ಮಾರ್ಕೇಸ್ ಅವರು ಬರೆದ ಬರಹಗಾರನ ದುಸ್ಸಾಹಸಗಳು!
ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸ್; ಈ ಶತಮಾನದ ಸರ್ವಶ್ರೇಷ್ಠ ಬರಹಗಾರರಲ್ಲಿ ಒಬ್ಬರು. ಅವರ ಬರವಣಿಗೆಯ ಪೈಕಿ ಅವರ ಅಂಕಣ ಬರಹಗಳು ಅನೇಕ ಮರೆಮಾಚಲ್ಪಟ್ಟ ಮುಖಗಳನ್ನು ತೆರೆದಿಡುತ್ತವೆ. ಕನ್ನಡದ ಸತ್ವಯುತ ಕಥೆಗಾರರಲ್ಲಿ ಒಬ್ಬರು, ಕೇಶವ ಮಳಗಿ ಅವರು ಮಾರ್ಕೇಸ್ʼರ ಕೆಲ ಅಂಕಣ ಬರಹಗಳನ್ನು ʼಗದ್ಯ ಗಾರುಡಿʼ ಮೂಲಕ ಕನ್ನಡಕ್ಕೆ ತಂದಿದ್ದಾರೆ. ಸ್ವತಃ ಮಳಿಗಿ ಅವರಿಗೇ ಇಷ್ಟವಾದ ಅಂಕಣ ಬರಹವೊಂದು ಸಿಕೆನ್ಯೂಸ್ ನೌ ಓದುಗರಿಗಾಗಿ ಪ್ರಕಟಿಸಲಾಗಿದೆ. ಭಾನುವಾರದ ಬಿಡುವಿನ ಓದಿಗೆ ಇಷ್ಟವಾಗುವ ಬರಹವಿದು.
by Gabriel García Márquez
Kannada translation by Keshava Malagi
ಪುಸ್ತಕಗಳನ್ನು ಬರೆಯುವುದು ಆತ್ಮಹತ್ಯಾತ್ಮಕ ಕೆಲಸ. ತಕ್ಷಣದ ಫಲಾಪೇಕ್ಷೆಗೆ ಹೋಲಿಸಿದರೆ ಉಳಿದ ಯಾವ ಕೆಲಸಗಳೂ ಇದರಷ್ಟು ಸಮಯ, ಪರಿಶ್ರಮ, ಕಾಯಕ ನಿಷ್ಠೆಗಳನ್ನು ಬಯಸವು. ಎರಡು ನೂರು ಪುಟಗಳ ಪುಸ್ತಕವೊಂದನ್ನು ಬರೆದ ಲೇಖಕರೊಬ್ಬರು ಎಷ್ಟು ಗಂಟೆಗಳ ಕಾಲ ತಲ್ಲಣ ಅನುಭವಿಸಿದರು, ಬರೆಯುವ ವೇಳೆಯಲ್ಲಿ ಎದುರಾದ ಸಾಂಸಾರಿಕ ಕಲ್ಲೋಲಗಳನ್ನು ಹೇಗೆ ಸರಿದೂಗಿಸಿದರು ಮತ್ತು ಪ್ರಕಟಿತ ಪುಸ್ತಕಕ್ಕಾಗಿ ಅವರು ಪಡೆದ ಸಂಭಾವನೆ ಎಷ್ಟು? ಎನ್ನುವ ಪ್ರಶ್ನೆಗಳನ್ನು ಪುಸ್ತಕವನ್ನು ಓದಿ ಮುಗಿಸುವವರು ಕೇಳಿಕೊಳ್ಳುತ್ತಾರೆಂದು ನನಗನ್ನಿಸುವುದಿಲ್ಲ, ಅಂಗಡಿಯಲ್ಲಿ ಪುಸ್ತಕವನ್ನು ಖರೀದಿಸುವ ಓದುಗನೊಬ್ಬ ನೀಡುವ ಬೆಲೆಯ ಶೇಕಡ ಹತ್ತರಷ್ಟು ಮಾತ್ರ ಲೇಖಕನಿಗೆ ಸಂಭಾವನೆ ರೂಪದಲ್ಲಿ ದೊರಕುತ್ತದೆಂದು ಅರಿಯದವರಿಗೆ ಹೇಳಲು ಇದು ಸಕಾಲ. ಕೃತಿಯೊಂದಕ್ಕೆ ಇನ್ನೂರು ರೂಪಾಯಿ ತೆರುವ ಕೊಳ್ಳುಗನ ಹಣದಲ್ಲಿ ಇಪ್ಪತ್ತು ರೂಪಾಯಿ ಮಾತ್ರ ಬಡ ಬರಹಗಾರನ ಬದುಕಿಗೆ ಸಂದಾಯವಾಗುತ್ತದೆ. ಉಳಿದಿದ್ದು ಪುಸ್ತಕ ಪ್ರಕಟಿಸಿ, ಮಾರಾಟ ವ್ಯವಸ್ಥೆ ನೋಡಿಕೊಳ್ಳುವ ಪ್ರಕಾಶಕರಿಗೆ ಸಲ್ಲುತ್ತದೆ.
ಇದು ಅನ್ಯಾಯದ ಪರಮಾವಧಿ. ಏಕೆಂದರೆ, ಉತ್ತಮ ಲೇಖಕರು ಬರೆಯುವುದಕ್ಕಿಂತ ಹೆಚ್ಚಾಗಿ ಸಿಗರೇಟು ಸೇದುವವರು. ಹೀಗಾಗಿ, ಇನ್ನೂರು ಪುಟಗಳ ಪುಸ್ತಕ ಮುಗಿಸಲು ಅಂಥವರಿಗೆ ಎರಡು ವರ್ಷ ಕಾಲಾವಧಿ ಮತ್ತು ಇಪ್ಪತ್ತೊಂಬತ್ತು ಸಾವಿರ ಸಿಗರೇಟುಗಳು ಬೇಕಾಗುತ್ತವೆ. ಅಂದರೆ, ಲೆಕ್ಕಾಚಾರದ ಪ್ರಕಾರ ಒಂದು ಪುಸ್ತಕದಿಂದ ಅವರು ಸಂಪಾದಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಸಿಗರೇಟಿಗೆ ವ್ಯಯಿಸುತ್ತಾರೆ. “ಎಲ್ಲ ಪ್ರಕಾಶಕರು, ವಿತರಕರು ಮತ್ತು ಪುಸ್ತಕ ವ್ಯಾಪಾರಿಗಳು ಸಿರಿವಂತರಾಗಿರುತ್ತ, ಲೇಖಕರು ಮಾತ್ರ ಬಡವರಾಗಿದ್ದಾರೆ,” ಎಂದು ನನ್ನ ಲೇಖಕ ಗೆಳೆಯನೊಬ್ಬನ ಅಂಬೋಣ.
ಪುಸ್ತಕ ವ್ಯಾಪಾರವು ಇನ್ನೂ ನೆಲೆ ಕಂಡುಕೊಳ್ಳಬೇಕಿರುವ, ಆದರೆ, ದೊರಕುವುದೇ ಇಲ್ಲ, ಎನ್ನುವ ಸ್ಥಿತಿಯೇನೂ ಇಲ್ಲದ ಬಡ ದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ. ಯಶಸ್ವಿ ಲೇಖಕರ ಸಗ್ಗದಂತಿರುವ ಅಮೆರಿಕದಲ್ಲಿ ಪ್ರತಿ ಬರಹಗಾರನೂ ಹಗುರ ಹೊದಿಕೆಗಳೆಂಬ ಲಾಟರಿ ಆವೃತ್ತಿಗಳಿಂದ ರಾತ್ರೋರಾತ್ರಿ ಸಿರಿವಂತನಾಗಬಲ್ಲ. ಆದರೆ, ಇನ್ನೂ ಶೇಕಡ ಹತ್ತರ ಸಂಭಾವನೆಯಲ್ಲಿ ಮುಳಿಗೇಳುವ ಮಾನ್ಯತೆ ಪಡೆದ ನೂರಾರು ಲೇಖಕರೂ ಇದ್ದಾರೆ.
