ಜೇಮ್ಸ್ ಜಾತ್ರೆಯ ನಡುವೆ ಅಪ್ಪು ಅಭಿಮಾನಿಗಳಿಗೆ ಇನ್ನೊಂದು ಸಿಹಿಸುದ್ದಿ
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ‘ಸಹಕಾರ ರತ್ನ’ ಪ್ರಶಸ್ತಿ ನೀಡುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪುನೀತ್ ರಾಜ್ ಕುಮಾರ್ ನಮ್ಮ ಡೈರಿಗೆ ರಾಯಬಾರಿಯಾಗಿ ಸಹಕಾರ ಕೊಟ್ಟಿದ್ದರು. ಆದ್ದರಿಂದ ಅವರ ಸೇವೆ ಪರಿಗಣಿಸಿ ‘ಸಹಕಾರ ರತ್ನ’ ಪ್ರಶಸ್ತಿ ನೀಡುತ್ತೇವೆ ಎಂದು ಹೇಳಿದರು.
ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಸಂದರ್ಭದಲ್ಲಿ ಸಹಕಾರ ಪ್ರಶಸ್ತಿಯನ್ನು ಕೊಡಲಾಗಿರಲಿಲ್ಲ. ಪ್ರತಿವರ್ಷ ಉತ್ತಮ ಕೋ-ಪರೇಟೀವ್ ಸೊಸೈಟಿ, ಉತ್ತಮ ಕೋಪರೇಟೀವ್ ಬ್ಯಾಂಕ್ ಆಯ್ಕೆ ಮಾಡಲಾಗುತ್ತದೆ.
‘ಸಹಕಾರ ರತ್ನ’ ಪ್ರಶಸ್ತಿಗೆ ರಾಜ್ಯದಲ್ಲಿ 100 ಸಂಸ್ಥೆಗಳಿಂದ ಅರ್ಜಿ ಬಂದಿವೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಸೂಚನೆಯಂತೆ ಪ್ರಶಸ್ತಿಗೆ ಸಂಸ್ಥೆ ಹಾಗೂ ಸಾಧಕರನ್ನು ನಾವೇ ಗುರುತಿಸಿದ್ದೇವೆ. ಜಿಲ್ಲೆಗೊಂದು ಪ್ರಶಸ್ತಿ ಕೊಡುವ ಉದ್ದೇಶವಿದೆ ಎಂದು ತಿಳಿಸಿದರು.
ಮಾ.20ರಂದು ಕೆಂಗೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಬೊಮ್ಮಾಯಿ ಅವರು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಈ ಬಾರಿ 50 ಸಹಕಾರ ರತ್ನ ಪ್ರಶಸ್ತಿ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.
ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ವಿಲೀನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಾರ್ಖಂಡ್, ಕೇರಳದಲ್ಲಿ ವಿಲೀನ ಮಾಡಲಾಗಿದೆ. ನಮ್ಮಲ್ಲಿ ಒಂದು ಹಂತದ ಸಭೆ ನಡೆಸಲಾಗಿದೆ. ನಮ್ಮ ಅಧಿಕಾರಿಗಳು ಕೇರಳ, ಜಾರ್ಖಂಡ್ ಗೆ ಭೇಟಿ ನೀಡುತ್ತಾರೆ. ನಂತರ ಅಲ್ಲಿನ ಪರಿಸ್ಥಿತಿ ಬಗ್ಗೆ ವರದಿ ಕೊಡ್ತಾರೆ. ಅದನ್ನು ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸೋಮಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಮತ್ತು ಮಾಜಿ ಸಚಿವ ಜಿ.ಟಿ.ದೇವೇಗೌಡರು, ರಾಜ್ಯ ಸಹಕಾರ ಸಂಘಗಳ ನಿಬಂಧಕ ಎಸ್ ಜಿಯಾಉಲ್ಲಾ ಮತ್ತಿತರರು ಇದ್ದರು.