ಆರೋಗ್ಯ ಇಲಾಖೆಯಲ್ಲಿ ಅಪಾರ ಭ್ರಷ್ಟಾಚಾರ ಆರೋಪ
ಚಿಕ್ಕಬಳ್ಳಾಪುರ: ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ಮತ್ತು ವೈದ್ಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್ ಅವರು ಬೇನಾಮಿಯಾಗಿ ನಡೆಸಿರುವ ಭಾರೀ ಭ್ರಷ್ಟಾಚಾರಗಳ ಬಗ್ಗೆ ಇನ್ನು ಹದಿನೈದು ದಿನಗಳಲ್ಲಿ ಸಮಗ್ರ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದೆ.
ಚಿಕ್ಕಬಳ್ಳಾಪುರದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ನಂದಿ ಆಂಜಿನಪ್ಪ, ಕೆಲ ಮಹತ್ವದ ಅಂಶಗಳನ್ನು ತಿಳಿಸಿದ್ದಾರೆ. ಅವರು ನೀಡಿದ ಮಾಹಿತಿ ಇಷ್ಟು;
ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗದಲ್ಲಿ 2,000 ಕೋಟಿ ರೂಪಾಯಿಗೂ ಮಿಕ್ಕಿ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಅಷ್ಟೂ ಕಾಮಗಾರಿಗಳಲ್ಲಿ ಶೇ.60ರಷ್ಟು ಕಾಮಗಾರಿಗಳನ್ನು ಅವರು ತಮ್ಮದೇ ಆದ ಬೇನಾಮಿ ಸಂಸ್ಥೆಗಳಿಗೆ ನೀಡಿದ್ದಾರೆ. ಆ ಸಂಸ್ಥೆಗಳಿಗೆ ಚೆಕ್ ಮೂಲಕ ಹಣವನ್ನೂ ಪಡೆದುಕೊಂಡಿದ್ದಾರೆ. ಇದು ದೊಡ್ಡ ಭ್ರಷ್ಟ ಕರ್ಮಕಾಂಡ. ಈ ಕುರಿತಾದ ಎಲ್ಲ ದಾಖಲೆಗಳನ್ನು ಇನ್ನು 15 ದಿನಗಳ ಒಳಗಾಗಿ ದಾಖಲೆಗಳನ್ನು ಬಿಡುಗಡೆ ಮಾಡುವೆ.
ಮುಖ್ಯವಾಗಿ ಸಚಿವ ಸುಧಾಕರ್ ಅವರು, ತಮ್ಮ ಪತ್ನಿ ಹಾಗೂ ಸಂಬಂಧಿಕರ ಹೆಸರಿನಲ್ಲಿ ಚೆಕ್ ಪಡೆದುಕೊಂಡಿದ್ದಾರೆ. ವಿವಿಧ ಬೇನಾಮಿ ಸಂಸ್ಥೆಗಳ ಮೂಲಕ ಅವರೆಲ್ಲರೂ ಕಾಮಗಾರಿ ನಡೆಸುತ್ತಿದ್ದಾರೆ.
ವಕೀಲ ನಾರಾಯಣಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ಸಚಿವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಅವರು ಹೇಳಿದ್ದಿಷ್ಟು;
ಡಾ.ಸುಧಾಕರ್ ತಮ್ಮ ವಿರುದ್ಧ ಟೀಕೆ, ಆರೋಪ ಮಾಡುವವರ ವಿರುದ್ಧ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ. ಆರೋಪ ಮಾಡಿದರು ಎಂಬ ಕಾರಣಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹಿಂದೆ, ವಿಧಾನಸಭೆಯಲ್ಲಿಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕೂಮಾರ್ ಅವರಿಬ್ಬರೂ ಸುಧಾಕರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು.
ಕೋವಿಡ್ ಉಪಕರಣಗಳ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಅವರಿಬ್ಬರೂ ದೂರಿದ್ದರು. ಆದರೆ, ಅವರಿಬ್ಬರ ಮೇಲೆ ಡಾ.ಸುಧಾಕರ್ ಅಂದೇ ಏಕೆ ಮಾನನಷ್ಟ ಮೊಕದ್ದಮೆ ಹೂಡಲಿಲ್ಲ?
ಡಾ.ಸುಧಾಕರ್ ಅವರು ಭಾರೀ ಪ್ರಮಾಣದಲ್ಲಿ, ಬೇನಾಮಿಗಳ ಹೆಸರಿನಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಈ ಬಗ್ಗೆ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಯಬೇಕು. ಪ್ರೀತಿ ನಿರ್ಮಾಣ ಸಂಸ್ಥೆ, ಸಾಸಾ ಸ್ಟೋನ್ಸ್ ಸೇರಿ ಅನೇಕ ಬೇನಾಮಿ ಸಂಸ್ಥೆಗಳ ಹೆಸರಿನಲ್ಲಿ ಅವರು ಅಕ್ರಮ ಎಸಗಿದ್ದಾರೆ. ಅಷ್ಟೇ ಅಲ್ಲ, ಸುಧಾಕರ್ ಅತ್ಯಂತ ವೇಗವಾಗಿ ಹಣ ಮಾಡುತ್ತಿರುವ ರಾಜಕಾರಣಿ! ಅಲ್ಪಾವಧಿಯಲ್ಲೇ ಅವರು ಸಾವಿರಾರು ಕೋಟಿ ರೂಪಾಯಿ ಹಣ ಮಾಡಿದ್ದಾರೆ. ಕೋವಿಡ್ ಎಲ್ಲ ಅಲೆಗಳಲ್ಲೂ ಹಣದ ಕೊಳ್ಳೆ ಹೊಡೆದಿರುವ ಅವರು ಕೋವಿಡ್ ನಾಲ್ಕನೇ ಅಲೆ ಬಂದು ಜನ ಸಾಯಲಿ ಎಂದು ಕಾಯುತ್ತಿದ್ದಾರೆ.
ಇನ್ನು, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಧಾಕರ್ ಅಪಾರ ಪ್ರಮಾಣದ ಆಸ್ತಿಗಳನ್ನು ಮಾಡಿದ್ದಾರೆ. ಆ ಬಗ್ಗೆಯೂ ಉನ್ನತ ತನಿಖೆ ಆಗಬೇಕು ಎಂದು ಆಂಜಿನಪ್ಪ ಮತ್ತು ವಕೀಲ ನಾರಾಯಣಸ್ವಾಮಿ ಒತ್ತಾಯ ಮಾಡಿದರು.