ಜಿಲ್ಲಾಡಳಿತ, ತಾಲೂಕು ಆಡಳಿತ & ಆರೋಗ್ಯ ಇಲಾಖೆ ಮೌನ: ನೈರ್ಮಲ್ಯ ರಕ್ಷಣೆಗೆ ಇನ್ನೊಬ್ಬರು ನಾಡಪ್ರಭು ಬರಬೇಕಾ?
by Sidhu Devanahalli
ದೇವನಹಳ್ಳಿ: ಜಾಗತಿಕವಾಗಿ ಪ್ರಖ್ಯಾತಿ ಹೊಂದಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ದೇವನಹಳ್ಳಿಯಲ್ಲಿ ಸ್ವಚ್ಚತೆ ಸೇರಿದಂತೆ ಎಲ್ಲವೂ ಅವ್ಯವಸ್ಥೆಯಿಂದ ಕೂಡಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ʼಸ್ವಚ್ಛ ಭಾರತ್ʼ ಮತ್ತು ಆರೋಗ್ಯಕರ ಭಾರತದ ಕನಸು ಈಡೇರಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರಕಾರವು ರಾಷ್ಟ್ರೀಯ ಚಳವಳಿ ರೂಪದಲ್ಲಿ ಜಾರಿಗೆ ತಂದ ʼಸ್ವಚ್ಛ ಭಾರತ ಮಿಷನ್ʼ ರಾಜ್ಯದಲ್ಲಿ ಇನ್ನೂ ‘ಟೇಕಾಫ್’ ಹಂತದಲ್ಲೇ ಇದೆ. ಅದಕ್ಕೆ ಸಾಕ್ಷ್ಯ ಬೇಕೆಂದರೆ ವಿಮಾನ ನಿಲ್ದಾಣ ಹಾಗೂ ದೇವನಹಳ್ಳಿ ಆಸುಪಾಸು ಸಂಚಾರ ಮಾಡಿ.
ಎಲ್ಲಿ ನೋಡಿದರೂ ಕಸವೋ ಕಸ
ಕಸ ವಿಲೇವಾರಿ ಮತ್ತು ಸಂಸ್ಕರಣೆಯ ಬದಲು ಎಲ್ಲಂದರಲ್ಲಿ ಕಸಕ್ಕೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಇದು ಕಸ ಸಂಗ್ರಹ ಮಾಡದೇ ಇರುವುದಕ್ಕಿಂತಲೂ ಹೆಚ್ಚು ಅಪಾಯಕಾರಿ. ಬೇಸಿಗೆಯ ಫಳ ಹೆಚ್ಚುತ್ತಿದ್ದು, ಉಷ್ಣಾಂಶವೂ ದಿನೇದಿನೆ ಏರುತ್ತಲೇ ಇದೆ. ಪರಿಣಾಮ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕಸ ತಂದು ಸುರಿದು ಅದಕ್ಕೆ ಬೆಂಕಿ ಹಚ್ಚುತ್ತಿರುವುದು ವಾಹನ ಸವಾರರಿಗೆ ಆತಂಕ ಉಂಟು ಮಾಡಿದೆ.
ಅಲ್ಲದೆ, ಬೆಂಕಿ ಅನಾಹುತಗಳಿಗೆ ಇದು ದಾರಿ ಮಾಡಿಕೊಡುವ ಅಪಾಯವಿದೆ. ಈ ಬಗ್ಗೆ ಪೊಲೀಸರು, ಹೆದ್ದಾರಿ ವಿಚಕ್ಷಣಾ ದಳವೂ ಗಮನ ಹರಿಸುತ್ತಿಲ್ಲ. ನಗರಗಳಿಂದ ರಾತ್ರೋರಾತ್ರಿ ಕಸ ತಂದು ಹೆದ್ದಾರಿ ಪಕ್ಕದ ಚರಂಡಿಗಳಲ್ಲಿ ಸುರಿದು ಹೋಗುತ್ತಿರುವುದು ಹೆಚ್ಚಾಗುತ್ತಿದೆ.
