ಸಾಲ ಕೊಟ್ಟವರು ಕೊಲೆ ಮಾಡಿದ್ದಾರೆಂದು ಪತ್ನಿ ಆರೋಪ; ಪಂಚಾಯಿತಿ ಅಧ್ಯಕ್ಷನ ವಿರುದ್ಧ ದೂರು
by Sidhu Devanahalli
ದೇವನಹಳ್ಳಿ: ತೋಟಕ್ಕೆ ಹೋಗಿಬರುತ್ತೇನೆ ಎಂದು ಹೋದ ಪತಿ ಕೊನೆಗೆ ಕಂಡಿದ್ದು ಹಲಸಿನ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ. ಇದು ಕೊಲೆಯಾ ಅಥವಾ ಆತ್ಮಹತ್ಯೆ ಎನ್ನುವ ಜಿಜ್ಞಾಸೆ ಪೊಲೀಸರನ್ನು ಕಾಡುತ್ತಿದೆ.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಬಿಡಗಾನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಕುಟುಂಬಸ್ಥರು ಮಾತ್ರ, ಇದು ಕೊಲೆ ಎಂದು ಆರೋಪ ಮಾಡುತ್ತಿದ್ದಾರೆ.
ಏನಿದು ಘಟನೆ?
ಬಿಡಗಾನಹಳ್ಳಿಯ ಮಂಜುನಾಥ್ ಅವರು ಬೆಳಗ್ಗೆ 5.30 ಗಂಟೆ ಹೊತ್ತಿನಲ್ಲಿ ತೋಟಕ್ಕೆ ಹೋಗಿ ಬರುವೆ ಎಂದು ಪತ್ನಿಗೆ ಮೋನಿಕಾ ಅವರಿಗೆ ಹೇಳಿ ಹೋಗಿದ್ದಾರೆ. ಆದರೆ, ಎಷ್ಟು ಹೊತ್ತಾದರೂ ಮನೆವೆ ವಾಪಸ್ ಬಾರದ ಕಾರಣಕ್ಕೆ ಮೋನಿಕಾ ಅವರು ಗಾಬರಿಯಿಂದ ತೋಟಕ್ಕೆ ಹೋಗಿ ನೋಡಿದಾಗ ಪತಿ ಮಂಜುನಾಥ್ ಹಲಸಿನ ಮರದ ನೇಣು ಕುಣಿಕೆಯಲ್ಲಿ. ತಕ್ಷಣವೇ ಕುಸಿದುಬಿದ್ದ ಮೋನಿಕಾ ಕೊನೆಗೂ ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿ ನೇಣಿನ ಕುಣಿಯ ದಾರವನ್ನು ಕಟ್ ಮಾಡಿ ನೋಡುವ ಹೊತ್ತಿಗೆ ಮಂಜುನಾಥ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಸಾಲದ ಶೂಲವೇ ಕಾರಣವಾ?
ಕೆಲ ದಿನಗಳ ಹಿಂದೆ ಮಂಜುನಾಥ್ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದ್ದು, ಇತ್ತೀಚೆಗಷ್ಟೇ ಅವರು ಮೆಲ್ಲ ಮೆಲ್ಲಗೆ ಸಾಲದ ಶೂಲದಿಂದ ಚೇತರಿಕೆ ಕಂಡಿದ್ದರು. ಜೀವನಕ್ಕೂ ಯಾವುದೇ ತೊಂದರೆ ಇಲ್ಲದೆ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು ಎಂದು ಗೊತ್ತಾಗಿದೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ತಮ್ಮ ಪತಿ ಸಾಯುವ ನಿರ್ಧಾರ ಮಾಡುವವರೇ ಅಲ್ಲ. ಅವರು ಎಷ್ಟೇ ಕಷ್ಟ ಬಂದರೂ ಎದೆಗುಂದುವವರೂ ಅಲ್ಲ ಎಂದು ಮೋನಿಕಾ ಅವರು ಹೇಳಿದ್ದಾರೆ. ನಮ್ಮ ಊರಿನ ಹಾಗೂ ಈಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಹಾಗೂ ಗೋಪಾಲ್ ಎಂಬುವರೇ ತಮ್ಮ ಗಂಡ ಮಂಜುನಾಥ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ
ಮಂಜುನಾಥ್ ಅವರು ಪಂಚಾಯಿತಿಯ ಹಾಲಿ ಅಧ್ಯಕ್ಷರ ಬಳಿ ಸಾಲ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಒಂದು ಎಕರೆ ಜಮೀನು ಬರೆದುಕೊಟ್ಟಿದ್ದು, ಉಳಿದ 20 ಗುಂಟೆ ಜಮೀನು ಹಾಗೂ ಮನೆಯನ್ನು ಕೂಡ ತಮ್ಮ ಹೆಸರಿಗೆ ಮಾಡಿಕೊಡಬೇಕೆಂದು ಮಂಜುನಾಥ್ ಅವರಿಗೆ ಕಿರುಕುಳ ನೀಡುತ್ತಿದ್ದರೆಂದು ಮೋನಿಕಾ ಅವರು ಹೇಳಿದ್ದಾರೆ.
ಪತಿಯ ಮೃತದೇಹದ ಮುಂದೆಯೇ ಪಂಚಾಯಿತಿ ಅಧ್ಯಕ್ಷ ಜಮೀನಿನ ಬಳಿ ಬಂದು ಗಲಾಟೆ ಮಾಡಿದ್ದಾರೆ. ಆದರೆ, ನಮ್ಮ ಸಂಬಂಧಿಕರು ಬರುವ ಹೊತ್ತಿಗೆ ಅಲ್ಲಿಂದ ಕಾಲ್ಕಿತರು ಎಂದು ಮಂಜುನಾಥ್ ಅವರ ತಾಯಿ ಶಾಂತಮ್ಮ ಹಾಗೂ ಮೋನಿಕಾ ಅವರ ಸಂಬಂಧಿಕರು ದೂರಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಹಾಗೂ ಗೋಪಾಲ್ ಪ್ರಭಾವಿ ವ್ಯಕ್ತಿಗಳಾಗಿದ್ದು, ಸೂಕ್ತ ತನಿಖೆ ಆಗಬೇಕು ಎಂದು ಮೃತ ಮಂಜುನಾಥ್ ಅವರ ಕುಟುಂಬಸ್ಥರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಕೊಲೆಯೋ ಆತ್ಮಹತ್ಯೆಯೋ ಎಂಬುದು ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.