ಚಿಕ್ಕಬಳ್ಳಾಪುರದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ವಿಷನೀರಿಗೆ ಮೀನುಗಳ ಹಾರ!
ಮತ್ಸ್ಯಸಂಪತ್ತು ಸಾಯುತ್ತಿದೆ! ಕೆರೆಯೂ ಸಾಯುತ್ತಿದೆ!!, ಜನ ಜಾನುವಾರುಗಳಿಗೆ ನಿಧಾನ ವಿಷವಿಕ್ಕಿ ಕೊಲ್ಲುವ ನರಹಂತಕ ಪ್ರವೃತ್ತಿಗೆ ಕೊನೆ ಎಂದು?
ಚಿಕ್ಕಬಳ್ಳಾಪುರ: ಜಿಲ್ಲೆಯ ಜನ ಮತ್ತು ಜಾನುವಾರುಗಳಿಗೆ ವಿಷವಿಕ್ಕಿ ನಿಧಾನವಾಗಿ ಕೊಲ್ಲುವ ನರಹಂತಕ ಪ್ರವೃತ್ತಿ ಮುಂದುವರಿದಿದ್ದು, ಅದಕ್ಕೆ ಮೊದಲ ಹಂತವಾಗಿ ಜನ ತಿನ್ನುವ ಮೀನುಗಳ ಮಾರಣಹೋಮವೇ ನಡೆದು ಹೋಗುತ್ತಿದೆ.
ಇಷ್ಟಾದರೂ ಜಿಲ್ಲಾಡಳಿತ ಕಣ್ಮುಚ್ಚಿ ಕೂತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಆಗೊಮ್ಮೆ ಈಗೊಮ್ಮೆ ಮಾತ್ರ ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದರೆ, ನಿಕಟಪೂರ್ವ ಜಿಲ್ಲಾ ಉಸ್ತುವಾರಿ ಸಚಿವರು ಇವೆಂಟ್ʼಗಳನ್ನು ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ.
ಈಗಾಗಲೇ ಅಂತರ್ಜಲದಲ್ಲಿ ಯುರೇನಿಯಂ ಧಾತು ಪತ್ತೆಯಾಗಿ ಬೆಚ್ಚಿಬಿದ್ದಿರುವ ಚಿಕ್ಕಬಳ್ಳಾಪುರ ಜನರು, ಜಿಲ್ಲೆಯ ಕೆರೆಗಳನ್ನು ಸಂಪೂರ್ಣವಾಗಿ ನಾಶ ಮಾಡುವ ವ್ಯವಸ್ಥಿತ ಹುನ್ನಾರದ ಈಗೀಗ ಎಚ್ಚರಗೊಳ್ಳುತ್ತಿದ್ದಾರೆ. ಕಣ್ಮುಂದೆಯೇ ನಡೆಯುವ ಅನ್ಯಾಯಗಳ ಬಗ್ಗೆ ಮಾತನಾಡಲು ಶುರು ಮಾಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ಕೆಲ ಕಿ.ಮೀ.ಗಳ ದೂರದಲ್ಲಿರುವ ಹಾಗೂ ಚಿಕ್ಕಬಳ್ಳಾಪುರ ನಗರಕ್ಕೆ ಅಂಟಿಕೊಂಡೇ ಇರುವ ಅಮಾನಿ ಗೋಪಾಲಕೃಷ್ಣ ಕೆರೆಗೆ ಹೆಚ್.ಎನ್.ವ್ಯಾಲಿ ಮೂಲಕ ಹರಿಯುತ್ತಿರುವ ಬೆಂಗಳೂರು ಜನರ ಮಲ-ಮೂತ್ರ ಹಾಗೂ ನೈಟ್ರೇಟ್, ಪಾಸ್ಪರಸ್ʼನಂಥ ವಿಷಕಾರಿ ಲವಣಾಂಶಗಳುಳ್ಳ ತ್ಯಾಜ್ಯ ನೀರು ಬಂದು ಸೇರುತ್ತಿದೆ. ಇದರ ಜತೆಗೆ ಕೆರೆಯು ಧನದಾಹಿಗಳು. ಅಧಿಕಾರಶಾಹಿಗೆ ಆಹಾರವಾಗುವ ಲಕ್ಷಣಗಳೂ ಗೋಚರವಾಗುತ್ತಿವೆ. ಯಾವುದಾದರೂ ಅಭಿವೃದ್ಧಿಯ ನೆಪ ಹೇಳಿ ಇಡೀ ಕೆರೆಯನ್ನು ನುಂಗಿಹಾಕುವ ದುಷ್ಪ್ರಯತ್ನವೂ ನಡೆಯುತ್ತಿದೆ.