ಅಮೆರಿಕನ್ ಕಾದಂಬರಿಕಾರ ಟ್ರೂಮನ್ ಕಪೋಟೆ ತಮ್ಮ ‘ಕೋಲ್ಡ್ ಬ್ಲಡ್’ ಕಾದಂಬರಿಗಾಗಿ ಮೊದಲ ವಾರದಲ್ಲಿಯೇ ಲಕ್ಷಗಟ್ಟಲೆ ಸಂಭಾವನೆಯನ್ನು ಪಡೆದರು. ಜತೆಗೆ, ಚಲನಚಿತ್ರದ ಹಕ್ಕುಗಳಿಗಾಗಿ ಅಪಾರ ಮೊತ್ತವನ್ನೂ.
ಇದಕ್ಕೆ ಪ್ರತಿಕ್ರಿಯೆಯಂತೆ ಯಶಸ್ವಿ ಟ್ರೂಮನ್ ಕಪೋಟೆಯನ್ನು ಯಾರೂ ನೆನಪಿಸಿಕೊಳ್ಳದ ಕಾಲದಲ್ಲಿ ಅಲ್ಬೆ ಕಮೂವಿನ ಪುಸ್ತಕ ಅಂಗಡಿಯ ಕಪಾಟುನಲ್ಲಿ ಕಂಗೊಳಿಸುತ್ತಿರುತ್ತವೆ. ಆದರೆ, ಆತ ಪುಸ್ತಕಗಳನ್ನು ಬರೆಯುವ ಉದ್ದೇಶದಿಂದಲೇ ಬೇನಾಮಿ ಹೆಸರಿನಿಂದ ಚಲನಚಿತ್ರಗಳಿಗೆ ಚಿತ್ರಕಥೆ ಹೊಸೆದು ಹೊಟ್ಟೆ ಹೊರೆಯಬೇಕಾಯಿತು. ಸಾಯುವ ತುಸು ಮುಂಚೆ ಕಮೂಗೆ ದೊರಕಿದ ನೊಬೆಲ್ ಪುರಸ್ಕಾರದ ಮೊತ್ತ ಕಮೂರ ಕುಟುಂಬ ತಾಪತ್ರಯಗಳಿಗೆ ತಾತ್ಕಾಲಿಕ ಉಪಶಮನವಷ್ಟೇ ನೀಡಿತ್ತು. ಆ ಕಾಲದ ನಲ್ವತ್ತು ಸಾವಿರ ಡಾಲರುಗಳು ಮಕ್ಕಳು ಆಟವಾಡಿಕೊಳ್ಳುವಂಥ ಅಂಗಳವಿರುವ ಮನೆಯನ್ನು ಕೊಳ್ಳಲಷ್ಟೇ ಯೋಗ್ಯವಾಗಿತ್ತು. ಹಾಗೆ ನೋಡಿದರೆ, ನೊಬೆಲ್ ಪುರಸ್ಕಾರವನ್ನು ತಿರಸ್ಕರಿಸಿ ಜಾನ್ ಪಾಲ್ ಸಾರ್ತ್ರ ಒಳ್ಳೆಯದನ್ನೇ ಮಾಡಿದರು. ಖಾಸಗಿತನದ ಸ್ವಾತಂತ್ರ‍್ಯವನ್ನು ಗೌರವಿಸಬೇಕೆನ್ನುವ ನಿಲುವು ಅವರಿಗೊಂದು ಘನತೆಯನ್ನು ತಂದಿತ್ತು, ಪುಸ್ತಕಗಳ ಬೇಡಿಕೆಯನ್ನೂ ಹೆಚ್ಚಿಸಿತು.
