ಗುಡಿಬಂಡೆ ತಾಲೂಕಿನ ಚಿನ್ನಹಳ್ಳಿಗೆ ಭೇಟಿ
by GS Bharath Gudibande
ಗುಡಿಬಂಡೆ: ಕ್ಷೇತ್ರದ ಜನರಿಗೆ ಸೇವೆ ಮಾಡುವುದರಿಂದ ನನ್ನ ಬದುಕು ಸಾರ್ಥಕವಾಗಿದೆ. ಹೀಗೆ ಮುಂದಿನ ದಿನಗಳಲ್ಲಿ ಜನರು ಆಶೀರ್ವಾದ ಮಾಡಿದರೆ ಇನ್ನಷ್ಟು ಸಮಾಜ ಸೇವೆ ಮಾಡಿ, ಅಭಿವೃದ್ಧಿ ಮಾಡಲು ಸ್ಫೂರ್ತಿಯಾಗುತ್ತದೆ ಎಂದು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ಮುಂದಿನ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಡಿ.ಜೆ ನಾಗರಾಜ ರೆಡ್ಡಿ ಹೇಳಿದರು.
ಅಲ್ಲದೆ, ಈ ಬಾರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲೇಬೇಕಿದೆ. ರೈತರ ಸಾಲ ಮನ್ನಾ ಮಾಡಿ ಅನೇಕ ಕುಟುಂಬಗಳಿಗೆ ಆಸರೆ ಆಗಿರುವ ಅವರನ್ನು ಅಧಿಕಾರಕ್ಕೆ ತರಲೇಬೇಕು. ನನ್ನಿಬ್ಬರು ಮಕ್ಕಳ ಮೇಲಾಣೆ, ಅವರಿಗೇ ನನ್ನ ಬೆಂಬಲ ಎಂದು ಅವರು ನುಡಿದರು.
ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿನ್ನಹಳ್ಳಿಯ ಗ್ರಾಮದ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
30 ವರ್ಷಗಳಿಂದ ಸೇವೆ
ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸೇರಿದಂತೆ ಕ್ಷೇತ್ರದ ಪ್ರತಿಹಳ್ಳಿ, ಗ್ರಾಮಗಳಲ್ಲಿ ಸಂಚರಿಸುತ್ತಾ ಸಾರ್ವಜನಿಕ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಸಮಾಜ ಸೇವೆ ಮಾಡುತ್ತಿದ್ದೇನೆ. ನಾನು ಎಂದಿಗೂ ನಿಮ್ಮವನು. ಮುಂದಿನ ದಿನಗಳಲ್ಲಿ ನನಗೆ ಇನ್ನಷ್ಟು ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ನಾನು ಸ್ಥಳೀಯ ವ್ಯಕ್ತಿ
ನಾನು ಇದೇ ಕ್ಷೇತ್ರದ ವ್ಯಕ್ತಿ. ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ಎಲ್ಲರ ಜತೆ ವಿಶ್ವಾಸ ಪಡೆದಿದ್ದೇನೆ. ಚಿಕ್ಕವಯಸ್ಸಿನಿಂದಲೇ ಸಮಾಜ ಸೇವೆ ಮಾಡುತ್ತಾ, ಮನುಷ್ಯನ ಹುಟ್ಟು ಮತ್ತು ಸಾವು ಸಹಜ. ಆದರೆ, ಇವರೆಡರ ನಡುವೆ ಹೇಗೆ ಬದುಕಬೇಕೆಂಬುದೇ ಜೀವನವಾಗಿದ್ದು, ಸ್ವಾರ್ಥಕ್ಕಾಗಿ ಬದುಕದೇ ಸಮಾಜ ಸೇವೆಗೆ ಮೀಸಲಾಗಿಡಬೇಕು. ಇದರಿಂದ ಬದುಕು ಸಾರ್ಥಕತೆಯ ಜತೆಗೆ ಸಮಾಧಾನವು ಇರುತ್ತದೆ ಎಂದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ. 30 ವರ್ಷಗಳಿಂದ ಕ್ಷೇತ್ರದ ಜನರ ಜತೆ ವಿಶ್ವಾಸ ಹೊಂದಿದ್ದೇನೆ. ಈ ಸಲ ಕ್ಷೇತ್ರದ ಎಲ್ಲರ ಆಶೀರ್ವಾದ ಹಾಗೂ ಬೆಂಬಲ ನನಗೆ ಇದೆ.
ಡಿ.ಜೆ.ನಾಗರಾಜ ರೆಡ್ಡಿ, ಬಾಗೇಪಲ್ಲಿ ಕ್ಷೇತ್ರದ ಮುಂದಿನ ಚುನಾವಣೆಯ ಜೆಡಿಎಸ್ ಅಭ್ಯರ್ಥಿ