ಅದಕ್ಕೆ ಪೂರಕ ಎನ್ನುವಂತೆ ಇದೇ ಕೆರೆಯಲ್ಲಿ ಆರು ಕೋಟಿ ರೂಪಾಯಿ ವೆಚ್ಚ ಮಾಡಿ ಬೆಂಗಳೂರು ಲಾಲ್ʼಬಾಗ್ʼನಲ್ಲಿರುವ ಗಾಜಿನ ಮನೆಯಂಥ ಗಾಜಿನ ಮನೆಯನ್ನು ನಿರ್ಮಿಸಲಾಗಿತ್ತು. ನಿರ್ಮಿಸುವಾಗಿದ್ದ ಆಸಕ್ತಿ ನಿರ್ವಹಣೆಯಲ್ಲಿ ಕಾಣದಾಗಿದೆ. ಪರಿಣಾವಾಗಿ ಅಕ್ಟೋಬರ್ʼನಲ್ಲಿ ಸುರಿದ ಭಾರೀ ಮಳೆಯಿಂದ ಈ ಗಾಜಿನ ಮನೆ ಜಲಾವೃತವಾಗಿತ್ತು. ಈಗಲೂ ನೀರಿನ ರಭಸಕ್ಕೆ ಅಲ್ಲಿಗೆ ಬಂದು ಸೇರಿರುವ ತ್ಯಾಜ್ಯವನ್ನು ಸ್ವಚ್ಛ ಮಾಡಲಾಗಿಲ್ಲ. ಇದಕ್ಕೆ ಸರಿಯಾಗಿ ಕೆರೆಗೆ ಹೆಚ್.ಎನ್.ವ್ಯಾಲಿ ನೀರು ಬಂದು ಸೇರಿದ್ದು, ಅದು ಸಂಪೂರ್ಣವಾಗಿ ಮಲೀನವಾಗಿ ಗಬ್ಬುನಾತ ಬೀರುತ್ತಿದೆ.
ಈಗಾಗಲೇ ರಿಯಲ್ ಎಸ್ಟೇಟ್ ಕುಳಗಳ ಕಣ್ಣಿಗೆ ಬಿದ್ದಿರುವ, ಲಪಟಾಯಿಸಲು ಪ್ರಭಾವಿಗಳೇ ಹೊಂಚು ಹಾಕುತ್ತಿರುವ, ರಾಜಕೀಯ ನಾಯಕರಿಗೂ ಆಸೆ ಹುಟ್ಟಿಸುತ್ತಿರುವ ಈ ಕೆರೆ ಹೆದ್ದಾರಿ ಪಕ್ಕದಲ್ಲೇ ವಿಶಾಲವಾಗಿ ಹರಡಿಕೊಂಡಿದೆ. ಕೆಲ ದಿನಗಳ ಹಿಂದೆ ಅಮ್ಯೂಸ್ʼಮೆಂಟ್ ಪಾರ್ಕ್ ಮಾಡುವುದಾಗಿ, ಅದನ್ನೂ ಕಟ್ಟಿ ಜನರಿಗೆ ಮನರಂಜನೆ ಕೊಡುವ ಕನಸು ಕಂಡಿದ್ದ ಕೆಲವರು, ಅದು ಸಾಧ್ಯವಾಗದೇ ಹೋದಾಗ ವಿಷಕಾರಿ ನೀರು ತುಂಬಿಸಿ ಅದನ್ನು ಶಾಶ್ವತವಾಗಿಯೇ ಮುಗಿಸಿಬಿಡುವ ಹುನ್ನಾರ ನಡೆಸಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.