ಏರ್‌ಪೋರ್ಟ್ ಇದ್ದರೂ ಹಿಂದುಳಿದ ದೇವನಹಳ್ಳಿ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಾರಾಂತ್ಯದಲ್ಲಿ ಪ್ರವಾಸಿಗರ ದಂಡು, ರಾಷ್ಟ್ರೀಯ ಹೆದ್ದಾರಿ.. ಹೀಗೆ ಅಸಂಖ್ಯಾತ ಜನರು ಪ್ರತಿನಿತ್ಯ ಒಡಾಟ ಮಾಡುತ್ತಾರೆ. ಆದರೂ
ದೇವನಹಳ್ಳಿ ಮಾತ್ರ ಪ್ರಗತಿಯಲ್ಲಿ ಹಿಂದೆ ಬಿದ್ದಿದೆ. ಇದರ ಜತೆಗೆ ಇನ್ನು ಸ್ವಲ್ಪ ದಿನಗಳಲ್ಲಿ ಮಹಾನ್ ಕಸದ ನಗರವಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ನಾಗರೀಕರು ದೂರುತ್ತಿದ್ದಾರೆ.
ಸಚಿವರು ಮತ್ತು ಶಾಸಕರು ಎಲ್ಲಿ?
ಪ್ರತೀ ದಿನ ಬೆಳಗಾದರೆ ಸಚಿವರು. ಶಾಸಕರು. ಸರಕಾರಿ ಅಧಿಕಾರಿಗಳು ಇದೇ ಹೆದ್ದಾರಿಯಲ್ಲಿ ಓಡಾಡುತ್ತಾರೆ. ಐಶಾರಾಮಿ ಕಾರುಗಳಲ್ಲಿ ಚಿಂಚಿನ ವೇಗದಲ್ಲಿ ಸಂಚರಿಸುವ ಅವರಿಗೆ ಹೆದ್ದಾರಿ ಪಕ್ಷದ ಕಸದ ರಾಶಿಗಳು ಕಾಣುತ್ತಿಲ್ಲವೇ ಎಂದು ಜನರು ಕೇಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಇದಕ್ಕೆ ಒಂದು ಪ್ರಮುಖ ಕಾರಣ.
ಡಾಬಾ, ರೆಸ್ಟೋರೆಂಟ್ ಗಳಿಂದ ಕಸ
ದೇವನಹಳ್ಳಿ ಚಿಕ್ಕಬಳ್ಳಾಪುರಕ್ಕೆ ಹೋಗುವ ಮಾರ್ಗದ ಸುತ್ತಮುತ್ತ ನೆಡೆಯುವ ಕಾರ್ಯಕ್ರಮದ ಊಟದ ಹಸಿ ಕಸ. ಮಾಂಸದ ಅಂಗಡಿಯಲ್ಲಿ ತೆಗೆದ ತ್ಯಾಜಗಳು. ಡಾಬಾ. ಬಾರ್ ಹಾಗೂ ಹೋಟೆಲ್ ಗಳ ಕಸ ವಿಲೇವಾರಿ ಮಾಡದೇ, ಮದ್ಯ ಬಾಟಲಿಗಳನ್ನು ತಂದು ಹೆದ್ದಾರಿ ಪಕ್ಕದಲ್ಲೇ ಎಸೆಯಲಾಗುತ್ತಿದೆ. ನಗರದ ನಂದಿ ಉಪಾಹಾರ ಮಂದಿರದ ಅಕ್ಕಪಕ್ಕದ ರಾಷ್ಟ್ರೀಯ ಹೆದ್ದಾರಿಯ ಎಡ ಭಾಗದ ಉದ್ದಕೂ ಕಸದ ಮಹಾ ರಾಶೀಯೇ ಕಾಣುತ್ತದೆ.
ಪ್ರಕೃತಿಯು ಕೂಡ ಹಾಳಾಗಿ ಹೋಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಚಿಕ್ಕಬಳ್ಳಾಪುರದವರೆಗೂ ಈ ಕಸದ ರಾಶಿ ಬಂದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಕಸದಿಂದ ದೇವನಹಳ್ಳಿ ಕಾಪಾಡಲು ಇನ್ನೊಬ್ಬರು ನಾಡಪ್ರಭುಗಳೇ ಬರಬೇಕೋ ಏನೋ ಎಂಬುದು ಇಲ್ಲೊಬ್ಬರು ಹಿರಿಯ ನಾಗರಿಕರ ಮಾತು.