ಸಿಡಿದೆದ್ದ ಗುತ್ತಿಗೆದಾರರ ಸಂಘ; ಕೆಂಪಣ್ಣ ಬತ್ತಳಿಕೆಯಲ್ಲಿ ಇನ್ನಷ್ಟು ಬ್ರಹ್ಮಾಸ್ತ್ರಗಳು; 40% ಕಮೀಷನ್ ಗಿರಾಕಿಗಳ ಬಗ್ಗೆ ಅಲರ್ಟ್ ಆದ ಬಿಜೆಪಿ ವರಿಷ್ಠರು
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿರುವ ಬೆನ್ನಲ್ಲೆ, ಬೊಮ್ಮಾಯಿ ಸಂಪುಟದ ಇನ್ನಾವ ಸಚಿವರಿಗೆ ಕಾದಿದೆ ಕಂಟಕ ಎನ್ನುವ ಪ್ರಶ್ನೆ ಎದುರಾಗಿದೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು; “ಬಿಜೆಪಿ ಸರಕಾರದ 40% ಕಮೀಷನ್ ಗಿರಾಕಿಗಳು ಯಾರು ಯಾರಿದ್ದಾರೆ ಎಂಬ ಬಗ್ಗೆ ತಮ್ಮಲ್ಲಿ ದಾಖಲೆಗಳಿವೆ, ಅವುಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು.
ಆ ಪೈಕಿ ಮುಖ್ಯವಾಗಿ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ.ಕೆ.ಸುಧಾಕರ್ ಅವರ ವಿರುದ್ಧ ನೇರ ಆರೋಪಗಳನ್ನು ಮಾಡಿದ್ದ ಕೆಂಪಣ್ಣ ಅವರು; ಸುಧಾಕರ್ ಅವರು ನೋಡಿಕೊಳ್ಳುತ್ತಿರುವ ಎಲ್ಲ ಇಲಾಖೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿದ್ದರು. ಇವರಲ್ಲದೆ, ಇನ್ನೂ ಹಲವಾರು ಸಚಿವರು, ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಅವರು ಸುಳಿವು ನೀಡಿದ್ದರು.
ಈ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸಚಿವ ಸುಧಾಕರ್ ಅವರು; “ಕೆಂಪಣ್ಣ ಕಾಂಗ್ರೆಸ್ ಪಕ್ಷದ ಏಜೆಂಟ್, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ” ಎಂದು ಗುಟುರು ಹಾಕಿದ್ದರು.
ಏತನ್ಮಧ್ಯೆ, 40% ಕಮೀಷನ್ ಉರುಳು ಬಿಜೆಪಿಗೆ ದೊಡ್ಡ ಕಂಟಕವಾಗಿ ಪರಿಣಮಿಸುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ಮುಂದಿನ ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದ ಆ ಪಕ್ಷದ ನಾಗಾಲೋಟಕ್ಕೆ 40% ಕಮೀಷನ್ ಹಾಗೂ ಸಂತೋಷ್ ಸಾವು ಬ್ರೇಕ್ ಹಾಕಿದೆ.
ಇದಲ್ಲದೆ, ಬಿಜೆಪಿ ಕೆಲ ಸಚಿವರು ತಮ್ಮ ಇಲಾಖೆಗಳಲ್ಲಿ ನಡೆಯುವ ಎಲ್ಲ ಕಾಮಗಾರಿಗಳನ್ನು ತಮ್ಮ ಕುಟುಂಬ ಸದಸ್ಯರ ಮೂಲಕ ನಿಯಂತ್ರಿಸುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದು, ಅನೇಕ ಗುತ್ತಿಗೆದಾರರು ಈ ಮೂಲಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಶೀಘ್ರದಲ್ಲೇ ಈ ಎಲ್ಲ ಮಾಹಿತಿ ಜನರ ಮುಂದೆ ಇಡಲಾಗುವುದು ಎಂದು ಕೆಂಪಣ್ಣ ಅವರು ಹೇಳಿದ್ದಾರೆ.
ಇದರಿಂದ ಆಗುತ್ತಿರುವ ಹಾನಿಯ ಬಗ್ಗೆ ಪಕ್ಷದ ಹೈಕಮಾಂಡ್ ಅಲರ್ಟ್ ಆಗಿದೆ ಎಂದು ಗೊತ್ತಾಗಿದ್ದು, ಈಶ್ವರಪ್ಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ವರಿಷ್ಠರು. ಯಾರೆಲ್ಲ ಸಚಿವರ ಮೇಲೆ ಗಂಭೀರ ಆರೋಪಗಳು ಕೇಳಿ ಬರುತ್ತಿವೆ ಹಾಗೂ ಗುತ್ತಿಗೆದಾರರ ಸಂಘದವರು ಯಾರೆಲ್ಲ ಸಚಿವರ ಮೇಲೆ ಗುರುತರ ಆರೋಪಗಳನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ವರಿಷ್ಠರು ಕೇಳಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಕೆಂಪಣ್ಣ ಅವರು; ಕರ್ನಾಟಕದಲ್ಲಿ ಕರಪ್ಷನ್ ಅಂಕೆ ಮೀರಿ ಹೋಗಿದೆ. ಎಲ್ಲ ಕಡೆ ಬರೀ ಕಮೀಷನ್ ವ್ಯವಹಾರವೇ ನಡೆಯುತ್ತಿದೆ. ಕಮೀಷನ್ ಕೊಡದೇ ಬಿಲ್ ಪಾಸಾಗಲ್ಲ. ನಮ್ಮ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಕುರಿತು ಸಿಬಿಐ ತನಿಖೆ ನಡೆಸಬೇಕು ಇಲ್ಲವೇ ಹೈಕೋರ್ಟ್ʼನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಮತ್ತೊಮ್ಮೆ ಒತ್ತಾಯ ಮಾಡಿದ್ದಾರೆ.