ಮೀನುಗಳ ಮಾರಣಹೋಮ
ಅಮಾನಿ ಗೋಪಾಲಕೃಷ್ಣ ಕೆರೆಗೆ ವಿಷಕಾರಿ ನೀರು ಸೇರುತ್ತಿರುವ ಪರಿಣಾಮ ಕೆರೆ ಸಂಪೂರ್ಣವಾಗಿ ತನ್ನ ಗುಣಲಕ್ಷಣಗಳನ್ನು ಕಳೆದುಕೊಂಡು, ಜಲಚರಗಳ ಪಾಲಿಗೆ ಸಾವಿನ ಮನೆಯಾಗಿದೆ. ಎರಡು ದಿನಗಳಿಂದ ಕೆರೆಯಲ್ಲಿ ಬೃಹತ್ ಗಾತ್ರದ ಮೀನುಗಳು ಸತ್ತು ದಡಕ್ಕೆ ಬಂದು ಬಿದ್ದಿವೆ. ಸಾಲುಸಾಲಾಗಿ ದಡದಲ್ಲಿ ಬಿದ್ದಿರುವ ಮೀನುಗಳನ್ನು ಕಂಡು ಸ್ಥಳೀಯರು ಹೌಹಾರುತ್ತಿದ್ದಾರೆ. ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಹಾಯಾಗಿದ್ದಾರೆ. ಅವರಿನ್ನೂ ಯುಗಾದಿ ಮತ್ತು ಹೊಸತೊಡಕು ಹ್ಯಾಂಗೋವರ್ʼನಿಂದಲೇ ಹೊರಬಂದಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಕೆಲದಿನಗಳ ಹಿಂದೆ ಚಿಕ್ಕಬಳ್ಳಾಪುರದ ಅತಿ ದೊಡ್ಡಕೆರೆ ಕಂದವಾರ ಕೆರೆ ಮತ್ತು ರಂಗಸ್ಥಳದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ಸನ್ನಿಧಿಯಲ್ಲಿರುವ, ಚೋಳರು ಕಟ್ಟಿಸಿರುವ ರಂಗಧಾಮ ಕೆರೆಯಲ್ಲೂ ಮೀನುಗಳು ವಿಷಕಾರಿ ನೀರಿಗೆ ಸಿಕ್ಕಿ ರಾಶಿರಾಶಿಯಾಗಿ ಸತ್ತು ಹೋಗಿದ್ದವು. ಎರಡೂ ಕೆರೆಗಳ ಚಿತ್ರಗಳನ್ನು ಸಿಕೆನ್ಯೂಸ್ ನೌ ವಿಸ್ತೃತವಾಗಿ ವರದಿ ಮಾಡಿತ್ತು. ಈಗ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಮೀನುಗಳು ಮತ್ತು ಜಲಚರಗಳ ಸಾವಿನ ಕೇಕೆ ಆರಂಭವಾಗಿದೆ.
ಸುಟ್ಟ ಗುರುತುಗಳು
ಕೆರೆಯ ಕೆಲ ಭಾಗದಲ್ಲಿ ಬೆಳೆದಿದ್ದ ಗಿಡಗಂಡೆ, ಹುಲ್ಲು ಸುಟ್ಟುಹೋಗಿರುವ ಗುರುತುಗಳು ಕಾಣುತ್ತಿವೆ. ಇತ್ತೀಚೆಗೆ ಜಿಲ್ಲೆಯಲ್ಲಿ ಕೈಗಾರಿಕೆಗಳ ವಿಷಕಾರಿ ತ್ಯಾಜ್ಯ ನೀರನ್ನು ಮೀಸಲು ಅರಣ್ಯ ಪ್ರದೇಶ ಹಾಗೂ ಕೆರೆಗಳಲ್ಲಿ ರಾತ್ರೋರಾತ್ರಿ ವಿಲೇವಾರಿ ಮಾಡುವ ದುಷ್ಟ ಕೆಲಸ ನಡೆಯುತ್ತಿದೆ.
ಕಳೆದ ವರ್ಷ ಗುಡಿಬಂಡೆ ಮೀಸಲು ಅರಣ್ಯ ಪ್ರದೇಶದ ವಾಟದಹೊಸಹಳ್ಳಿ ಮೀಸಲು ಅರಣ್ಯದಲ್ಲಿ ಟ್ಯಾಂಕರ್ ಲಾರಿಯೊಂದು ವಿಷಕಾರಿ ತ್ಯಾಜ್ಯ ನೀರು ವಿಲೇವಾರಿ ಮಾಡುವಾಗ ಸಿಕ್ಕಿಬಿದ್ದಿತ್ತು. ನಂತರ ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರದ ಬಳಿ ಇದೇ ರೀತಿಯ ರಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಲಾಗಿತ್ತು. ಇಲ್ಲಿನ ಸುಟ್ಟ ಗುರುತುಗಳನ್ನು ಗಮನಿಸಿದರೆ ಹೆದ್ದಾರಿ ಪಕ್ಕದಲ್ಲೇ ಇರುವ ಈ ಕೆರೆಯಲ್ಲಿ ಇಂಥದ್ದೇ ರಾಸಾಯನಿಕ ನೀರನ್ನು ವಿಲೇವಾರಿ ಮಾಡುತ್ತಿದೆಯಾ? ಎನ್ನುವ ಅನುಮಾನ ಕಾಡುತ್ತಿದೆ.
ಕೆಳಗಿನ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಅಪಾಯಕಾರಿ ಕಳೆ ಬೆಳೆದಿದೆ
ತ್ಯಾಜ್ಯನೀರು ತುಂಬಿರುವುದಕ್ಕೆ ಸಾಕ್ಷಿಯಾಗಿ ಇಡೀ ಕೆರೆಯ ತುಂಬಾ ವಾಟರ್ ಹೈಸಿಂತ್ #WaterHyacinth (ಕಳೆ) ಬೆಳೆದು ನಿಂತಿದೆ. ಬೆಂಗಳೂರಿನ ಬೆಳ್ಳಂದೂರು, ವರ್ತೂರು, ಕೆ.ಆರ್.ಪುರದ ವೆಂಗಯ್ಯನ ಕೆರೆ, ಹೆಬ್ಬಾಳದ ಕೆರೆಗಳಲ್ಲಿ ಬೆಳೆದಿರುವ ಕಳೆ, ಅಮಾನಿ ಗೋಪಾಲಕೃಷ್ಣ ಕರೆಯಲ್ಲೂ ಬೆಳೆದಿದೆ. ಯಾವುದೇ ಕೆರೆಯಲ್ಲಿ ಪರಿಶುದ್ಧವಾದ ಮಳೆ ನೀರಿದ್ದರೆ ಇದು ಬೆಳೆಯುವುದಿಲ್ಲ. ತ್ಯಾಜ್ಯ ನೀರಿದ್ದರೆ ಮಾತ್ರ ವಿಪರೀತವಾಗಿ ಬೆಳೆಯುತ್ತದೆ.
ಸತ್ತ ಮೀನು ಮುಚ್ಚಿಡುವ ಹುನ್ನಾರ
ವಿಷಕಾರಿ ನೀರಿನಿಂದ ಜಿಲ್ಲೆಯ ಹಲವಾರು ಕೆರೆಗಳಲ್ಲಿ ಮೀನುಗಳು ನಿರಂತರವಾಗಿ ಸಾಯುತ್ತಿವೆ. ಈ ಬಗ್ಗೆ ಸಿಕೆನ್ಯೂಸ್ ನೌ ನಿರಂತರವಾಗಿ ವರದಿಗಳನ್ನು ಮಾಡಿತ್ತು. ಅದರಿಂದ ಎಚ್ಚೆತ್ತ ಅಧಿಕಾರಿಗಳು ಮತ್ತು ಮೀನು ಸಾಕಣೆ ಗುತ್ತಿಗೆದಾರರು ಕೆರೆಗಳಿಗೆ ಮೀನುಗಳನ್ನು ಬಿಡುವುದನ್ನೇ ನಿಲ್ಲಿಸಿದ್ದರು. ಅಲ್ಲದೆ, ದಿನವೂ ಸತ್ತು ದಡಕ್ಕೆ ಬಂದು ಬೀಳುತ್ತಿದ್ದ ಮೀನುಗಳನ್ನು ಬೆಳಗ್ಗೆ ಜನರ ಕಣ್ಣಿಗೆ ಬೀಳುವ ಮೊದಲೇ ತೆಗೆದು ಎಲ್ಲೋ ಹೂಳುವುದೋ ಅಥವಾ ಸುಟ್ಟು ಹಾಕುವದೋ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಸತ್ತ ಮೀನುಗಳನ್ನು ಮರೆ ಮಾಚಿ ಸಾಕ್ಷ್ಯ ನಾಶ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ದಟ್ಟವಾಗಿ ಪೊದೆಗಳಂತೆ ಬೆಳೆಯುತ್ತಿರುವ ಹೈಸಿಂತ್ ಕಳೆಯನ್ನು ನಾಶ ಮಾಡಲು ಆಗುತ್ತಿಲ್ಲ.
