ಬೆಲೆ ಏರಿಕೆ ವಿರುದ್ಧ ಪಾದಯಾತ್ರೆಗೆ ಅಡ್ಡಿ; ಶೋಭಾಯಾತ್ರೆ ಮಾತ್ರ ಅವಕಾಶ: HDK ಆಕ್ರೋಶ
ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳ ನಿರಂತರ ಏರಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಬೆಲೆಗಳ ಏರಿಕೆ ವಿರೋಧಿಸಿ ಫ್ರೀಡಂ ಪಾರ್ಕಿನಲ್ಲಿ ಬೆಂಗಳೂರು ಮಹಾನಗರ ಜಾತ್ಯತೀತ ಜನತಾದಳ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; ಬೆಲೆ ಏರಿಕೆ ವಿರುದ್ಧ ಪ್ರತಿಭಟನಾ ಮೆರವಣಿಗೆ ಮಾಡಲು ಅವಕಾಶ ಕೊಡದ ರಾಜ್ಯ ಸರ್ಕಾರ, ಶೋಭಾಯಾತ್ರೆಗೆ ಅವಕಾಶ ನೀಡಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ, ಇದರ ಬಗ್ಗೆ ತುಟಿ ಬಿಚ್ಚದ ಮುಖ್ಯಮಂತ್ರಿಗಳು ಧರ್ಮಗಳ ನಡುವೆ ಯುದ್ಧಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ವಿರುದ್ಧ ಇಂದು ನಗರದಲ್ಲಿ ನಮ್ಮ ಪಕ್ಷದಿಂದ ಪ್ರತಿಭಟನಾ ಮೆರವಣಿಗೆ ನಡೆಯಬೇಕಿತ್ತು. ಜತೆಗೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರವನ್ನು ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಬದಲಿಗೆ ಆಡಳಿತಾರೂಢ ಬಿಜೆಪಿ ತನಗೆ ಬೇಕಾದ ಸಂಘಟನೆಗಳು ಇಷ್ಟ ಬಂದಾಗಲೆಲ್ಲ ಹಮ್ಮಿಕೊಳ್ಳುವ ಶೋಭಾಯಾತ್ರೆಗೆ ಅವಕಾಶ ನೀಡುತ್ತಾರೆ ಎಂದು ಕಿಡಿಕಾರಿದರು.
ಇಂದು ದಿನಬಳಕೆ ವಸ್ತುಗಳು ಗಗನಕ್ಕೆ ಏರುತ್ತಿವೆ. ಹೀಗಾಗಿ ಪಕ್ಷದವತಿಯಿಂದ ಕೇಂದ್ರ, ರಾಜ್ಯ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಉಜ್ವಲ ಸ್ಕೀಂನಡಿ ಗ್ಯಾಸ್ ಸಿಲಿಡಂರ್ ಮೂರು ತಿಂಗಳು ಉಚಿತವಾಗಿ ಕೊಡ್ತೀವಿ ಅಂದ್ರು. ಈಗ ಗ್ಯಾಸ್ ಸಿಲಿಂಡರ್ ಬೆಲ ಎಷ್ಟಾಗಿದೆ ಗೊತ್ತಾ? 1000 ರೂಪಾಯಿ ದಾಟಿದೆ ಎಂದು ಕುಮಾರಸ್ವಾಮಿ ಅವರು ವಿವರಿಸಿ ಹೇಳಿದರು
ರಾಜ್ಯದಲ್ಲಿ ಈ ರೀತಿ ಬೆಲೆ ಏರಿಕೆ ಆಗುತ್ತಿದ್ದರೆ ಯಾವ ಬಡ ಕುಟುಂಬ ಮನೆ ಕಟ್ಟಲು ಸಾಧ್ಯ. ಕಬ್ಬಿಣದ ಬೆಲೆ ಟನ್ ಗೆ ಒಂದು ಲಕ್ಷ ರೂಪಾಯಿ ದಾಟಿದೆ. ಸಿಮೆಂಟ್ ಬೆಲೆಯಲ್ಲಿ ಚೀಲಕ್ಕೆ 500 ರುಪಯಿವರೆಗೂ ಮುಟ್ಟಿದೆ. ಹೀಗೆಲ್ಲ ಆದರೆ ಸಾಮಾನ್ಯ ಜನ ಬದುಕುವುದು ಹೇಗೆ? ಎಂದು ಪ್ರಶ್ನೆ ಮಾಡಿದರು.
