ಜಿಲ್ಲೆಯವರೇ ಆದ ವೈದ್ಯ ಶಿಕ್ಷಣ ಸಚಿವರ ಭರವಸೆಗೆ ಭರ್ತಿ 2 ತಿಂಗಳು; ತವರಿನಲ್ಲಿ ಮೆಡಿಕಲ್ ವಿದ್ಯಾರ್ಥಿಗಳ ಶೈಕ್ಷಣಿಕ ಯುದ್ಧ
by GS Bharath Gudibande
ಚಿಕ್ಕಬಳ್ಳಾಪುರ: ಎದ್ದೆವೋ ಬಿದ್ದೆವೋ ಎಂದು ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಉಕ್ರೇನ್ʼನಿಂದ ಭಾರತಕ್ಕೆ ಮರಳಿದ 20 ಸಾವಿರಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳು ಈಗ ಸಂಕಷ್ಟದಲ್ಲಿದ್ದಾರೆ. ಆ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಉಕ್ರೇನ್ ವಿದ್ಯಾರ್ಥಿಗಳೆಲ್ಲರ ವೈದ್ಯ ಶಿಕ್ಷಣ ಅತಂತ್ರವಾಗಿದೆ.
ಇವರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಬಂದಿದ್ದಾರೆ, ನಿಜ. ಆದರೆ, ಪರ್ಯಾಯ ವ್ಯವಸ್ಥೆ ಮಾಡುವುದಾಗಿ ರಾಜ್ಯ ಸರಕಾರ ಭರವಸೆ ಕೊಟ್ಟು ಎರಡು ತಿಂಗಳೇ ಆಗಿದೆ. ಅತ್ತ ಅವರು ಪುನಾ ಉಕ್ರೇನ್ʼಗೆ ವಾಪಸ್ ಹೋಗುವಂತೆಯೂ ಇಲ್ಲ, ಇತ್ತ ಭಾರತದಲ್ಲೂ ವ್ಯಾಸಂಗ ಮಾಡುವ ಸ್ಥಿತಿ ಇಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿಳಂಬ ಧೋರಣೆಯಿಂದ ಈ ವಿದ್ಯಾರ್ಥಿಗಳು ‘ಶೈಕ್ಷಣಿಕ ಯುದ್ಧ’ವನ್ನೇ ನಡೆಸುವ ಸನ್ನಿವೇಶ ಸೃಷ್ಟಿಯಾಗಿದೆ.
ರಷ್ಯಾ – ಉಕ್ರೇನ್ ಯುದ್ಧದ ಪರಿಣಾಮ ಕನ್ನಡಿಗ ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದ್ದಾರೆ. ವಾಪಸ್ ಕರೆಸಿಕೊಂಡ ವಿದ್ಯಾರ್ಥಿಗಳನ್ನು ಅಲ್ಲಿಗೇ ಕೈಬಿಟ್ಟ ರಾಜ್ಯ ಸರಕಾರ ಈಗ ಅವರ ನೆರವಿಗೆ ಧಾವಿಸುತ್ತಿಲ್ಲ. ಈ ಬಗ್ಗೆ ಕೇಂದ್ರ ಕ್ರಮ ವಹಿಸಬೇಕು ಎಂದು ಹೇಳಿ ಕೈತೊಳೆದುಕೊಂಡಿದೆ.
ವೈದ್ಯಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಉಕ್ರೇನ್ ದೇಶದಿಂದ ಮರಳಿದ ರಾಜ್ಯದ ಎಲ್ಲ ವೈದ್ಯ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಅಭಯ ನೀಡಿದ್ದರು. ಮಾರ್ಚ್ 21ರಂದು ವಿದ್ಯಾರ್ಥಿಗಳ ಸಭೆ ಕರೆದಿದ್ದ ಸಚಿವರು, ಈ ಭರವಸೆ ನೀಡಿದ್ದರು.
ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಡಾ.ಸುಧಾಕರ್ ಅವರು; “ದೇಶದಲ್ಲೇ ಮೊದಲ ಬಾರಿಗೆ ಸರ್ಕಾರದಿಂದ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಾಗಿದೆ. ಯುದ್ಧಪೀಡಿತ ಉಕ್ರೇನ್‌ನಿಂದ ವಾಪಸಾದ ವೈದ್ಯ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಉಚಿತ ಶಿಕ್ಷಣ ನೀಡಲಾಗುವುದು. ರಾಜ್ಯದ 60 ವೈದ್ಯಕೀಯ ಕಾಲೇಜುಗಳಲ್ಲಿ 700 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಶಿಕ್ಷಣದ ವಿಧಾನ, ಅಧಿಕೃತ ಮಾನ್ಯತೆ ನಿರ್ಧಾರಕ್ಕೆ ಉನ್ನತ ಸಮಿತಿ ರಚಿಸಲಾಗುತ್ತದೆ. ರಷ್ಯಾ -ಉಕ್ರೇನ್ ಯುದ್ಧದಿಂದ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ವಿದ್ಯಾರ್ಥಿಗಳನ್ನು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವುದಿಲ್ಲ ಶುಲ್ಕ ವಿಧಿಸದೆ ಉಚಿತವಾಗಿ ವೈದ್ಯಕೀಯ ಶಿಕ್ಷಣ ನೀಡಲಾಗುತ್ತದೆ” ಎಂದಿದ್ದರು.
ಈಗ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ಸಚಿವರ ಮಾತನ್ನೇ ನಂಬಿ ಅವರತ್ತ ವಿಶ್ವಾಸದಿಂದ ನೋಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 18ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಉಕ್ರೇನ್ ದೇಶದಿಂದ ವಾಪಸ್ ಬಂದ 18ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರ ಭವಿಷ್ಯ ಅತಂತ್ರವಾಗಿದೆ. ಮುಂದೇನು ಮಾಡಬೇಕು? ಯಾರನ್ನು ಸಂಪರ್ಕ ಮಾಡಬೇಕು ಎಂಬ ಬಗ್ಗೆ ಅವರಲ್ಲಿ ಸ್ಪಷ್ಟತೆ ಇಲ್ಲದಾಗಿದೆ.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಚಿಕ್ಕಬಳ್ಳಾಪುರದಲ್ಲಿ 20ಕ್ಕೂ ಹೆಚ್ಚು ಇಂಥ ವಿದ್ಯಾರ್ಥಿಗಳಿದ್ದು, ಅವರು ಬಂದು ಎರಡು ತಿಂಗಳಾದರೂ, ಸ್ಥಳೀಯ ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ರಾಜ್ಯ ಸರಕಾರ ಸೆರಿದಂತೆ ಯಾರೂ ಸಂಪರ್ಕ ಮಾಡಿಲ್ಲ. ವಿಮಾನ ನಿಲ್ದಾಣಕ್ಕೆ ಅವರು ವಾಪಸ್ ಬಂದಾಗ ಹಾರ ಹಾಕಿ, ಸಿಹಿ ಹಂಚಿಕೊಂಡ ಅಧಿಕಾರಿಗಳು, ಆಮೇಲೆ ಸಾಲು ಸಾಲು ಹೇಳಿಕೆಗಳನ್ನು ಕೊಟ್ಟ ಅಧಿಕಾರಿಗಳು, ಸಚಿವರುಗಳು ಎಲ್ಲಿದ್ದಾರೋ ಹುಡುಕುವಂತೆ ಆಗಿದೆ.
ಈ ವಿದ್ಯಾಥಿಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೂ ಪ್ರಯೋಜನ ಆಗಿಲ್ಲ ಎಂದು ಹಲವಾರು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಅವರಲ್ಲಿ ಕೆಲವರು ಸಿಕೆನ್ಯೂಸ್ ನೌ ಜತೆ ತಮ್ಮ ನೋವು ಹಂಚಿಕೊಂಡಿದ್ದಾರೆ.
