ಹೊಸ ಬಾಂಬ್ ಸಿಡಿಸಿದ ರಮೇಶ್ ಜಾರಕಿಹೋಳಿ
ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈ ಹಿಂದೆ ನನ್ನ ವಿರುದ್ಧ ಸಿಡಿ ತಯಾರಿಸಿದ ಮಹಾನ್ ನಾಯಕನ ಕೈವಾಡವಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಈ ಹಿಂದೆ ನನ್ನ ವಿರುದ್ಧ ಸಿಡಿ ತಯಾರಿಸಿದ ಮಹಾನ್ ನಾಯಕನೇ ಈಶ್ವರಪ್ಪ ಪ್ರಕರಣದಲ್ಲೂ ಶಾಮೀಲಾಗಿದ್ದಾರೆ. ಈ ಕುರಿತು ಸೋಮವಾರ ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ಕರೆದು ಎಲ್ಲ ದಾಖಲೆಗಳನ್ನೂ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಸಚಿವ ಈಶ್ವರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು. ತನಿಖೆ ನಡೆದು ವರದಿ ಬರುವವರೆಗೂ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯಲಿ ಎಂದು ಸಲಹೆ ನೀಡಿದರು.
ಸಂತೋಷ್ ಪಾಟೀಲ್ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ನನಗೆ ಪರಿಚಿತನಾಗಿದ್ದ. ಇತ್ತೀಚೆಗಷ್ಟೇ ಅವನಿಗೆ ವಿವಾಹವಾಗಿ ಚಿಕ್ಕ ಮಗು ಕೂಡ ಇದೆ. ಆತುರಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ತುಂಬ ನೋವು ತಂದಿದೆ ಎಂದು ತಿಳಿಸಿದರು
ಅಷ್ಟಕ್ಕೂ ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳೀಯ ಶಾಸಕರ ಅನುಮತಿಯಿಲ್ಲದೆ ಕಾಮಗಾರಿ ನಡೆಸಲು ಹೇಗೆ ಸಾಧ್ಯ? ವರ್ಕ್ ಆರ್ಡರ್ ಕೊಡದಿದ್ದಾಗ ಸಂತೋಷ್ ಯಾರ ಮಾತು ಕೇಳಿ ನಾಲ್ಕು ಕೋಟಿ ಮೊತ್ತದ ಕಾಮಗಾರಿಗಳನ್ನು ನಡೆಸಿದ್ದ ಎಂದು ಪ್ರಶ್ನಿಸಿದರು.
ಆತ್ಮಹತ್ಯೆ ನಂತರ ನಾಟಕವಾಡುವವರು ಕಾಮಗಾರಿ ನಡೆಸುವಾಗ ಅವರ ಗಮನಕ್ಕೆ ಬಂದಿರಲಿಲ್ಲವೆ ಇದರ ಹಿಂದೆಯೂ ಮಹಾನ್ ನಾಯಕ ಮತ್ತು ಮಹಾನ್ ನಾಯಕಿಯ ಪಾತ್ರವಿದೆ ಎಂದು ದೂರಿದರು.