ಕೇಂದ್ರದಿಂದ ಬಿಸಿ, ರಾಜ್ಯದಿಂದ ಶಾಕ್
ಕೇಂದ್ರ ಸರಕಾರವು ನಿರಂತರವಾಗಿ ತೈಲ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನರಿಗೆ ಬಿಸಿ ಮೇಲೆ ಬಿಸಿ ಮುಟ್ಟಿಸುತ್ತಿದೆ. ಇನ್ನು ರಾಜ್ಯ ಸರಕಾರ ಈಗ ವಿದ್ಯುತ್ ದರ ಏರಿಸುವ ಮೂಲಕ ಶಾಕ್ ನೀಡಿದೆ. ಈಗ ಹಾಲಿನ ಬೆಲೆ ಏರಿಸಲು ಹೊರಟಿದೆ. ಈ ಬೆಲೆ ಏರಿಕೆಯ ಫಲ ರೈತರಿಗೆ ಸಿಗುತ್ತಾ? ಎಂದು ಅವರು ಪ್ರಶ್ನಿಸಿದರು.
ಬೆಲೆ ಏರಿಕೆಯ ಬಗ್ಗೆ ಜನರಲ್ಲಿ ತೀವ್ರ ವ್ಯಕ್ತವಾಗುತ್ತಿದೆ. ಅದನ್ನು ವಿಷಯಾಂತರ ಮಾಡಿ ಧರ್ಮದ ವಿಚಾರದಲ್ಲಿ ಗಲಾಟೆ ಸೃಷ್ಟಿ ಮಾಡಲಾಗುತ್ತಿದೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೊಟಕ್ಕೆ ಬೆಂಕಿ ಹಾಕ್ತಾ ಇದ್ದಾರೆ. ಹಿಜಾಬ್ ವಿಚಾರ ಸಣ್ಣದಾಗಿದ್ದಾಗಲೇ ಚಿವುಟಿ ಹಾಕಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಅವರು ದೂರಿದರು.
ಅಲ್ ಖೈದಾ ಮುಖಂಡನ ವಿಡಿಯೋ ಬಂದ ಮೇಲೆ ಈಗ ಮುಖ್ಯಮಂತ್ರಿ ತನಿಖೆಗೆ ಆದೇಶ ಮಾಡಿದ್ದಾರೆ. ಆರಂಭದಲ್ಲೇ ಹಿಜಾಬ್ ವಿಚಾರವಾಗಿ ಸರಿಯಾದ ಕ್ರಮ ವಹಿಸಿದ್ದಿದ್ದರೆ ಈಗ ಹೀಗೆ ಆಗುತ್ತಿತ್ತಾ? ಡಾ.ಮನಮೋಹನ್ ಸಿಂಗ್ ಅವರನ್ನು ಮಾತೆತ್ತಿದರೆ ಮೌನಿ ಪ್ರಧಾನಿ ಅಂತೆಲ್ಲ ಟೀಕೆ ಮಾಡುತ್ತಿದ್ದ ಬಿಜೆಪಿ ಈಗ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಹಾಗಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಯಾಕೆ ಮೌನಿ ಆಗಿದ್ದಾರೆ? ಹಾಗಾದರೆ ಅವರನ್ನು ಮೌನಿ ಮುಖ್ಯಮಂತ್ರಿ ಎಂದು ಕರೆಯಬೇಕು ಮಾಜಿ ಮುಖ್ಯಮಂತ್ರಿಗಳು ಹಾಲಿ ಮುಖ್ಯಮಂತ್ರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಗೆ ಎಚ್ಚರಿಕೆ
ಸರಕಾರದ ವಿರುದ್ಧ ಮಾತಾಡಿದವರಿಗೆ ಗಡಿಪಾರು ಮಾಡುವ ಅಥವಾ ದೇಶ ದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಿ ಕೇಸ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯು ಬೆಂಬಲ ಕೊಡುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಸದಾ ಕಾಲ ಬಿಜೆಪಿ ಸರಕಾರಲ್ ಇರಲು ಸಾಧ್ಯವಿಲ್ಲ. ಹಾಗಾಗಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ಕೊಡ್ತೀನಿ. ಕಳೆದ ವರ್ಷಗಳಲ್ಲಿ ಏನಾಯಿತು? ಎರಡು ರಾಷ್ಟ್ರೀಯ ಪಕ್ಷಗಳು ಯಾರ ಮನೆ ಬಾಗಿಲಿಗೆ ಬಂದವು ಅಂತ ಗೊತ್ತಿದೆ. ಪೊಲೀಸರಿಗೆ ಸಂಬಳ ಕೊಡುತ್ತ ಇರುವುದು ಶಾಸಕರು, ಮಂತ್ರಿಗಳು ಅಲ್ಲ. ರಾಜ್ಯದ ಜನರ ತೆರಿಗೆ ಹಣದಿಂದ ನಿಮಗೆ ಸಂಬಳ ಕೊಡುತ್ತಿರುವುದು ಅನ್ನುವುದು ನೆನಪಿರಲಿ ಎಂದು ಪೊಲೀಸ್ ಇಲಾಖೆಗೆ ಕಟುವಾದ ಎಚ್ಚರಿಕೆ ನೀಡಿದರು.
