ಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿಯಿಂದ ಸರಕಾರಕ್ಕೆ ಮನವಿ; ನೀರಿನ ಸ್ಯಾಂಪಲ್ ಪರೀಕ್ಷೆಗೆ ಒತ್ತಾಯ
ಚಿಕ್ಕಬಳ್ಳಾಪುರ: ರಾಜ್ಯದ ಈಶಾನ್ಯ ಭಾಗದ ಬಯಲುಸೀಮೆಯ ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಜಲಮೂಲಗಳು ಕಲುಷಿತವಾಗಿದ್ದು, ನೀರಿನಲ್ಲಿ ಅಪಾಯಕಾರಿ ಯುರೇನಿಯಂ ಧಾತು ಪತ್ತೆಯಾಗಿದೆ. ಹೀಗಾಗಿ ಜನ ಜಾನುವಾರುಗಳಿಗೆ ಕುಡಿಯಲು ಪರ್ಯಾಯ ಸುರಕ್ಷಿತ ನೀರನ್ನು ಒದಗಿಸಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗೂ ಯುವಶಕ್ತಿ ಸಂಘಟನೆಗಳು ರಾಜ್ಯ ಸರಕಾರವನ್ನು ಒತ್ತಾಯ ಮಾಡಿವೆ.
ವಿಶ್ವ ಜಲದಿನದ ಪ್ರಯುಕ್ತ ಮಂಗಳವಾರ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಆಂಜನೇಯ ರೆಡ್ಡಿ ಅವರು ಹೇಳಿದ್ದಿಷ್ಟು;
- ಈಗಾಗಲೇ ಜಿಲ್ಲೆಯ ಜಲಮೂಲಗಳಲ್ಲಿ ವಿಷಾಂಶಗಳು ಹೇರಳವಾಗಿ ಪತ್ತೆಯಾಗಿದ್ದು, ಈಗ ಯುರೇನಿಯಂ ಕೂಡ ಕಂಡು ಬಂದಿದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಸ್ಥಾಪನೆ ಮಾಡಲಾಗಿರುವ RO ಘಟಕಗಳ ಕಾರ್ಯಕ್ಷಮತೆ ಕ್ಷೀಣಿಸಿದ್ದು, ನಿರ್ವಹಣೆಯೂ ಸರಿಯಾಗಿರುವುದಿಲ್ಲ. ಹೀಗಾಗಿ ಜನರು ವಿಷಕಾರಿ ನೀರನ್ನೇ ಕುಡಿಯುತ್ತಿದ್ದಾರೆ.
- ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ನಡೆಸಿರುವ ಅಧ್ಯಯನದಲ್ಲಿ ಅಪಾಯಕಾರಿ ಮಟ್ಟ ಮೀರಿ ನೀರಿನಲ್ಲಿ ಯುರೇನಿಯಂ ಅಂಶ ಪತ್ತೆಯಾಗಿರುವುದು ಖಚಿತವಾಗಿದೆ. ಇಂಥ ನೀರು ಕುಡಿಯುವುದರಿಂದ ಮೂತ್ರಪಿಂಡಗಳ ವೈಫಲ್ಯ, ಕ್ಯಾನ್ಸರ್, ನವಜಾತ ಶಿಶುಗಳ ದುರ್ಮರಣ, ದೈಹಿಕ ಜಡತ್ವ ಹಾಗೂ ಪಾರ್ಶ್ವವಾಯು ಉಂಟಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
- ತಕ್ಷಣವೇ ಪ್ರತಿಯೊಂದು ಕೊಳವೆ ಬಾವಿಯ ನೀರಿನ ಸ್ಯಾಂಪಲ್ ಸಂಗ್ರಹ ಮಾಡಿ, ಆ ಸ್ಯಾಂಪಲ್ʼಗಳನ್ನು ಪ್ರಯೋಗಾಲಯಕ್ಕೆ ಕಳಿಸಿ ISO, BIS, WHO ಮಾನದಂಡದ ಪ್ರಕಾರ ನೀರಿನ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ನಾವು ಸರಕಾರವನ್ನು ಒತ್ತಾಯ ಮಾಡಿದ್ದೇವೆ.