ಅನೇಕ ಲೇಖಕರು ಹಳೆಯ ಕಾಲದಲ್ಲಿದ್ದ ಆಶ್ರಯದಾತ ವ್ಯವಸ್ಥೆಗೆ ಹಂಬಲಿಸುತ್ತಾರೆ. ಕಲಾವಿದರು ನೆಮ್ಮದಿಯಿಂದ ಕೆಲಸ ಮಾಡಿಕೊಂಡಿರಲಿ ಎಂದು ಆರ್ಥಿಕ ಬೆಂಬಲ ಒದಗಿಸುವ ಸಿರಿವಂತ ಸಭ್ಯರೇ ಈ ಆಶ್ರಯದಾತರು. ಕಲಾವಿದರನ್ನು ಉತ್ತೇಜಿಸುವ ಪೋಷಕರು ಈಗಲೂ ಇದ್ದಾರೆ, ಆದರೆ ಅಂಥವರು ಬೇರೆ ವಿಧದಲ್ಲಿ ಕಾಣುತ್ತಾರೆ. ಕೆಲವೊಮ್ಮೆ ತಮ್ಮ ತೆರಿಗೆಯನ್ನು ಹೊರೆಯನ್ನು ಇಳಿಸಿಕೊಳ್ಳ ಬಯಸುವ; ಸಾರ್ವಜನಿಕರಲ್ಲಿ ತಮ್ಮ ಕುರಿತು ಮನೆ ಮಾಡಿರುವ ಹೀನ ಅಭಿಪ್ರಾಯವನ್ನು ಹೋಗಲಾಡಿಸಿಕೊಳ್ಳಲು ಯತ್ನಿಸುವ ನಿಟ್ಟಿನಲ್ಲಿ ಕಲೆಯನ್ನು ಪ್ರೊತ್ಸಾಹಿಸುವ ಅನೇಕ ಬೃಹತ್ ಸಂಸ್ಥೆಗಳಿವೆ. ಆದರೆ ಬರಹಗಾರರಾದ ನಾವು ನಮಗನ್ನಿಸಿದ್ದನ್ನು ಮಾಡಲು ಬಯಸುತ್ತೇವೆ. ಧನ ಸಹಾಯ ನಮ್ಮ ಆಲೋಚನೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರಯ್ಯಕ್ಕೆ ಮುಳುವು ಎಂದು ಭಾವಿಸುತ್ತೇವೆ. ಅನುದಾನವು ಅನಪೇಕ್ಷಿತವಾದ ರಿಯಾಯಿತಿ ತೋರುತ್ತದೆ ಎಂದು ಬಗೆಯುತ್ತೇವೆ. ನನ್ನ ಕುರಿತೇ ಹೇಳುವುದಾದರೆ, ಬರವಣಿಗೆಗೆ ಯಾವುದೇ ರೀತಿಯ ಧನಸಹಾಯವನ್ನೂ ನಾನು ನಿರೀಕ್ಷಿಸುವುದಿಲ್ಲ. ಇದು ನನ್ನಲ್ಲಿ ಬೆರಗುಗೊಳಿಸುವ ಪಾಪಪ್ರಜ್ಞೆ ಹುಟ್ಟು ಹಾಕುತ್ತದೆಂಬ ಕಾರಣಕ್ಕಾಗಿ ಅಲ್ಲ. ಬದಲಿಗೆ, ಬರೆದು ಮುಗಿಸಿದಾಗ ನಾನು ಯಾರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇನೆ ಎನ್ನುವ ಸುಳಿವೂ ನನಗಿರುವುದಿಲ್ಲವಾದ್ದರಿಂದ. ಕೊನೆಯಲ್ಲಿ ನಾನು ಪ್ರಾಯೋಜಕರ ಸಿದ್ಧಾಂತವನ್ನು ಒಪ್ಪದಿದ್ದರೆ ಅದು ಅಸಮಂಜಸವೆನ್ನಿಸುತ್ತದೆ. ಪ್ರಾಯೋಜಕತ್ವ ಲೇಖಕರಲ್ಲಿ ವಿರೋಧಾಭಾಸಕರ ನಿಲುವನ್ನು ಹುಟ್ಟು ಹಾಕುತ್ತದೆ. ಇಂಥ ಒಪ್ಪಂದಗಳು ಸಂಪೂರ್ಣ ಅನೈತಿಕವೆಂದು ನನ್ನ ಅಭಿಪ್ರಾಯ.
