ್ನು ಬಿಜೆಪಿ ಸಾಧಿಸಿದೆ. ಹಾಗಾಗಿ ಕರ್ನಾಟಕದಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ಆಗುವುದು ಖಚಿತವಾಗಿದೆ.
ಪ್ರಸಕ್ತ ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬರುವ ಏಪ್ರಿಲ್ ಮೊದಲ ವಾರ ಅಥವಾ ಯುಗಾದಿ ಹಬ್ಬದ ಬಳಿಕ ಬಿಜೆಪಿ ವರಿಷ್ಠರು ಕರ್ನಾಟಕ ರಾಜಕಾರಣದ ಕಡೆಗೆ ಗಮನಹರಿಸಲಿದ್ದು, ಭಾರೀ ಬದಲಾವಣೆಗಳು ಆಗುವುದು ಖಚಿತ.
ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆ ಗಮನದಲ್ಲಿ ಇರಿಸಿಕೊಂಡು ಹಲವು ಪ್ರಮುಖ ಬದಲಾವಣೆ ಮಾಡುವುದಕ್ಕೆ ವರಿಷ್ಠರು ಚಿಂತನೆ ನಡೆಸಿದ್ದರು. ಆದರೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಾಯಿತು. ಈಗ ಫಲಿತಾಂಶ ಬಿಜೆಪಿ ಪರವಾಗಿ ಬಂದಿರುವುದರಿಂದ ಕರ್ನಾಟಕದಲ್ಲಿ ಮೇಜರ್ ಸರ್ಜರಿ ನಿಶ್ಚಿತ ಎಂದು ಗೊತ್ತಾಗಿದೆ.
ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರಿಗೆ ಅಸಮಾಧಾನವಿದೆ. ಕೆಲ ಸಚಿವರಿಂದ ಪಕ್ಷದ ಮತ್ತು ಸರ್ಕಾರದ ವರ್ಚಸ್ಸು ವೃದ್ಧಿಯಾಗುತ್ತಿಲ್ಲ. ಕೆಲ ಸಚಿವರು ಶಾಸಕರ ಕೈಗೆ ಸಿಗುತ್ತಿಲ್ಲ, ಶಾಸಕರ ವಿಷಯದಲ್ಲಿ ಕೆಲ ಸಚಿವರು ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಶಾಸಕರು ಆರೋಪ ಮಾಡುತ್ತಿದ್ದಾರೆ.
ಇನ್ನೊಂದೆಡೆ ಬಿಜೆಪಿ ಸರಕಾರ ರಚನೆಗೆ ನೆರವಾದರೆಂಬ ಕಾರಣಕ್ಕೆ ಸಚಿವ ಸ್ಥಾನ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸಲಾಗದವರನ್ನು ಕೈಬಿಡಬೇಕು ಎನ್ನುವ ಬೇಡಿಕೆ ಇದ್ದು, ವಲಸಿಗರಲ್ಲಿ ಕೆಲವರಿಗೆ ಕೊಕ್ ಗ್ಯಾರಂಟಿ ಎನ್ನಲಾಗಿದೆ.
ಪಕ್ಷಕ್ಕೆ ಬಂದು ಎರಡು ವರ್ಷವಾದರೂ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದವರು, ಮುಖಂಡರು, ಕಾರ್ಯಕರ್ತರೊಂದಿಗೆ ಬೆರೆಯದೆ ಅಂತರ ಕಾಯ್ದುಕೊಂಡವರಿಗೆ ಬೇರೆ ಜವಾಬ್ದಾರಿ ನೀಡಬೇಕು ಎಂಬ ಆಗ್ರಹವೂ ಇದೆ. ಆದರೆ ವರಿಷ್ಠರು ಹೊಸ ಮುಖಗಳು ಯುವಕರು ಹಾಗೂ ವರ್ಚಸ್ಸು ಇರುವವರಿಗೆ ಮನ್ನಣೆ ನೀಡಲು ಇಚ್ಚಿಸಿದ್ದಾರೆ.
ಒಟ್ಟಿನಲ್ಲಿ ಬಿಜೆಪಿಯಲ್ಲಿ ಬದಲಾವಣೆಯ ಸರ್ಕಸ್ ಗೆ ಚಾಲನೆ ಸಿಕ್ಕಿದೆ. ಹಳೇ ಹುಲಿಗಳು ಸೇರಿದಂತೆ ಶಾಸಕರ ಮಧ್ಯೆ ಪೈಪೋಟಿ ಶುರುವಾಗಿದ್ದು, ಏನೆಲ್ಲಾ ರಾಜಕೀಯ ನಡೆಯುತ್ತೋ ಕಾದು ನೋಡಬೇಕಿದೆ. ಸಂಪುಟಕ್ಕೆ ಹೊಸಬರು, ಪ್ರಭಾವಿಗಳ ಸೇರ್ಪಡೆ ಆಗಬೇಕು ಎಂಬ ಬೇಡಿಕೆ ಇದ್ದು ಬಿ.ವೈ. ವಿಜಯೇಂದ್ರ ಅವರ ಹೆಸರೂ ಸೇರಿದೆ.
ಇದರ ಜತೆಗೆ ಪಂಚಮಸಾಲಿ ಕೋಟಾದಲ್ಲಿ ಒಬ್ಬರನ್ನು ಬಿಟ್ಟು ಯತ್ನಾಳ್ ಅವರಿಗೆ ಅವಕಾಶ ಕೊಡಬೇಕು ಎಂಬ ಆಗ್ರಹವೂ ಇದೆ. ಯಾರು ಯಾರಿಗೆ ಅದೃಷ್ಟ ಒಲಿಯಲಿದೆಯೋ ನೋಡಬೇಕಿದೆ.
ಕೊಕ್ ಪಡೆಯುವ ಸಚಿವರು?
- ಕೆ.ಎಸ್.ಈಶ್ವರಪ್ಪ
- ಗೋವಿಂದ ಕಾರಜೋಳ
- ವಿ.ಸೋಮಣ್ಣ
- ಪ್ರಭು ಚೌಹ್ವಾಣ್
- ಶಶಿಕಲಾ ಜೊಲ್ಲೆ
- ಕೋಟಾ ಶ್ರೀನಿವಾಸ ಪೂಜಾರಿ
- ಮುರುಗೇಶ್ ಆರ್ ನಿರಾಣಿ
- ಸಿ.ಸಿ.ಪಾಟೀಲ್
ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವನೀಯರು?
- ಬಸನಗೌಡ ಪಾಟೀಲ್ ಯತ್ನಾಳ್
- ರೇಣುಕಾಚಾರ್ಯ
- ಪಿ.ರಾಜೀವ್
- ಪೂರ್ಣಿಮಾ ಶ್ರೀನಿವಾಸ್
- ತಿಪ್ಪಾರೆಡ್ಡಿ
- ಸತೀಶ್ ರೆಡ್ಡಿ
- ಎಸ್.ಎ.ರಾಮಾದಾಸ್
- ರಾಜುಗೌಡ ನಾಯಕ್
- ಬಿ.ವೈವಿಜೇಯೇಂದ್ರ
- ಅರವಿಂದ ಬೆಲ್ಲದ್
- ಎನ್.ರವಿಕುಮಾರ್
- ಎಂ.ಪಿ.ಕುಮಾರ ಸ್ವಾಮಿ