400 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು
by GS Bharath Gudibande
ಚಿಕ್ಕಬಳ್ಳಾಪುರ: ಭಾರತದ ಮೊತ್ತ ಮೊದಲ ಉಚಿತ ವೈದ್ಯಕೀಯ ಶಿಕ್ಷಣ ಕಾಲೇಜಾಗಿ ಮುದ್ದೇನಹಳ್ಳಿಯ ಸಂಕಲ್ಪಿತ ಮೆಡಿಕಲ್ ಕಾಲೇಜು ಸಾಕಾರಗೊಳ್ಳಲಿದ್ದು, ಈ ಸಾಧನೆಯ ಹಾದಿಯಲ್ಲಿ ಕೆಲವು ತೊಡಕುಗಳಿದ್ದರೂ ಎಲ್ಲವೂ ಸುಗಮವಾಗಿ ಸಾಗಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಸೇವಾ ಗ್ರಾಮದಲ್ಲಿ ಸತ್ಯಸಾಯಿ ಲೋಕಸೇವಾ ಸಂಸ್ಥೆಯಿಂದ ನಿರ್ಮಿಸಲಾಗುತ್ತಿರುವ 400 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು ಹಾಕಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಲ್ಲಿ ನಡೆಯುತ್ತಿರುವ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಉಚಿತ ಸೇವೆಯ ನಿಸ್ವಾರ್ಥ ಸೇವೆ ಕಂಡ ಬಳಿಕ ಮಾತು ಬಾರದೇ ಮೂಕನಾಗಿದ್ದೇನೆ. ಈ ಹಿಂದೆ ಹಲವು ಬಾರಿ ಇಲ್ಲಿಗೆ ಬರಲು ಕಾರ್ಯಕ್ರಮ ನಿಗದಿಯಾಗಿ ಬಳಿಕ ಸಮಯದ ಅಭಾವದಿಂದ ರದ್ದಾಗಿತ್ತು. ಆದರೆ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳ ಹೆಮ್ಮೆ ಎನಿಸುತ್ತಿದೆ. ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಹುಟ್ಟೂರಿಗೆ ನಾನಿಂದು ಭೇಟಿ ನೀಡಿರುವುದಕ್ಕೆ ಸಂತೋಷವಾಗಿದೆ. ಶ್ರೀ ಸತ್ಯಸಾಯಿ ಬಾಬಾ ಅವರ ಮಾರ್ಗದರ್ಶನದಿಂದ ಸೇವಾ ಸಮರ್ಪಣಾ ಭಾವದಿಂದ ನಿಸ್ವಾರ್ಥತೆಯಿಂದ ನಿರ್ವಹಿಸುತ್ತಿರುವ ಈ ಸೇವಾ ಕ್ಷೇತ್ರವು ಭಾರತದ ಎಲ್ಲ ಸಂಸ್ಥೆಗಳಿಗೂ ಮಾದರಿಯಾಗಿದ್ದು ಅನುಕರಣೀಯವಾಗಿದೆ ಎಂದರು.
ಇಂದು 400 ಹಾಸಿಗೆಗಳ ಉಚಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕು ಸ್ಥಾಪನೆ ನೆರವೇರಿಸಿದ್ದು ಈ ಆಸ್ಪತ್ರೆಯ ನಿರ್ಮಾಣಕ್ಕೆ ಕಾರಣವಾಗಿರುವ ಇಂದೂಬಾಯಿಯವರು ನನಗೂ ಪರಿಚಿತರೆಂಬುದು ಹೆಮ್ಮೆಯ ಸಂಗತಿ. ಸತ್ಯಸಾಯಿ ಬಾಬಾರವರು ಪುಟ್ಟಪರ್ತಿಯಲ್ಲಿ ಉಚಿತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಮುಂದಾದಾಗ ಅಗತ್ಯವಿದ್ದ ಸಿಮೆಂಟ್ ಅನ್ನು ಗುಜರಾತ್ʼನಿಂದ ಪೂರೈಸಲಾಗುತ್ತಿತ್ತು. ಈ ವೇಳೆ ಸಾಯಿಬಾಬಾರವರು ಈ ಯೋಜನೆಯ ಸಿಮೆಂಟ್ ಖರೀದಿಗೆ ತೆರಿಗೆ ವಿನಾಯಿತಿಗಾಗಿ ಪ್ರಸ್ತಾಪಿಸಿದ್ದರು. ಈ ಸಂಬಂಧ ಇಂದೂಬಾಯಿಯವರೇ ಓಡಾಡಿದ್ದು ಆಗ ನಮ್ಮ ಮನೆಯಲ್ಲಿ ಆತಿಥ್ಯ ನೀಡಿದ ನೆನಪಿದೆ ಎಂದು ಸ್ಮರಿಸಿಕೊಂಡರು.
