ಮುಂಬಯಿ: ಹಿಂದೀ ಚಿತ್ರರಂಗದ ಖ್ಯಾತ ಕಲಾವಿದ ದಿಲೀಪ್ ಕುಮಾರ್ ಅವರು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ವಾರ ಇಲ್ಲಿನ ಹಿಂದೂಜಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಕಳೆದ ಎರಡು ತಿಂಗಳಿಂದ ಅವರು ಆಸ್ಪತ್ರೆ ಸೇರುವುದು ನಂತರ ಸುಧಾರಿಸಿಕೊಂಡು ಮನೆಗೆ ವಾಪಸ್ಸು ಬರುವುದು ನಡೆದಿತ್ತು. ಆದರೆ ಈ ಬಾರಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಹಿಂದಿ ಚಲನಚಿತ್ರ ರಂಗದ ತಮ್ಮ ಕಾಲದ ಅತಿ ಶ್ರೇಷ್ಠ ನಟರಲ್ಲಿ ಒಬ್ಬರೆಂದು ಅವರನ್ನು ಪರಿಗಣಿಸಲಾಗುತ್ತದೆ. 1944ರಿಂದ 1966 ರವರೆಗೆ ಸುಮಾರು 62 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶೋಕರಸ ಪ್ರಧಾನ ಭೂಮಿಕೆಗಳಲ್ಲಿ ಪ್ರಸಿದ್ಧರಾದ ಕಾರಣ ಅವರನ್ನು ದುರಂತ ನಾಯಕನೆಂದೂ ಕರೆಯುತ್ತಾರೆ. ಅನೇಕ ಪ್ರಶಸ್ತಿಗಳಿಂದ ಮಾನಿತರಾದ ಇವರು ಭಾರತೀಯ ಚಲನಚಿತ್ರ ರಂಗದ ಸರ್ವೋಚ್ಚ ಸನ್ಮಾನವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ಆಗಿದ್ದಾರೆ. ಅವರು ರಾಜ್ಯಸಭೆಯ ಸದಸ್ಯರೂ ಆಗಿದ್ದರು.
ಪ್ರಧಾನಿ ಶೋಕ
ದಿಲೀಪ್ ಕುಮಾರ್ ಅವರ ನಿಧನ ನಮ್ಮ ಸಾಂಸ್ಕೃತಿಕ ಅತಿ ದೊಡ್ಡ ನಷ್ಟ. ಅವರು ಸರಿಸಾಟಿ ಇಲ್ಲ ನಟ ಹಾಗೂ ಸಿನಿಮಾ ಜಗತ್ತಿನ ದಂತಕಥೆಯಾಗಿದ್ದರು ಎಂದುಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ.

ದಿಲೀಪ್ ಕುಮಾರ್ ಚಿತ್ರ ಜೀವನ
ದಿಲೀಪ್ ಕುಮಾರ್ ಅವರ ಹುಟ್ಟು ಹೆಸರು ಮಹಮ್ಮದ್ ಯೂಸುಫ್ ಖಾನ್. ಅಂದಿನ ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕರೂ ಬಾಂಬೇ ಟಾಕೀಸ್ ಸ್ಟೂಡಿಯೊ ಮಾಲಿಕರೂ ಆಗಿದ್ದ ಹಿಮಾಂಶು ರಾಯ್ ಅವರ ಪತ್ನಿ ದೇವಿಕಾ ರಾಣಿಯವರು ಹಿಂದಿ ಚಿತ್ರರಂಗವನ್ನು ಪ್ರವೇಶಿಸಲು ಯೂಸುಫ್ ಖಾನರಿಗೆ ಸಹಾಯ ಮಾಡಿದರು. 1944ರಲ್ಲಿ ಭಗವತೀ ಚರಣ ವರ್ಮಾರವರು ತಮ್ಮ ಜ್ವಾರ್ ಭಾಟಾ ಚಿತ್ರದ ನಾಯಕನ ಪಾತ್ರವನ್ನಿತ್ತು ದಿಲೀಪ್ ಕುಮಾರ್ ಎಂದು ಹೆಸರಿಟ್ಟರು. ಅಮಿಯಾ ಚಕ್ರವರ್ತಿಯವರ ನಿರ್ದೇಶನದ ಈ ಚಿತ್ರದ ಪಾತ್ರವರ್ಗದಲ್ಲಿ ಮೃದುಲಾ, ಶಮೀಮ್, ಆಗಾ, ಕೆ.ಎನ್.ಸಿಂಘ್, ಮುಮ್ತಾಜ್ ಅಲಿ, ಮೊದಲಾದವರಿದ್ದ ಈ ಚಿತ್ರದ ಸಂಗೀತ ನಿರ್ದೇಶಕರು ಅನಿಲ್ ಬಿಸ್ವಾಸ್ ಆಗಿದ್ದರು. ಆದರೂ ಚಿತ್ರ ಅಷ್ಟೇನೂ ಜನಪ್ರಿಯವಾಗಲಿಲ್ಲ.
