ಗೋಸುಂಬೆ ನಾಯಕರನ್ನು ನಂಬಬೇಡಿ ಎಂದ ಮಾಜಿ ಸಿಎಂ
ಶ್ರೀನಿವಾಸಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಅವರು; ರಾಜಕಾರಣದಲ್ಲಿರುವ ಗೋಸುಂಬೆ ನಾಯಕರನ್ನು ನಂಬಬೇಡಿ ಎಂದು ಎಚ್ಚರಿಸಿದ್ದಾರೆ.
ಶ್ರೀನಿವಾಸಪುರದ ಕನಕ ಸಮುದಾಯ ಭವನ ಸಮೀಪದಲ್ಲಿ ಇಂದು ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ತಮ್ಮ ಮಾತಿನುದ್ದಕ್ಕೂ ಹೆಸರೇಳದೆಯೇ ರಮೇಶ್ ಕುಮಾರ್ ವಿರುದ್ಧ ಮಾತಿ ಪ್ರಹಾರ ನಡೆಸಿದರು.
ಕೋಲಾರ ಜಿಲ್ಲೆಯ ಕೆರೆಗಳಿಗೆ ವಿಷಪೂರಿತ ನೀರನ್ನು ತುಂಬಿಸಿ ಜಲಮೂಲಗಳನ್ನು ಹಾಳು ಮಾಡಿದ ನಾಯಕರಿಗೆ ಬುದ್ಧಿ ಕಲಿಸಿ. ಒಮ್ಮೆ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಿ. ಇಂಥ ಹೀನ ಕೆಲಸ ಮಾಡುವ ಗೋಸುಂಬೆಗಳಿಗೆ ಬುದ್ಧಿ ಕಲಿಸುತ್ತೇವೆ. ರೈತರ ಮಕ್ಕಳು ಏನಾದರೆ ಇನರಿಗೇನು? ಅಪ್ಪ ಮಗನ ಜೇಬಿಗೆ ಎತ್ತಿನಹೊಳೆ ಹಣ ಹರಿದುಬಂದಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾಜಿ ಸ್ಪೀಕರ್ ಅವರ ವಿರುದ್ಧ ಟೀಕೆಗಳ ಸುರಿಮಳೆಗರೆದರು.
ಜಲಧಾರೆ ಕಾರ್ಯಕ್ರಮವನ್ನು ಕೇವಲ ಮತಗಳಿಗಾಗಿ ಮಾಡುತ್ತಿಲ್ಲ. ರಾಜ್ಯಕ್ಕೆ ಆಗುತ್ತಿರುವ ನೀರಾವರಿ ಅನ್ಯಾಯಗಳನ್ನು ಖಂಡಿಸಿ ಮಾಡುತ್ತಿದ್ದೇವೆ. ಇಂಥ ಅನ್ಯಾಯಗಳನ್ನು ವಿರೋಧಿಸಿ ಹೆಚ್.ಡಿ,ದೇವೇಗೌಡರು ಸಂಸತ್ತಿನಲ್ಲಿ ಒಬ್ಬಂಟಿಯಾಗಿ ಹೋರಾಟ ನಡೆಸುತ್ತಿದ್ದರೂ ರಾಜ್ಯದ ಯಾವೊಬ್ಬ ಸಂಸದರೂ ಅದಕ್ಕೆ ದನಿಗೂಡಿಸುತ್ತಿಲ್ಲ. ಹೀಗಾಗಿ ನಮಗೆ ಹೋರಾಟ ಮಾಡದೆ ಬೇರೆ ದಾರಿ ಇಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಎತ್ತಿನಹೊಳೆ ಕೆಲವರ ಜೇಬು ತುಂಬಿಸುವ ಕಾಮಧೇನು ಆಗಿದೆ. ಹತ್ತು ವರ್ಷಗಳ ಹಿಂದೆ 8,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರಂಭವಾದ ಈ ಯೋಜನೆ ಇವತ್ತು 25,000 ಕೋಟಿ ರೂ.ಗಳಿಗೆ ಬಂದು ಮುಟ್ಟುವುದರಲ್ಲಿದೆ. ಇಷ್ಟು ವರ್ಷಗಳಾದರೂ ಯೋಜನೆ ಮುಗಿಯದೆ ಅದು ಎಲ್ಲಿ ಆರಂಭವಾಗಿದೆಯೋ ಅಲ್ಲಿಯೇ ನಿಂತಿದೆ. ಒಂದು ನೀರನ್ನು ಹರಿಸಲು ಇನ್ನೂ ಆಗಿಲ್ಲ ಎಂದು ಅವರು ಅರೋಪಿಸಿದರು.
ಇನ್ನು ಯರಗೋಳ್ ಯೋಜನೆಯನ್ನು ಆಮೆಗತಿಯಲ್ಲಿ ನಡೆಸಲಾಗುತ್ತಿದೆ. ಅಂದಾಜು ವೆಚ್ಚಗಳು ಏರುತ್ತಿವೆಯಾದರೂ, ಸತತ ವಿಳಂಬದಿಂದ ಕೋಲಾರ ಜಿಲ್ಲೆಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಕೊನೆಗೆ ಕಾಂಗ್ರೆಸ್ ನಾಯಕರು ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿ ಆಗಬೇಕು ಕೇಳಿದರು. ನಮ್ಮ ತಂದೆ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರು. ಕೊನೆಗೆ ಅವರು ಒಪ್ಪಲಿಲ್ಲ. ಕೊನೆಗೆ ಸರಕಾರ ಮಾಡಿದ ಮೇಲೆ ನಿರಂತರವಾಗಿ ಷಡ್ಯಂತ್ರ ನಡೆಸಲಾಯಿತು. ಸಿದ್ದರಾಮಯ್ಯ ಜತೆ ಸೇರಿ ರಮೇಶ್ ಕುಮಾರ್ ಮೈತ್ರಿ ಸರಕಾರದ ಪತನಕ್ಕೆ ಕಾರಣವಾದರು ಎಂದು ಮಾಜಿ ಮುಖ್ಯಮಂತ್ರಿಗಳು ಆರೋಪ ಮಾಡಿದರು.
ಮಾಜಿ ಸ್ಪೀಕರ್ʼಗೆ ಟಾಂಗ್ ಕೊಟ್ಟ ಇಬ್ರಾಹಿಂ
ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಕೂಡ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷಕ್ಕೆ ಕುರ್ಚಿ ಚಿಂತೆ. ಒಂದು ಕುರ್ಚಿಗೆ ಇಬ್ಬರು ಗಿರಾಕಿಗಳು ಅಲ್ಲಿ ಕಿತ್ತಾಡುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ಬಿಜೆಪಿಯದ್ದು 40% ಸರಕಾರ ಎನ್ ಇವರಿದ್ದಾಗ ಎಂದು ಹೇಳುತ್ತಿದ್ದಾರೆ. ಅವರೇನು ಪರ್ಸೇಂಟೇಜ್ ಪಡೆದುಕೊಂಡಿಲ್ಲವೇ? ನಾನು ಕೂಡ ಅದೇ ಪಕ್ಷದಲ್ಲೇ ಇದ್ದು ಎಲ್ಲವನ್ನೂ ನೋಡಿದ್ದೇನೆ. ಅದೆಲ್ಲವನ್ನೂ ನೋಡಲಾಗದೇ ಆ ಪಕ್ಷ ಬಿಟ್ಟು ಬಂದಿದ್ದೇನೆ ಎಂದು ಅವರು ಹೇಳಿದರು.