ಆಡಳಿತಾರೂಢ ಪಕ್ಷದಲ್ಲಿ ಚರ್ಚೆಗೆ ಗ್ರಾಸವಾದ ಮಾಜಿ ಸಿಎಂ ಹೇಳಿಕೆ
ಬೆಂಗಳೂರು: ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲು ನಿರಂತರ ಪ್ರಯತ್ನ ನಡೆಸಿದ್ದರೆ, ಬಿ.ಎಸ್.ಯಡಿಯೂರಪ್ಪ ಮಾತ್ರ ನಾನು ಮತ್ತೆ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಅಲ್ಲಎಂದು ವಿಧಾನಸಭೆಯಲ್ಲೇ ಸ್ಪಷ್ಟಪಡಿಸಿದ್ದು, ಇದು ರಾಜ್ಯ ರಾಜಕೀಯದಲ್ಲಿಸಂಚಲನ ಉಂಟು ಮಾಡಿದೆ.
ಶುಕ್ರವಾರ ಆಯ-ವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಸ್ವಾರಸ್ಯಕರವಾಗಿ ಪ್ರಸಕ್ತ ರಾಜಕೀಯ ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಮಧ್ಯೆಯೇ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದ ಯಡಿಯೂರಪ್ಪ ಅವರು, ಮುಂದೆ ಅಧಿಕಾರ ಕೇಂದ್ರವಾಗುವ ಅಥವಾ ಮುಖ್ಯಮಂತ್ರಿಯಂಥ ಹುದ್ದೆ ಅಲಂಕರಿಸುವ ಇರಾದೆ ಇಲ್ಲ ಎಂದು ಹೇಳಿದ್ದರು.
ಈ ಹೇಳಿಕೆ ಮೂಲಕ ಅವರು ಮುಂಬರುವ ಸಂಭಾವ್ಯ ಬಿಜೆಪಿ ಆಡಳಿತದಲ್ಲಿ ತಮ್ಮ ಪಾಲು ಏನೂ ಇರುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದರು. ಅಲ್ಲದೆ; ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲೇ ಮುಂಬರುವ ವಿಧಾನಸಭಾ ಚುನಾವಣೆ ಎದುರಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಲಾಗುವುದು ಎಂದು ಕಲಾಪದಲ್ಲೇ ಯಡಿಯೂರಪ್ಪ ಘೋಷಣೆ ಮಾಡಿರುವುದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಒಳಗೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಬಸವರಾಜ ಬೊಮ್ಮಾಯಿ ಅವರು ಉಳಿದ ಅವಧಿ ಪೂರೈಕೆ ಮಾಡುತ್ತಾರಾ? ಎನ್ನುವ ಪ್ರಶ್ನೆಗಳು ಕೇಳಿಬಂದಿದ್ದವು. ಬಹುತೇಕ ವೀರಶೈವ ಲಿಂಗಾಯಿತರಿಂದಲೇ ಬಲಿಷ್ಠವಾಗಿರುವ ಪಕ್ಷದಲ್ಲಿ ಯಡಿಯೂರಪ್ಪ ಅವರು ತೆರೆಮರೆಗೆ ಸರಿಯುವ ಮಾತನ್ನಾಡುತ್ತಿರುವುದು ಅನೇಕರಿಗೆ ಅಚ್ಚರಿ ಉಂಟು ಮಾಡಿದೆ.
ಮತ್ತೊಂದೆಡೆ, ಬೊಮ್ಮಾಯಿ ಭವಿಷ್ಯದ ಬಗ್ಗೆ ಬಿಜೆಪಿಯಲ್ಲೇ ಭಿನ್ನ ರಾಗಗಳು ಕೇಳಿ ಬರುತ್ತಿದ್ದು, ಈಗ ಯಡಿಯೂರಪ್ಪ ಅವರು ನೀಡಿರುವ ಹೇಳಿಕೆ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆದರೆ ತಮ್ಮ ಪುತ್ರ ಬಿ.ವೈ.ವಿಜಯೇಂದ್ರಗೆ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಬಿಎಸ್ ವೈ ಅವರು ಸದನದಲ್ಲೇ ಇಂಥ ಹೇಳಿಕೆ ನೀಡಿದ್ದಾರಾ? ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.