1947ರಲ್ಲಿ ಬಿಡುಗಡೆಯಾದ ಜುಗ್ನು ಚಿತ್ರ ಜಯಪ್ರದವಾಯಿತು. ಬಳಿಕ ಅಂದಾಜ್ (1949), ದೀವಾರ್ (1951), ಆಗ್ (1952), ಅಮರ್ (1954), ಆಜಾದ್ (1955), ದೇವದಾಸ್ (1955), ಮುಸಾಫಿರ್ (1957), ಮಧುಮತಿ (1958) ಮತ್ತು ಮುಘಲ್ ಎ ಆಜಮ್ (1960) ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲುವನ್ನು ಪಡೆಯಿತಲ್ಲದೆ, ದಿಲೀಪ್ ಕುಮಾರರೂ ಚಿತ್ರರಂಗದಲ್ಲಿ ಅಮೋಘ ಖ್ಯಾತಿಯನ್ನು ಪಡೆದರು. ಅಂದಾಜ್, ದೀದಾರ್ , ಅಮರ್ , ದೇವದಾಸ್, ಮಧುಮತಿ, ಇತ್ಯಾದಿ ಚಿತ್ರಗಳು ಶೋಕರಸಭರಿತ ಚಿತ್ರಗಳಾಗಿದ್ದು, ದಿಲೀಪ್ ಕುಮಾರರು ದುರಂತ ನಾಯಕನೆಂಬ ಬಿರುದನ್ನು ಪಡೆದರು.
ಭಾರತದ ಮುಘಲ್ ಇತಿಹಾಸದಿಂದಾಯ್ದ ಕತೆಯಿರುವ ಮುಘಲ್ ಎ ಆಜಮ್ ಆಗಿನ ಕಾಲದ ಶ್ರೀಮಂತ ಚಿತ್ರವಾಗಿದ್ದು, ಭಾರೀ ಜಯಗಳಿಸಿತ್ತು. ಉತ್ತರಾರ್ಧ ವರ್ಣದಲ್ಲಿದ್ದು ಕಪ್ಪು-ಬಿಳುಪಿನ ಈ ಚಿತ್ರ ೨೦೦೮ರಲ್ಲಿ ಕಂಪ್ಯೂಟರ್ ಸಹಾಯದಿಂದ ವರ್ಣರಂಜಿತಗೊಂಡು ಪ್ರದರ್ಶನಗೊಂಡಾಗ ಮತ್ತೆ ಆಗಿನಷ್ಟೇ ಜನಮೆಚ್ಚುಗೆಯನ್ನು ಪಡೆಯಿತು. 1961ರಲ್ಲಿ ಬಿಡುಗಡೆಯಾದ ಗಂಗಾ ಜಮುನಾ ದಿಲೀಪ್ ಕುಮಾರರ ಮೊದಲ ಪೂರ್ಣ ವರ್ಣ ಚಿತ್ರ. ಇದು ಅವರ ಸ್ವಂತ ನಿರ್ಮಾಣದ ಚಿತ್ರವೂ ಆಗಿತ್ತು. ಇದರಲ್ಲಿ ಅವರ ನಿಜ ಜೀವನದ ತಮ್ಮ ನಾಸಿರ್ ಖಾನ್ ತಮ್ಮನಾಗಿಯೇ ಅಭಿನಯಿಸಿದ್ದಾರೆ.
1976ರವರೆಗೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ 1981 ರವರೆಗೆ ಚಿತ್ರರಂಗದಿಂದ ದೂರವಿದ್ದರು. ಆ ನಂತರ ಪೋಷಕ ಪಾತ್ರಗಳಲ್ಲಿ ಅಭಿನಯಿಸಲಾರಂಭಿಸಿದರು. ಕ್ರಾಂತಿ (1981), ಶಕ್ತಿ (1982), ವಿಧಾತಾ (1982), ಮಶಾಲ್ (1984), ಕರ್ಮ (1986), ಸೌದಾಗರ್ (1991), ಇತ್ಯಾದಿ ಚಿತ್ರಗಳೂ ಜನಪ್ರಿಯವಾದವು. ಅವರ ಕೊನೆಯ ಚಿತ್ರ ಕಿಲಾ 1996) ಅಷ್ಟೇನೂ ಜನ ಮೆಚ್ಚುಗೆಯನ್ನು ಪಡೆಯಲಿಲ್ಲ.
1966ರಲ್ಲಿ ಅಂದಿನ ಚಿತ್ರರಂಗದ ಸುಂದರಿ ಸಾಯಿರಾ ಬಾನುವನ್ನು ಮದುವೆಯಾದಾಗ ದಿಲೀಪ್ ಕುಮಾರರ ವಯಸ್ಸು 44 ಹಾಗೂ ಸಾಯಿರಾ ಬಾನುವಿನ ವಯಸ್ಸು22. 1980ರಲ್ಲಿ ಆಸ್ಮಾ ಜತೆ ಎರಡನೆ ಮದುವೆಯಾದರೂ ಅದು ಬಹು ಬೇಗನೇ ವಿಚ್ಛೇದನಗೊಂಡಿತು.
Lead photo courtesy: Wikipedia

