- ವಿಶ್ವ ಆರೋಗ್ಯ ಸಂಸ್ಥೆ ಮಾನದಂಡದಂತೆ ಒಂದು ಲೀಟರ್ ಕುಡಿಯುವ ನೀರಿನಲ್ಲಿ30 ಮೈಕ್ರೋಗ್ರಾಂ ಯುರೇನಿಯಂ ಇರಬಹುದು. ಅದೇ ರೀತಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಕಾರ ಒಂದು ಲೀಟರ್ ನೀರಿನಲ್ಲಿ 60 ಮೈಕ್ರೋಗ್ರಾಂ ಇರಬಹುದು. ಆದರೆ, ನಮ್ಮ ಎರಡೂ ಜಿಲ್ಲೆಗಳಲ್ಲಿ ಒಂದು ಲೀಟರ್ ಕುಡಿಯುವ ನೀರಿನಲ್ಲಿ 1000 ಮೈಕ್ರೋಗ್ರಾಂ ಗಿಂತಲೂ ಹೆಚ್ಚು ಯುರೇನಿಯಂ ಪತ್ತೆಯಾಗಿದೆ. ಈ ಭಯಾನಕ ಸಂಗತಿಯನ್ನು ಕೇಂದ್ರ ಜಲಶಕ್ತಿ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಆದರೆ, ರಾಜ್ಯ ಸರಕಾರ ಮಾತ್ರ ಮೌನಕ್ಕೆ ಶರಣಾಗಿದೆ.
- ಇದರ ಜತೆಗೆ, ಬೆಂಗಳೂರು ಮಹಾನಗರದ ವಿಷಕಾರಿ ತ್ಯಾಜ್ಯ ನೀರನ್ನು ಎರಡು ಹಂತಗಳಲ್ಲಿ ಅವೈಜ್ಞಾನಿಕವಾಗಿ ಶುದ್ಧೀಕರಿಸಿ ಎರಡೂ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತಿದೆ. ಪರಿಣಾಮವಾಗಿ ಕೆರೆಗಳು ಕಲುಷಿತವಾಗಿ, ಅಂತರ್ಜಲವೂ ಕಲುಷಿತವಾಗುತ್ತಿದೆ.
- ತಕ್ಷಣವೇ ಜಿಲ್ಲಾಡಳಿತವೂ ಈ ಎಲ್ಲ ನೀರಿನ ಸ್ಯಾಂಪಲ್ ಗಳನ್ನು ಸಂಗ್ರಹ ಮಾಡಿ ISO, BIS, WHO ನಿಗದಿ ಮಾಡಿರುವ ಮಾನದಂಡಗಳ ಪ್ರಕಾರ ನೀರಿನ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡು ಜನ ಜಾನುವಾರುಗಳಿಗೆ ಪೂರೈಕೆ ಮಾಡಬೇಕು.
ಜಿಲ್ಲಾಧಿಕಾರಿ ಹೇಳಿದ್ದೇನು?
ಯುರೇನಿಯಂ ಧಾತು ಪತ್ತೆಯಾದ ಎಂಟು ಕೊಳವೆ ಬಾವಿಗಳನ್ನು ಬಂದ್ ಮಾಡಿಸಲಾಗಿದೆ. ನೀರಿನ ಸುರಕ್ಷತೆ ಗುಣಮಟ್ಟಕ್ಕೆ ಆದ್ಯತೆ ಕೊಡಲಾಗುತ್ತದೆ. ಹಾಗೆಯೇ ನೀರಿನ ಸ್ಯಾಂಪಲ್ ಗಳನ್ನು ಸಂಗ್ರಹ ಮಾಡಿ ಲ್ಯಾಬ್ ಗೆ ಕಳಿಸಲಾಗುವುದು ಹಾಗೂ ಕುಡಿಯುವ ನೀರಿನ ಘಟಕಗಳ ನೀರಿನ ಗುಣಮಟ್ಟ ಪರಿಶೀಲನೆ ನಡೆಸಲಾಗುವುದು ಎಂದು ಇದೇ ವೇಳೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಪಿ.ಶಿವಶಂಕರ್, ಮುಖಂಡರಾದ ಎಂ.ಆರ್.ಲಕ್ಷ್ಮೀನಾರಾಯಣ, ನಂದಿ ಪುರಷೋತ್ತಮ, ಉದಯ ಶಂಕರ್, ವಿಜಯಭಾವ ರೆಡ್ಡಿ, ಸುಷ್ಮಾ ಶ್ರೀನಿವಾಸ್, ಪ್ರಭಾ ನಾರಾಯಣ ಗೌಡ ಮುಂತಾದವರು ಹಾಜರಿದ್ದರು.