ಇವರ ಗ್ರಹಚಾರವೆಂದರೆ, ಯುಗಾದಿ ಮತ್ತು ಹೊಸತೊಡಕು ಕಾರಣಕ್ಕೆ ಮೀನು ಸತ್ತ ಮೀನು ಹೆಕ್ಕಿ ನಾಶಪಡಿಸುವ ಕೆಲಸಗಾರರು ನಾಲ್ಕೈದು ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಹೀಗಾಗಿ ಗೋಪಾಲಕೃಷ್ಣ ಕೆರೆಯಲ್ಲಿ ಮೀನುಗಳು ಹೆಚ್ಚಾಗಿ ಸತ್ತುಬಿದ್ದಿವೆ. ಇದು ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ, ಪರಿಸರ ಇಲಾಖೆ ಸೇರಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ತಲೆನೋವು ಉಂಟು ಮಾಡಿದೆ. ಅಲ್ಲದೆ, ಈ ಸಾಕ್ಯ್ಯಾಧಾರಗಳನ್ನು ಸಂಗ್ರಹಿಸಿರುವ ಕೆಲ ಪರಿಸರ ಪ್ರೇಮಿಗಳು ಈ ಮಾರಣಹೋಮಕ್ಕೆ ತಾರ್ಕಿಕ ಅಂತ್ಯ ಕಾಣಿಸಲೇಬೇಕು ಎನ್ನುವ ಉದ್ದೇಶದಿಂದ ನ್ಯಾಯಾಲಯದ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆಂಬ ಅಂಶವೂ ಸಿಕೆನ್ಯೂಸ್ ನೌ ಗಮನಕ್ಕೆ ಬಂದಿದೆ.
ಇನ್ನೊಂದು ಮುಖ ಬಯಲು
ಈ ದುರಂತದ ಬಗ್ಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ವಿವರವಾದ ಮಾಹಿತಿ ನೀಡಿದ್ದಾರೆ. ಅವರು ಅಮಾನಿ ಗೋಪಾಲಕೃಷ್ಣ ಕೆರೆ ಮಾತ್ರವಲ್ಲದೆ, ಜಿಲ್ಲೆಯ ಕೆರೆಗಳನ್ನು ಮುಗಿಸುವ ಇನ್ನೊಂದು ಮುಖವನ್ನು ಬಿಚ್ಚಿಟ್ಟಿದ್ದಾರೆ.
ತೀರಾ ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ಆಯ್ದ ಕೆರೆಗಳನ್ನು ಮೀನು ಸಾಕಾಣಿಕೆಗೆ ಗುತ್ತಿಗೆ ನೀಡಲಾಗಿದೆ. ದುರಂತವೆಂದರೆ ಗುತ್ತಿಗೆ ನೀಡಲಾದ ಎಲ್ಲಾ ಕೆರೆಗಳು ಹೆಚ್.ಎನ್.ವ್ಯಾಲಿ ನೀರು ಹರಿಯುವ ಕೆರೆಗಳೇ ಆಗಿವೆ. ಚಿಕ್ಕಬಳ್ಳಾಪುರಕ್ಕೆ ಅಂಟಿಕೊಂಡಿರುವ ಗೋಪಾಲಕೃಷ್ಣ ಕೆರೆಗೂ ಸಹ ಬೆಂಗಳೂರಿನ ತ್ಯಾಜ್ಯ ನೀರು ಹರಿಯುತ್ತದೆ. ಈಗ ಮೀನುಗಳು ಸತ್ತಿರುವುದಕ್ಕೆ ಅಧಿಕಾರಿಗಳು ಇದಾಗಲೇ ತಾಲೀಮು ನಡೆಸಿದ ಅಥವಾ ಕಂಠಪಾಠ ಮಾಡಿದ ಕಟ್ಟುಕತೆಗಳನ್ನು ಹೇಳುತ್ತಾರೆ. ಒಂದೆರಡು ದಿನ ಈ ವಿಷಯ ಸದ್ದು ಮಾಡುತ್ತದೆ ಅಷ್ಟೇ. ಚಿಕ್ಕಬಳ್ಳಾಪುರದ ಚರಂಡಿ ನೀರು ಬಂದು ಸೇರಿದ್ದರಿಂದ ಮೀನುಗಳು ಸತ್ತಿವೆ ಎಂಬುದು ಒಂದು ವಾದ, ಆದರೆ ಅದು ವಾಸ್ತವಕ್ಕೆ ಎಷ್ಟು ಸಮೀಪ ಎಂಬುದನ್ನೂ ವಿಶ್ಲೇಷಿಸಬೇಕಲ್ಲವೆ?