ಹಿಂದೂ ಸಂಘಟನೆಗಳಿಗೆ ಸವಾಲು
ಯಾವ ವಿಶ್ವ ಹಿಂದೂ ಪರಿಷತ್, ಯಾವ ಭಜರಂಗದಳ, ಯಾವ ಆರೆಸೆಸ್, ನಿಮಗೆ ಯೋಗ್ಯತೆ ಇದ್ದರೆ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡಿ. ಅದು ಬಿಟ್ಟು ಹಲಾಲ್, ಜಟ್ಕಾ ಇಂತಾ ವಿಚಾರಗಳಲ್ಲಿ ಹೋರಾಡ್ತೀರಾ? ಹಿಂದು ವಿಶ್ವ ಪರಿಷತ್, ಭಜರಂಗದಳ ರೈತರು ಬೆಳೆಯುವ ಬೆಳೆಯನ್ನು ಖರೀದಿ ಮಾಡ್ತಾರಾ? ಬೀದಿ ಬದಿ ವ್ಯಾಪಾರಿಗಳ ಪರಿಸ್ಥಿತಿ ಏನಾಗಿದೆ ಈ ಸರ್ಕಾರ ಅವರ ಬಗ್ಗೆ ಏನಾದ್ರೂ ಯೋಚನೆ ಮಾಡಿದೆಯಾ. ತಿನ್ನುವ ವಿಚಾರದಲ್ಲಿ ಧರ್ಮ ಬೆರೆಸಿರುವ ಈ ನೀತಿಗೆಟ್ಟ ಸರ್ಕಾರದ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದರು.
ಜನರ ಕಷ್ಟ ಸುಖಕ್ಕೆ ದನಿ ಎತ್ತುತ್ತಿರುವವರು ನಾವು. ನಮ್ಮ ಪಕ್ಷ. ಆ ಸಂಕಷ್ಟ ಸಮಯದಲ್ಲಿ ಕೊರೊನಾದಿಂದ ಸಾವಿರಾರು ಕುಟುಂಬ ಬೀದಿ ಪಾಲಾಗಿವೆ. ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಈಗ ಬೆಲೆ ಏರಿಕೆಯಿಂದ ಜನ ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ಹೇಳುತ್ತಿದ್ದೇನೆ, ಈ ಸರ್ಕಾರದ ಪಾಪದ ಕೊಡ ತುಂಬಿದೆ. ಸಾಮರಸ್ಯ ಕೆಡಿಸುವ ಕೆಲಸದ ವಿರುದ್ಧ ನಾನು ದನಿ ಎತ್ತುತ್ತಿದ್ದೇವೆ ಎಂದರು ಅವರು.
ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ಮಾತನಾಡಿದರು. ಶಾಸಕ ದಾಸರಹಳ್ಳಿ ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ ಎ ಶರವಣ ಅವರೂ ಮಾತನಾಡಿ ರಾಜ್ಯ ಮಾತ್ತ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಎಲ್ಲ ಶಾಸಕರು, ಮಾಜಿ ಶಾಸಕರು, ಹಿರಿಯ – ಕಿರಿಯ ನಾಯಕರು, ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.