ನಾಲ್ಕು ದಶಕಗಳ ಹೋರಾಟಕ್ಕೆ ಸಾಕ್ಷಿಯಾಗಿದ್ದ ಭಾಗ್ಯನಗರ; ನಾಳೆ ಹುಟ್ಟೂರಿನಲ್ಲಿ ಕಾಮ್ರೇಡ್ ಅಂತ್ಯಕ್ರಿಯೆ
ಬಾಗೇಪಲ್ಲಿ: ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರನ್ನು, ಅವರ ಹೋರಾಟಕ್ಕೆ ನಾಲ್ಕು ದಶಕಗಳ ಕಾಲ ಸಾಕ್ಷಿಯಾಗಿದ್ದ ಬಾಗೇಪಲ್ಲಿ ಭಾರವಾದ ಹೃದಯದಿಂದ ಬೀಳ್ಕೊಟ್ಟಿತು.
ರೆಡ್ಡಿ ಅವರ ಕುಟುಂಬದವರ ಅಭಿಲಾಶೆಯ ಮೇರೆಗೆ ನಾಳೆ (ಶನಿವಾರ) ಅವರ ಹುಟ್ಟೂರಾದ ಚಿಂತಾಮಣಿ ತಾಲೂಕಿನ ಭೈರಬಂಡ್ಲ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಗಣ್ಯರಿಂದ ಅಂತಿಮ ದರ್ಶನ
ಬಾಗೇಪಲ್ಲಿಯಲ್ಲಿ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ಶ್ರೀರಾಮರೆಡ್ಡಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅಗಲಿದ ನಾಯಕನ ಅಂತಿಮ ದರ್ಶನ ಪಡೆಯಲು ಭಾರೀ ಜನಸಾಗರವೇ ಪಟ್ಟಣಕ್ಕೆ ಹರಿದು ಬಂದಿತ್ತು. ಬಾಗೇಪಲ್ಲಿ, ಗುಡಿಬಂಡೆ ಹಾಗೂ ಗೌರಿಬಿದನೂರು ತಾಲೂಕುಗಳು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳು, ರಾಜ್ಯದ ನಾನಾ ಭಾಗಗಳಿಂದ ಜನರು ಬಂದಿದ್ದರು.
ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ವಿ.ಗೋಪಾಲ ಗೌಡರು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಶಾಸಕ ಸಂಪಂಗಿ, ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಮಾಜಿ ಸಚಿವ ವಿ.ಮುನಿಯಪ್ಪ, ಜೆಡಿಎಸ್ ಮುಖಂಡ ಡಿ.ಜೆ.ನಾಗರಾಜ ರೆಡ್ಡಿ ಸೇರಿದಂತೆ ನೂರಾರು ನಾಯಕರು ಆಗಮಿಸಿದ ಶ್ರೀರಾಮರೆಡ್ಡಿ ಅವರ ಅಂತಿಮ ದರ್ಶನ ಪಡೆದುಕೊಂಡರು.
ವಿವಾದಕ್ಕೆ ಕಾರಣವಾದ ಅಂತ್ಯಕ್ರಿಯೆ ಸ್ಥಳ
ಜಿ.ವಿ.ಶ್ರೀರಾಮರೆಡ್ಡಿ ಅವರು ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಕಾರಣಕ್ಕೆ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಬಾಗೇಪಲ್ಲಿ ಪಟ್ಟಣದಲ್ಲಿಯೇ ನೆರೆವೇರಿಸಲು ತಾಲೂಕು ಆಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಅವರ ಸ್ಮಾರಕ ನಿರ್ಮಾಣಕ್ಕಾಗಿ ಒಂದು ಎಕರೆ ಜಾಗವನ್ನು ಕೊಡಲೂ ಸಿದ್ಧವಾಗಿತ್ತು.
ಸಿಪಿಎಂ ಹಾಗೂ ಪ್ರಜಾ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರು ಬಾಗೇಪಲ್ಲಿಯಲ್ಲಿ ಅಂತ್ಯಕ್ರಿಯೆ ನಡೆಸಲು ಎಲ್ಲಾ ಸಿದ್ಧತೆ ನಡೆಸಿದ್ದರು. ಆದರೆ, ರೆಡ್ಡಿ ಅವರ ಕುಟುಂಬದವರು ಇದಕ್ಕೆ ಸುತರಾಂ ಒಪ್ಪಲಿಲ್ಲ. ಹುಟ್ಟೂರಿನಲ್ಲಿಯೇ ಅಂತ್ಯಕ್ರಿಯೆ ನಡೆಸಲು ಪಟ್ಟು ಹಿಡಿದರು. ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರು ಪರಸ್ಪರ ಪಟ್ಟು ಬಿಡದ ಕಾರಣಕ್ಕೆ ಗಣ್ಯರು ನಡೆಸಿದ ರಾಜಿ ಪ್ರಯತ್ನವೂ ಕೈಗೂಡಲಿಲ್ಲ.
ಇದರಿಂದ ತೀವ್ರ ನಿರಾಶೆಗೆ ತುತ್ತಾದ ಬಾಗೇಪಲ್ಲಿ ಜನರು ಸಂಜೆ 7.30ರ ವೇಳೆಗೆ ಶ್ರೀರಾಮರೆಡ್ಡಿ ಅವರ ಪಾರ್ಥೀವ ಶರೀರವನ್ನು ಕುಟುಂದ ಸದಸ್ಯರಿಗೆ ಒಪ್ಪಿಸಿ ಬೀಳ್ಕೊಟ್ಟರು. ಅಭಿಮಾನಿಗಳ ಅಶ್ರುತರ್ಪಣದ ನಡುವೆ ಕಾಮ್ರೇಡ್ ಪಾರ್ಥೀವ ಶರೀರವನ್ನು ಕುಟುಂದ ಸದಸ್ಯರು ಭೈರಬಂಡ್ಲ ಗ್ರಾಮಕ್ಕೆ ಕೊಂಡೊಯ್ದರು. ನಾಳೆ ಬೆಳಗ್ಗೆ ಹನ್ನೊಂದು ಗಂಟೆ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.