ಆನ್ಲೈನ್ ತರಗತಿ ಪ್ರಯೋಜನಾಗುತ್ತಿಲ್ಲ
ಉಕ್ರೇನ್ ನಿಂದ ರಾಜ್ಯಕ್ಕೆ ಬಂದ ಬಹುತೇಕ ವಿದ್ಯಾರ್ಥಿಗಳ ಸಮಸ್ಯೆ ಇದು. ಆನ್ಲೈನ್ ತರಗತಿ ನಡೆಯುತ್ತಿದೆ, ಆದರೆ; ಸರಿಯಾಗಿ ಅರ್ಥವಾಗುತ್ತಿಲ್ಲ ಹಾಗೂ ನಾವು ಮೆಡಿಕಲ್ ವಿದ್ಯಾರ್ಥಿಗಳಾದ್ದರಿಂದ ನಮಗೆ ಪ್ರಾಕ್ಟಿಕಲ್ ಸೆರಿದಂತೆ ಬೇರೆ ಏನೂ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮಗೆ ಸ್ಥಳೀಯ ಕಾಲೇಜುಗಳಲ್ಲಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿ ಕೊಡಿ ಎಂದು ವಿದ್ಯಾರ್ಥಿಗಳು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಸ್ಥಳೀಯ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಕಲ್ಪಿಸಿ ಎನ್ನುವ ಜಿಲ್ಲೆಯ ವಿದ್ಯಾರ್ಥಿಗಳು, ಉಕ್ರೇನ್ ನಲ್ಲಿ ಓದುತ್ತಿದ್ದ ನಾವು ಜೀವ ರಕ್ಷಿಸಿಕೊಳ್ಳುವ ಯುದ್ಧದಲ್ಲಿ ಗೆದ್ದಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನೆರವಿನಿಂದ ಇದು ಸಾಧ್ಯವಾಗಿದೆ. ಆದರೆ ಶೈಕ್ಷಣಿಕ ಯುದ್ಧದಲ್ಲಿ ಇನ್ನೂ ನಾವು ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ಸರಕಾರದ ತುರ್ತು ನಿರ್ಧಾರ ಅಗತ್ಯವಿದೆ. ಸಾವಿರಾರು ವಿದ್ಯಾರ್ಥಿಗಳ ಬದುಕು ಅತಂತ್ರವಾಗಿ, ಮೆಡಿಕಲ್ ಕನಸು ನುಚ್ಚುನೂರಾಗುವ ಹಂತಕ್ಕೆ ತಲುಪಿದೆ ಎಂದು ಚಿಂತಾಮಣಿ ಮೂಲದ ವೈದ್ಯ ವಿದ್ಯಾರ್ಥಿನಿ ಹರ್ಷಿತಾ ಆತಂಕ ವ್ಯಕ್ತಪಡಿಸಿದರು.
ಪರ್ಯಾಯ ವ್ಯವಸ್ಥೆಗೆ ತಡ ಯಾಕೆ?
ಉಕ್ರೇನ್ ಮೆಡಿಕಲ್ ವಿಶ್ವವಿದ್ಯಾಲಯಗಳು ಹಾಗೂ ಭಾರತೀಯ ವೈದ್ಯಕೀಯ ಪಠ್ಯಕ್ರಮಗಳಲ್ಲಿ ವ್ಯತ್ಯಾಸ ಇರುವುದು, ಈ ಬಗ್ಗೆಯೂ ಕೇಂದ್ರ ಸರಕಾರ ನಿರ್ಧಾರ ಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿದೆ ಎಂಬುದು ಕೆಲ ಮಕ್ಕಳ ಪೋಷಕರ ಆರೋಪ. ಆದರೆ, ಕೇಂದ್ರವು ತುರ್ತಾಗಿ ನಿರ್ಧಾರ ಕೈಗೊಳ್ಳದೆ ಹೋದರೆ ನಮ್ಮ ಭವಿಷ್ಯ ಅತಂತ್ರವಾಗುತ್ತದೆ ಎಂದು ಅವರು ಆತಂಕ ತೋಡಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಏನಂತಾರೆ?