ಆಶ್ರಯದಾತ ಪರಿಕಲ್ಪನೆಯು ಸ್ವಾತಂತ್ರ‍್ಯವನ್ನು ಕಟ್ಟಿ ಹಾಕುವ ಬಂಡವಾಳಶಾಯಿ ವ್ಯವಸ್ಥೆಯ ಒಂದು ವಿಧಾನ. ಇದನ್ನೇ ಸಮಾಜವಾದಿ ವ್ಯವಸ್ಥೆಯಲ್ಲಿ ಬರಹಗಾರ ಸರಕಾರದ ಪಗಾರ ತೆಗೆದುಕೊಳ್ಳುವ ನೌಕರ ಎಂಬ ವ್ಯವಸ್ಥೆಗೂ ಹೋಲಿಸಬಹುದು. ಲೇಖಕರನ್ನು ಮಧ್ಯವರ್ತಿಯ ಶೋಷಣೆಯಿಂದ ತಪ್ಪಿಸುವ ಸಮಾಜವಾದಿ ವ್ಯವಸ್ಥೆಯ ಕ್ರಿಯೆಯನ್ನು ತಾತ್ವಿಕವಾಗಿ ಒಪ್ಪಬಹುದು. ಈ ವ್ಯವಸ್ಥೆ ಎಷ್ಟು ಕಾಲ ಉಳಿಯುವುದೋ ತಿಳಿಯದಾದರೂ ಈ ವರೆಗಿನ ಆಚರಣೆಯಿಂದ ಹೇಳುವುದಾದರೆ ಅನ್ಯಾಯ ಸರಿಪಡಿಸಬೇಕೆಂಬ ಆಶಯವೇನೋ ಸರಿಯಾಗಿದೆ. ಆದರೆ, ಆಶಯವನ್ನು ಮೀರಿ ಅದು ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಇತ್ತೀಚಿನ ಇಬ್ಬರು ಸೋವಿಯತ್ ಲೇಖಕರನ್ನು ಸೈಬಿರಿಯಾದ ಶ್ರಮ ಶಿಬಿರಕ್ಕೆ ಕಳಿಸಿದ್ದು ಅವರು ಕೆಟ್ಟ ಲೇಖಕರು ಎಂದಲ್ಲ. ಬದಲಿಗೆ, ಅವರು ತಮ್ಮ ಆಶ್ರಯದಾತ ಸರ್ಕಾರದ ನಿಲುವನ್ನು ಒಪ್ಪಲಿಲ್ಲವೆಂಬ ಕಾರಣಕ್ಕೆ. ಬರಹವು ಎಂಥ ಅಪಾಯವನ್ನು ಸೃಷ್ಟಿಸಬಲ್ಲುದು ಎಂಬುದನ್ನಿದು ಎತ್ತಿ ತೋರಿಸುತ್ತದೆ. ಲೇಖಕನೊಬ್ಬನಿಗೆ ತಾನು ಚೆನ್ನಾಗಿ ಬರೆಯಬೇಕು ಎಂಬುದನ್ನು ಬಿಟ್ಟರೆ ಬೇರಾವುದೇ ಕ್ರಾಂತಿಕಾರಿ ಕಟ್ಟುಪಾಡುಗಳಿಲ್ಲವೆಂಬುದು ನನ್ನ ವೈಯಕ್ತಿಕ ನಿಲುವು.