ಆಸ್ಪತ್ರೆ ನಿರ್ಮಾಣದ ಜತೆಜತೆಗೆ ಇಲ್ಲೊಂದು ಉಚಿತ ವೈದ್ಯಕೀಯ ಶಿಕ್ಷಣ ಕಾಲೇಜನ್ನು ಸ್ಥಾಪಿಸುವ ಸಂಕಲ್ಪವನ್ನು ಇಲ್ಲಿನ ಸಂಸ್ಥೆ ಹೊಂದಿದ್ದು ಇದಕ್ಕೆ ಅಗತ್ಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಿ. ಉಚಿತ ಕಾಲೇಜು ಮಂಜೂರಾತಿಗೆ ಕೆಲವು ಕಾನೂನು ತೊಡಕುಗಳು ಎದುರಾಗಬಹುದು. ಆದರೆ ಸಂಕಲ್ಪದಂತೆ ಎಲ್ಲವೂ ನಡೆದರೆ ಈ ಹಾದಿ ಸುಗಮವಾಗಲಿದೆ ಎಂದರು.
ಈ ದೇಶದಲ್ಲಿ ಯಾರೂ ಊಹಿಸದ ಹಲವು ಸಂಗತಿಗಳು ನಡೆದಿವೆ. ಯಾರೂ ಕೂಡ ಊಹಿಸಿರದಿದ್ದ ಸಂವಿಧಾನದ ೩೭೦ನೇ ವಿಧಿ ರದ್ದಾಗಬಹುದಾದರೆ, ಯೋಗದಿನವನ್ನು ಇಡೀ ವಿಶ್ವವೇ ಆಚರಿಸುವುದಾದರೆ, ಶುದ್ಧವಾಗಿರುವ ಗಂಗಾ ನದಿಯಲ್ಲಿ ಸ್ನಾನ ಮಾಡಿ ಕಾಶಿಯಲ್ಲಿ ವಿಶ್ವೇಶ್ವರನನ್ನು ಆರಾಧಿಸುವ ದಿನ ಬಂದಿರುವುದಾದರೆ ಇದೂ ಕೂಡ ಭವಿಷ್ಯದಲ್ಲಿ ಸಾಧ್ಯವಾಗಲಿದೆ. ಆಗ ಭಾರತದ ಮೊಟ್ಟ ಮೊದಲ ಉಚಿತ ವೈದ್ಯಕೀಯ ಮಹಾವಿದ್ಯಾಲಯವಾಗಿ ಬಡ ವಿದ್ಯಾರ್ಥಿಗಳನ್ನು ವೈದ್ಯರನ್ನಾಗಿ ತಯಾರು ಮಾಡುವ ಸೇವಾ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರ ಪರಿಶ್ರಮದಿಂದ ಬಿಜೆಪಿ ಸರಕಾರದ ಯೋಜನೆಗಳ ಫಲವಾಗಿ ಇಂದು ಶಿಕ್ಷಣ ಪಡೆದ ವೈದ್ಯರು ಹಳ್ಳಿ ಹಳ್ಳಿಗೂ ತಮ್ಮ ಸೇವೆ ವಿಸ್ತರಿಸುವಂತಾಗಿದೆ. ಜನೌಷಧಿ ಕೇಂದ್ರಗಳಿಂದಾಗಿ ಕಡಿಮೆ ದರದಲ್ಲಿ ಬಡವರಿಗೆ ಔಷಧಿಗಳು ಲಭ್ಯವಾಗುತ್ತಿದೆ. ಯೋಗ ಮತ್ತು ಆಯುರ್ವೇದದ ಸಮ್ಮಿಲನದಿಂದ ಸರಕಾರಿ ಆಸ್ಪತ್ರೆಗಳಲ್ಲಿ ಭಾರತೀಯ ವೈದ್ಯ ಪದ್ದತಿಯ ಆಯುಷ್ ಕೇಂದ್ರಗಳ ಮೂಲಕ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸರಕಾರವು ಕೊರೋನಾ ಕಾಯಿಲೆಯ ನಿಯಂತ್ರಣದಲ್ಲಿ ಮತ್ತು ಲಸಿಕಾಕರಣದ ಅಭಿಯಾನ ಎರಡೂ ಸಂಧರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು ಭಾರತದಲ್ಲೇ ಅತ್ಯುತ್ತಮ ಮಾದರಿಯಾಗಿ ಕರ್ನಾಟಕ ಸರಕಾರ ದೊಡ್ಡಮಟ್ಟದಲ್ಲೇ ಲಸಿಕಾಕರಣ ನಡೆಸಿದ್ದು ಇಡೀ ಭಾರತದಲ್ಲಿ ಕೊರೋನಾ ವಿಷಯದಲ್ಲಿ ಕರ್ನಾಟಕ ಅತ್ಯಂತ ಸುರಕ್ಷಿತವಾಗಿದೆ. ಇದನ್ನು ಅತ್ಯಂತ ಸೂಕ್ಷ್ಮಮವಾಗಿ ಗಮನಿಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವನ್ನು ಅಭಿನಂದಿಸುತ್ತೇನೆ ಎಂದರು.
ಸದ್ಗುರು ಮಧುಸೂಧನ ಸಾಯಿ ಮಾತನಾಡಿ ಕೆಲವೇ ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಳಾ ಮೆಮೊರಿಯಲ್ ಆಸ್ಪತ್ರೆಗೆ ಚಾಲನೆ ನೀಡಿದ್ದರು. ಇದುವರೆಗೆ ಇಲ್ಲಿ ೧೯ ಸಾವಿರ ಮಕ್ಕಳು ಉಚಿತವಾಗಿ ಚಿಕಿತ್ಸೆ ಪಡೆದಿದ್ದಾರೆ. ಉಚಿತ ವೈದ್ಯಕೀಯ ಕಾಲೇಜಿನ ಚಿಂತನೆ ಕಂಡು ಕೆಲವರು ಈ ಚಿಂತನೆ ಹೊಸದಾಗಿದೆ ಎನ್ನತೊಡಗಿದ್ದಾರೆ. ಆದರೆ ನಾವು ಹೊಸದೇನನ್ನೂ ಮಾಡುತ್ತಿಲ್ಲ. ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ವಿದ್ಯೆ ಮಾರುತ್ತಿರಲಿಲ್ಲ. ದಾನ ಮಾಡಲಾಗುತ್ತಿತ್ತು. ಆಹಾರವನ್ನು ಬಯಸಿದವರಿಗೆ ಭಿಕ್ಷೆಯಂತೆ ನೀಡದೇ ಅತಿಥಿಗಳಂತೆ ಆದರಿಸುವ ಮಹೋನ್ನತ ಆದರ್ಶವನ್ನು ನಮ್ಮ ಸಂಸ್ಥೆಯಲ್ಲಿ ಅದನ್ನೇ ಮುಂದುವರೆಸಿದ್ದೇವೆ ಎಂದರು.
ಇದೇ ವೇಳೆ ಸತ್ಯಸಾಯಿ ಗ್ರಾಮದ ಸರಳಾ ಸ್ಮಾರಕ ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆಗೆ ಒಳಗಾಗಿ ಗುಣಮುಖರಾದ ಮೂವರು ಚಿಕ್ಕ ಮಕ್ಕಳನ್ನು ಅತಿಥಿಗಳು ಅಭಿನಂದಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಚಿಟಿಬಿ ನಾಗರಾಜ್, ಕೋಲಾರ ಸಂಸದ ಮುನಿಸ್ವಾಮಿ, ಶಾಸಕ ಅರವಿಂದ್ ಬೆಲ್ಲದ್, ನರಸಿಂಹಮೂರ್ತಿ ಮುಂತಾದವರಿದ್ದರು.