ತಮಿಳುನಾಡಿನ ಮೇಕೆದಾಟು ವಿರುದ್ಧದ ನಿರ್ಣಯಕ್ಕೆ ಕಿಮ್ಮತ್ತಿಲ್ಲ: ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರ ಮಾಡಿರುವ ನಿರ್ಣಯಕ್ಕೆ ಯಾವುದೇ ಕಿಮ್ಮತ್ತು ಇಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ವಿಧಾನಸಭೆ ಕಲಾಪದ ಶೂನ್ಯವೇಳೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರಕಾರ ಮಾಡಬೇಕಿರುವ ಕೆಲಸವೆಂದರೆ, ಮೊದಲು ಪ್ರಧಾನಮಂತ್ರಿಗಳು ಹಾಗೂ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಮನವೊಲಿಕೆ ಮಾಡಬೇಕು ಎಂದರು.
ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ರಾಜ್ಯವು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುವ ನ್ಯಾಯಬದ್ಧ ಹಕ್ಕು ಹೊಂದಿದೆ ಎಂದು ಅವರು ಪ್ರತಿಪಾದಿಸಿದರು.
2007ರಲ್ಲಿ ಟ್ರಿಬ್ಯುನಲ್ ತೀರ್ಪು ಬಂದ ಬಳಿಕ ಸುಪ್ರೀಂ ಕೋರ್ಟ್ ಮುಂದೆ ಹೋಗಿದ್ದೆವು. ಬೆಂಗಳೂರು ನಗರಕ್ಕೆ ನೀರು ಹಂಚಿಕೆ ಬಗ್ಗೆ ಬೇಡಿಕೆ ಇಟ್ಟು ಮನವಿ ಮಾಡಿದ್ದೆವು. ಆಮೇಲೆ ಸುಪ್ರೀಂ ಕೋರ್ಟ್ ನೀರು ಹಂಚಿಕೆ ಮಾಡಿತು ಎಂದು ಅವರು ಹೇಳಿದರು.
ತಮಿಳುನಾಡು ತಕರಾರಿಲ್ಲ ಎಂದು ಹೇಳಿದೆ
ಮೆಟ್ಟೂರು ಬಳಿ ಅಣೆಕಟ್ಟು ಪ್ರದೇಶದ ಹಿಂದಕ್ಕೆ, ಅಂದರೆ ಗಡಿ ಪ್ರದೇಶದಲ್ಲಿ ಅಣೆಕಟ್ಟು ಕಟ್ಟಲು ನಮ್ಮ ತಕರಾರಿಲ್ಲ ಎಂದು ತಮಿಳುನಾಡು ವಕೀಲರೇ ಸುಪ್ರೀಂ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ ಎಂಬ ಅಂಶವನ್ನು ಮಾಜಿ ಮುಖ್ಯಮಂತ್ರಿಗಳು ಸದನದ ಗಮನಕ್ಕೆ ತಂದರು.
ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮೇಕೆದಾಟು ಯೋಜನೆ ಕಾರ್ಯಗತ ಮಾಡುವ ಬಗ್ಗೆ ಮಹತ್ವದ ಸಲಹೆ ನೀಡಿದ್ದಾರೆ. 67 ಟಿ ಎಂ ಸಿ ಸಾಮರ್ಥ್ಯದ ಜಲಾಶಯವನ್ನು ಒಂದೇ ಹಂತದಲ್ಲಿ ಮಾಡುವ ಬದಲು ಎರಡು ಹಂತಗಳಲ್ಲಿ ಮಾಡಿ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ನಗರಕ್ಕೆ 4.5 ಟಿ ಎಂ ಸಿ ನೀರು ಬಳಕೆ ಮಾಡುವುದು ಸೇರಿ, ರಾಜ್ಯಕ್ಕೆ ಹಂಚಿಕೆ ಆಗಿರುವ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಎರಡು ಹಂತಗಳು ಉತ್ತಮ ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಅವರು ವಿವರಿಸಿದರು.
ರಾಜ್ಯಕ್ಕೆ ಬೇಕಿರುವುದು ಕೇಂದ್ರ ಪರಿಸರಾತ್ಮಕ ಅನುಮೋಧನೆಯೇ ಹೊರತು ತಮಿಳುನಾಡಿನ ಒಪ್ಪಿಗೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಿ ಹೇಳಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರ ಬರೆದಿರುವ ನೆರೆ ರಾಜ್ಯದ ಮುಖ್ಯಮಂತ್ರಿಗಳು, ಬೆಂಗಳೂರಿಗೆ ಸುಪ್ರೀಂ ಕೋರ್ಟ್ ಹಂಚಿಕೆ ಮಾಡಿರುವ 4.5 ಟಿ ಎಂ ಸಿ ಸಾಮರ್ಥ್ಯದ ಅಣೆಕಟ್ಟು ಬಗ್ಗೆ ತಕರಾರು ತೆಗೆದಿಲ್ಲ. ಆದರೆ, ಕುಡಿಯುವ ನೀರು ಶೇಕರಣೆಗೆ 67 ಟಿ ಎಂ ಸಿ ಸಾಮರ್ಥ್ಯದ ಅಣೆಕಟ್ಟು ಯಾಕೆ ಎಂದು ಪ್ರಶ್ನೆ ಶೇಕರಣೆ ಮಾಡಿದ್ದಾರೆ. ಹೀಗಾಗಿ ಬೆಂಗಳೂರು ನೀರಿನ ಬಳಕೆಗೆ ಬೇಕಿರುವ ಅಣೆಕಟ್ಟು ಕಟ್ಟಲು ತಮಿಳುನಾಡು ವಿರೋಧ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸರ್ವಪಕ್ಷ ಸಭೆ ಬಳಿಕ ಮೊದಲ ಹಂತದಲ್ಲಿ ಜಲ ಸಂಪನ್ಮೂಲ ಸಚಿವರನ್ನು ದೆಹಲಿಗೆ ಕಳಿಸಿ ಒಪ್ಪಿಗೆ ಪಡೆಯುತ್ತೇವೆ. ಅದೂ ಆಗದಿದ್ದರೆ, ಲೋಕಸಭಾ ಸದಸ್ಯರ ನಿಯೋಗ ಕರೆದುಕೊಂಡು ಹೋಗುವುದಾಗಿ ಸರಕಾರ ಹೇಳಿದೆ. ಸುಖಾ ಸುಮ್ಮನೆ ಕಾಲಹರಣ ಮಾಡದೆ ಪರಿಸರಾತ್ಮಕ ಒಪ್ಪಿಗೆ ಪಡೆಯಬೇಕು ಎಂದು ಅವರು ಒತ್ತಾಯ ಮಾಡಿದರು.
ಕೇಂದ್ರೀಯ ಜಲ ಆಯೋಗದ ಸಭೆಯಲ್ಲಿ ಎರಡು ಮೂರು ಬಾರಿ ಚರ್ಚೆ ನಡೆಸಿದರೂ ತಮಿಳುನಾಡು ಸರ್ಕಾರ ಸಹಕಾರ ನೀಡಿಲ್ಲ. ಆ ಸಭೆಯಲ್ಲಿ ಯಾವುದೇ ಫಲಿತಾಂಶ ಬರುತ್ತಿಲ್ಲ. ಒಂಭತ್ತು ಜನರ ಸದಸ್ಯರಲ್ಲಿ ಎಲ್ಲಾ ರಾಜ್ಯದ ಒಬ್ಬರಿದ್ದಾರೆ. ಆದರೂ ನಮಗೆ ಅನುಮತಿ ತಡವಾಗುತ್ತಿದೆ ಎಂದು ಅವರು ಹೇಳಿದರು.