ಆಡಳಿತ ಯಾವುದೇ ಇರಲಿ, ರೂಢಿಗತ ವ್ಯವಸ್ಥೆಗೆ ಸವಾಲು ಎಸೆಯುವುದೇ ಲೇಖಕನ ಕೆಲಸ. ಸಮರ್ಥನಾವಾದಿಗಳು (conformist) ದಾರಿಗಳ್ಳರಾಗಿದ್ದು ಕೆಟ್ಟ ಲೇಖಕರೇ ಆಗಿರಲು ಸಾಧ್ಯ. ಈ ವಿಷಾದಕರ ಅರಿವಿನ ಬಳಿಕವೂ ಲೇಖಕರು ಯಾಕೆ ಬರೆಯುತ್ತಾರೆ? ಉತ್ತರವು ಭಾವುಕವಾಗಿದ್ದಷ್ಟೂ ಪ್ರಾಮಾಣಿಕವಾಗಿರುತ್ತದೆ. ನೀನೊಬ್ಬ ಕಪ್ಪು ಜನಾಂಗದವನೋ, ಯಹೂದಿಯೋ ಆಗಿರುವಂತೆಯೇ ಲೇಖಕನೂ ಆಗಿದ್ದೀಯ. ಯಶಸ್ಸು ಉತ್ತೇಜನ ಕೊಡುತ್ತದೆ. ಓದುಗರ ಬೆಂಬಲ ಚೇತೋಹಾರಿಯಾಗಿರುತ್ತದೆ. ಆದರೆ, ಇವೆಲ್ಲ ಪೂರಕ ಫಲಗಳಷ್ಟೇ. ಒಳ್ಳೆಯ ಲೇಖಕನೊಬ್ಬ ಇವುಗಳ ಆಮಿಷವಿಲ್ಲದೆ, ತನ್ನ ಪುಸ್ತಕಗಳು ಮಾರಾಟವಾಗದಿದ್ದರೂ, ತನ್ನ ಹರಿದ ಚಪ್ಪಲಿಗಳಲ್ಲಿಯೇ ಬರವಣಿಗೆಯಲ್ಲಿ ತೊಡಗಿಕೊಂಡಿರುತ್ತಾನೆ. ಇದು ಬರಹಗಾರರಾಗಲು ಇರುವ ಅಡೆತಡೆಗಳನ್ನು ಎತ್ತಿ ತೋರಿಸುತ್ತದೆ. ಇದ್ದರೇನು? ಅಸಂಖ್ಯ ಮಹಿಳೆಯರು, ಪುರುಷರು ತಾವು ಏನನ್ನೋ ಸಾಧಿಸಬೇಕೆಂದು ಛಲದಲ್ಲಿ ತಮ್ಮ ಜೀವವನ್ನೇ ಪಣವಾಗಿಟ್ಟಿದ್ದಾರೆ. ಅವರು ಗಂಭೀರವಾದುದನ್ನೇ ನುಡಿಯುತ್ತಿದ್ದಾರೆ. ಅದಕ್ಕೊಂದು ಅರ್ಥವಿದೆಯೋ ಇಲ್ಲವೋ ಯಾರಿಗೆ ಗೊತ್ತು?