ಪ್ರತೀ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಜೀವ ವೈವಿಧ್ಯತಾ ಸಮಿತಿ ಇರಲೇಬೇಕೆಂದು ಕಾಯ್ದೆ ಹೇಳುತ್ತದೆ. ಆದರೆ ಜಿಲ್ಲೆಯ ಎಷ್ಟು ಗ್ರಾಮ ಪಂಚಾಯಿತಿ ಹಾಗೂ ನಗರಸಭೆಗಳಲ್ಲಿ ಈ ಸಮಿತಿ ಅಸ್ತಿತ್ವದಲ್ಲಿದೆ? ಒಂದು ವೇಳೆ ಇದ್ದಿದ್ದರೆ ಮೀನು ಸಾಕಾಣಿಕೆಗೆ ಕೆರೆಗಳನ್ನು ಹರಾಜು ಮಾಡುವಾಗ ಇಲ್ಲವೇ ವ್ಯಾಲಿಯ ನೀರನ್ನು ಹರಿಸಲು ಕೆರೆಗಳಲ್ಲಿ ಹೂಳೆತ್ತುವಾಗ ಈ ಸಮಿತಿಯ ಒಪ್ಪಿಗೆ ಪಡೆಯಲಾಗಿದೆಯೇ? ಇದನ್ನು ಗಣನೆಗೆ ತೆಗೆದುಕೊಳ್ಳದೇ ಬೇಕಾದಂತೆ ನಿಯಮಗಳನ್ನು ಬದಲಿಸಿ ಕಾಮಗಾರಿಗಳನ್ನು ಕೈಗೊಂಡು ಈಗ ನೀರಿಲ್ಲದ ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಕೆಲವರಿಗೆ ಗುತ್ತಿಗೆಯನ್ನೂ ನೀಡಲಾಗಿದೆ.
ರಸಾಯನಿಕ ಪದಾರ್ಥಗಳೇ ಅಧಿಕ ಪ್ರಮಾಣದಲ್ಲಿ ಕರಗಿರುವ ತ್ಯಾಜ್ಯ ನೀರಿನಲ್ಲಿ ಬೆಳೆದ ಮೀನುಗಳು ಮಾನವನ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಪೂರಕ ಎಂಬುದನ್ನು ವಿವೇಚಿಸಬೇಕಿದೆ. ಇದಕ್ಕೂ ಮೊದಲು ಕೆರೆಗಳಿಗೆ ನೀರು ನಿಜವಾಗಿಯೂ ಹರಿಯುತ್ತವೇ ಎಂಬುದು ಮೂಲಭೂತ ಪ್ರಶ್ನೆ. ಒಂದು ವೇಳೆ ನೀರು ಹರಿದರೂ, ಮೀನುಗಳು ಬೆಳೆಯುವ ಹಂತದಲ್ಲಿ ನೀರು ಖಾಲಿಯಾದರೆ ಆಗ ನೀರನ್ನು ಪೂರೈಸುವವರಾದರೂ ಯಾರು? ಇಂತಹ ಸಾಮಾನ್ಯ ಪ್ರಶ್ನೆಗಳಿಗೂ ಉತ್ತರವಿಲ್ಲದೆ ಮೀನು ಸಾಕಾಣಿಕೆಗೆ ಕೆರೆಗಳನ್ನು ಹರಾಜು ಮಾಡಿರುವುದು ಅವೈಜ್ಞಾನಿಕ ನಡೆ.