ನಾವು ಮೆಡಿಕಲ್ ಮಾಡಬೇಕು ಎಂಬ ಆಸೆಯಿಂದ ಉಕ್ರೇನ್ ದೇಶಕ್ಕೆ ಹೋಗಿದ್ದೆವು. ಆದರೆ, ಯುದ್ಧದ ಕಾರಣದಿಂದ ಪ್ರಾಣ ಉಳಿಸಿಕೊಂಡು ಭಾರತಕ್ಕೆ ವಾಪಸ್ ಬಂದೆವು. ಸ್ಥಳೀಯವಾಗಿ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭರವಸೆ ನೀಡಿದ್ದವು. ಆದರೆ, ಇದುವರೆಗೂ ನಮ್ಮ ಸಂಪರ್ಕಕ್ಕೆ ಯಾರೂ ಬಂದಿಲ್ಲ. ನಾವು ರಾಜ್ಯ ಸರಕಾರಕ್ಕೆ ಮನವಿ ಮಾಡಿದಾಗ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಅನುಮತಿ ಇನ್ನೂ ಸಿಕ್ಕಲ್ಲ, ಹೀಗಾಗಿ ತಡವಾಗುತ್ತಿದೆ, ಅನುಮತಿ ಸಿಕ್ಕ ತಕ್ಷಣ ಪರ್ಯಾಯ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಉತ್ತರಿಸುತ್ತಿದ್ದಾರೆ. ಇದರಿಂದ ನಮ್ಮ ಮೆಡಿಕಲ್ ಕನಸು ಈಡೇರುತ್ತಾ? ಇಲ್ಲವಾ? ಎನ್ನುವ ಆತಂಕ ಶುರುವಾಗಿದೆ. ಸರಕಾರ ನಮ್ಮ ನೆರವಿಗೆ ಕೂಡಲೇ ಬರಬೇಕು.
ಹರ್ಷಿತಾ, ಚಿಂತಾಮಣಿ ಮೂಲದ ಉಕ್ರೇನ್ ಮೆಡಿಕಲ್ ವಿದ್ಯಾರ್ಥಿನಿ
ಉಕ್ರೇನ್ʼನಲ್ಲಿ ಯುದ್ಧದಲ್ಲಿ ಬದುಕಿ ಬಂದಿದೇವೆ. ಆದರೆ, ಶೈಕ್ಷಣಿಕ ಯುದ್ಧದಲ್ಲಿ ನಮಗೆ ಸೋಲುವ ಭಯ ಶುರುವಾಗಿದೆ. ಇದರ ಬಗ್ಗೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ನಾವು ಪ್ರಸ್ತುತ ಉಕ್ರೇನ್ ಮೆಡಿಕಲ್ ಕಾಲೇಜಿನಿಂದ ಆನ್ಲೈನ್ ತರಗತಿ ಕೇಳುತ್ತಿದೇವೆ. ಆದರೆ, ಮೆಡಿಕಲ್ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ಪ್ರಯೋಜನವಾಗುತ್ತಿಲ್ಲ, ನಮಗೆ ಸ್ಥಳೀಯ ಕಾಲೇಜಿನಲ್ಲಿ ಓದಲು ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ. ನಮಗೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ನಿಂದ ಅನುಮತಿ ಕೊಡಿಸುವಂತೆ ಪ್ರಧಾನ ಮಂತ್ರಿಗಳ ಕಚೇರಿಗೆ ಪತ್ರ ಬರೆದಿದ್ದೇವೆ. ಇದುವರೆಗೂ ನಮಗೆ ಯಾವುದೇ ಉತ್ತರ ಬಂದಿಲ್ಲ.
ನಂದಕುಮಾರ್, ಗುಡಿಬಂಡೆ ಮೂಲದ ಉಕ್ರೇನ್ ಮೆಡಿಕಲ್ ವಿದ್ಯಾರ್ಥಿ
ಕೆಳಗಿನ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
Comments 1