***
ಜುಲೈ 1966
ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸ್
ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸ್‘ ; ಜಗತ್ತಿನ ಸಾಹಿತ್ಯಲೋಕಕ್ಕೆ ಬೆಲೆ ಕಟ್ಟಲಾರದ ಮೌಲಿಕ ಕೃತಿಗಳನ್ನು ನೀಡಿದ ಅನನ್ಯ ಬರಹಗಾರ. ಲ್ಯಾಟಿನ್ ಅಮೆರಿಕದ ಕೊಲಂಬಿಯಾ ದೇಶದವರು. ಸ್ಪಾನಿಷ್ ಭಾಷೆಯಲ್ಲಿ ಮಹತ್ವದ ಕೃತಿಗಳನ್ನು ಬರೆದು, ತಾವು ಹುಟ್ಟಿ ಬೆಳೆದ ಲ್ಯಾಟಿನ್ ಅಮೆರಿಕದ ಸರ್ಕಾರದ ನೀತಿ, ಅಸಮಾನತೆ, ಜನರ ಚಿಂತೆನೆ, ಭಾವನೆಗಳು, ಕಂದಾಚಾರದ ಆಚರಣೆಗಳನ್ನು ತಮ್ಮ ಅದ್ಭುತ ಬರವಣಿಗೆಯ ಮೂಲಕ ಜಗತ್ತಿನ ಮುಂದಿಟ್ಟವರು. 1982ರಲ್ಲಿ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.
ಕೇಶವ ಮಳಗಿ
ಕೇಶವ ಮಳಗಿ ; ಕನ್ನಡದ ವರ್ತಮಾನ ಸಂದರ್ಭದ ಮಹತ್ವದ ಕಥೆಗಾರ. ಟಾಲ್ʼಸ್ಟಾಯ್ & ಮಾಕ್ಸಿಂ ಗಾರ್ಕಿ ಅವರಿಂದ ಗಾಢ ಪ್ರಭಾವಕ್ಕೆ ಒಳಗಾದವರು. ರಷ್ಯನ್ ಸಾಹಿತ್ಯದ ಬಗ್ಗೆ ಅಪಾರ ಒಲವುಳ್ಳವರು. ‘ಕಡಲ ತೆರೆಗೆ ದಂಡೆ’, ‘ಮಾಗಿ ಮೂವತ್ತೈದು’, ‘ವೆನ್ನೆಲ ದೊರೆಸಾನಿ’, ‘ಹೊಳೆ ಬದಿಯ ಬೆಳಗು’ ಸಂಕಲನಗಳು ಪ್ರಕಟವಾಗಿವೆ. ‘ಕುಂಕುಮ ಭೂಮಿ’, ‘ಅಂಗಧ ಧರೆ’ ಅವರ ಕಾದಂಬರಿಗಳಾದರೆ ‘ನೇರಳೆ ಮರ’ ರೂಪಕ ಲೋಕ ಕಥನ ನಿರೂಪಿಸುತ್ತದೆ. ಸೊಗಸಾದ ರೀತಿಯಲ್ಲಿ ಅನುವಾದ ಮಾಡಿರುವ ಮಳಗಿ ಅವರು ‘ಬೋರಿಸ್ ಪಾಸ್ತರ್‌ನಾಕ್: ವಾಚಿಕೆ’, “ನೀಲಿ ಕಡಲ ಹಕ್ಕಿ’ (ಕತೆಗಳು), ‘ಮದನೋತ್ಸವ’ (ಕಾದಂಬರಿ), ‘ಸಂಕಥನ’ (ಫ್ರೆಂಚ್ ಸಾಹಿತ್ಯ, ಸಮಾಜ, ಸಂಸ್ಕೃತಿ, ಸಾಹಿತ್ಯ ವಿಮರ್ಶೆ), ‘ಕಡಲಾಚೆಯ ಚೆಲುವೆ’ (ಫ್ರೆಂಚ್ ಕಥೆಗಳು), ಆಲ್ಬರ್ಟ್ ಕಾಮು (ತರುಣ ವಾಚಿಕೆ) ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಅಕಥ ಕಥಾ’ ಅವರ ಮತ್ತೊಂದು ಕತಾ ಸಂಕಲನ 2020ರಲ್ಲಿ ಪ್ರಕಟವಾಗಿದೆ.
- ಗದ್ಯ ಗಾರುಡಿ
- ಬೆಲೆ: 150 ರೂಪಾಯಿ
- ಪ್ರಕಟಣೆ: ದೀಪಂಕರ