ಕೆರೆಗಳಲ್ಲಿ ಮೀನುಗಳು ಸತ್ತಿರುವುದು ಸ್ಥಳೀಯ ಜೀವ ವೈವಿಧ್ಯತೆಗೆ ಮಾರಕ. ಇಲ್ಲಿಯವರೆಗೂ ನೀರಿಲ್ಲದಿದ್ದರೂ ಸ್ಥಳೀಯ ಗಿಡಗಂಟೆಗಳು ಮಾತ್ರ ಬೆಳೆದಿದ್ದನ್ನು ನಾವು ಕಾಣುತ್ತಿದ್ದೆವು. ಆದರೆ ಈಗ ನಮ್ಮ ಭಾಗದಲ್ಲಿ ನೋಡಿರದ ಹೊಸ ಹೊಸ ಪ್ರಬೇಧದ ಜಲಸಸ್ಯಗಳು ನಮ್ಮ ಕೆರೆಗಳಲ್ಲಿ ಕಂಡು ಬರುತ್ತಿವೆ. ಈ ಮಧ್ಯೆ ಕೆರೆಗಳಿಗೆ ಹರಿಯುವ ಕೊಳಚೆ ನೀರು ಸ್ಥಳೀಯ ಜಲಚರಗಳಿಗೆ ಪೂರಕವೇ ಎಂಬುದನ್ನೂ ಪರೀಕ್ಷಿಸಬೇಕಿದೆ. ಈ ತರಹದ ಯಾವುದೇ ಸಂಶೋಧನೆಯನ್ನು ಕೈಗೊಳ್ಳದೆ ಏಕಾಏಕಿ ಮೀನು ಸಾಕಲು ಕೆರೆಗಳನ್ನು ಹರಾಜು ಹಾಕಿದ್ದನ್ನು ಗಮನಿಸಿದರೆ ಬಹುಶಃ ರಾಜಕಾರಣಿಗಳಾದಿಯಾಗಿ ಯಾವೊಬ್ಬ ಅಧಿಕಾರಿಗೂ ಶ್ರೀಸಾಮಾನ್ಯರಿಗೆ ಸಹಾಯ ಮಾಡಬೇಕೆಂಬ ಇಂಗಿತ ಇಲ್ಲದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಆಂಜನೇ ರೆಡ್ಡಿ ಆರೋಪ ಮಾಡಿದ್ದಾರೆ.
ಡಾ.ಸುಧಾಕರ್ ಅವರೇ ಜಾಗತಿಕ ಅಭಿವೃದ್ಧಿ ಎಂದರೆ ಇದೇನಾ?
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲೇ ಇರುವ ಚಿಕ್ಕಬಳ್ಳಾಪುರವನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸುವುದಾಗಿ ತಾವು ಶಾಸಕರಾದ ದಿನದಿಂದಲೂ ಹೇಳುತ್ತಿರುವ ಡಾ.ಕೆ.ಸುಧಾಕರ್ ಅವರು ಕೊಟ್ಟ ಮಾತನ್ನು ಮರೆತಿರುವಂತಿದೆ.
ಜಿಲ್ಲೆಯ ಕೆರೆಗಳಿಗೆ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡದ ಹಾಗೂ ಬೆಂಗಳೂರು ಜನರ ಮಲಮೂತ್ರ, ಅಪಾಯಕಾರಿ ಲವಣಾಂಶಗಳುಳ್ಳ ವಿಷಯುಕ್ತ ನೀರು ಕೆರೆಗಳಿಗೆ ಸೇರುವುದರಲ್ಲಿ ಸಚಿವರ ಪಾತ್ರವೂ ಇದೆ ಎನ್ನುವುದು ಗುಟ್ಟಿನ ಸಂಗತಿಯೇನಲ್ಲ.
ಚಿಕ್ಕಬಳ್ಳಾಪುರವನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಮಾಡುವುದಾಗಿ ಜನರಿಗೆ ನಿರಂತರ ಸುಳ್ಳು ಹೇಳುತ್ತಲೇ ಬಂದ ಸುಧಾಕರ್ ಅವರು, 2018 ಜುಲೈ 22ರಂದು ಇಟಲಿಯ ಖ್ಯಾತ ಆರ್ಕಿಟೆಕ್ಟ್ ನಿಕೋಲಸ್ ಅವರನ್ನು ಅಮಾನಿ ಗೋಪಾಲಕೃಷ್ಣ ಕೆರೆ ಮತ್ತು ಸೂಲಾಲಪ್ಪನ ದಿನ್ನೆಗೆ ಕರೆತಂದು ಅಡ್ಡಾಡಿಸಿದ್ದರು. ಅಂದು ಹೇಳಿಕೆ ನೀಡಿದ್ದ ಸುಧಾಕರ್, “ಚಿಕ್ಕಬಳ್ಳಾಪುರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಎಂದರೆ ಕೆರೆಗಳಿಗೆ ಕೊಚ್ಚೆ ನೀರು ತುಂಬಿಸಿ ಮೀನುಗಳನ್ನು ಕೊಲ್ಲುವುದಾ ಸಚಿವರೇ?” ಎಂದು ಜನರು ಕೇಳುತ್ತಿದ್ದಾರೆ.
Comments 1