ರಾಜ್ಯಪಾಲರೇ ಗೌರವಿಸಿದರೂ ಜಿಲ್ಲಾಡಳಿತಕ್ಕೆ ಅಸಡ್ಡೆ! ಶಾಸಕರಿಗೂ ಮಾಹಿತಿ ಇಲ್ಲ!!
by GS Bharath Gudibande
ಗುಡಿಬಂಡೆ: ಚಿನ್ನದ ಸಹೋದರಿಯರ ಸಾಧೆನೆಗೆ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯೇ ಹಾಡಿಹೊಗಳುತ್ತಿದ್ದರೆ, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆವಗಳು, ಅಧಿಕಾರಿಗಳು ಮನೆಯಂಗಳದ ಸಂಭ್ರಮಕ್ಕೆ ಸಾಕ್ಷಿಯಾದೆ ದೂರ ಉಳಿದಿದ್ದಾರೆ.
ಸ್ವತಃ ರಾಜ್ಯಪಾಲರೇ ಚಿನ್ನದ ಪದಕ ಹಾಗೂ ಪ್ರಶಸ್ತಿ ನೀಡಿ ಗೌರಿವಿಸಿದರೂ, ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದರೂ ಈ ಅಕ್ಕತಂಗಿಗೆ ಜಿಲ್ಲೆಯಲ್ಲಿ ಅಧಿಕೃತವಾಗಿ ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಡಳಿತವಾಗಲಿ ಅಥವಾ ಜಿಲ್ಲೆಗೆ ಸಂಬಂಧಿಸಿದ ಸಚಿವರಾಗಲಿ ಈವರೆಗೂ ಅವರನ್ನು ಗೌರವಿಸುವ ಕೆಲಸ ಮಾಡದಿರುವುದು ಸ್ಥಳೀಯರಿಗೆ ನಿರಾಶೆ ಉಂಟು ಮಾಡಿದೆ.
ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿ ಪೆರೇಸಂದ್ರಕ್ಕಿಂತ ಆಚೆಯೇ ಇದೆ ಎನ್ನುವ ಸ್ಥಳೀಯರ ಆರೋಪಕ್ಕೆ ಪುಷ್ಠಿ ನೀಡುವಂತೆ ಈವರೆಗೂ ಯಾವೊಬ್ಬ ಅಧಿಕಾರಿಯೂ ಚಿನ್ನ ಗೆದ್ದ ಸಹೋದರಿಯರಿಗೆ ಶ್ಳಾಘನೆ ಮಾಡುವ ಕೆಲಸವನ್ನು ಮಾಡಿಲ್ಲ.
ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮ ಪಂಚಾಯತಿಯ ಗವಿಕುಂಟಹಳ್ಳಿ ಗ್ರಾಮದ ಎಸ್.ಆರತಿ ಮತ್ತು ಎಸ್.ಗಾಯತ್ರಿ ಶೈಕ್ಷಣಿಕವಾಗಿ ಅದ್ಭುತ ಸಾಧನೆ ಮಾಡಿದ್ದು, ಕಡು ಬಡತನದಲ್ಲಿ ಅವರು ಮಾಡಿರುವ ಸಾಧನೆಗೆ ಜಿಲ್ಲೆಯಲ್ಲಿ ಕಿಂಚತ್ತೂ ಮಾನ್ಯತೆ ಸಿಗದಿರುವುದು ವಿಷಾದ ಸಂಗತಿಯಾಗಿದೆ. ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ಕೊರೆತಯೋ ಅಥವಾ ಗುಡಿಬಂಡೆ ತಾಲೂಕು ಎಂಬ ನಿರ್ಲಕ್ಷ್ಯವೋ ಗೊತ್ತಿಲ್ಲ, ಕೊನೆಯಪಕ್ಷ ಮೊಬೈಲ್ ಕರೆ ಮಾಡಿಯಾದರೂ ಪ್ರಶಂಶಿಸುವ ಕಾರ್ಯವನ್ನು ಜಿಲ್ಲಾಡಳಿತ ಅಥವಾ ಸ್ಥಳೀಯ ಶಾಸಕರು ಮಾಡಿಲ್ಲ.
ಇಷ್ಟಾದರೂ ತಮ್ಮ ಸಾಧನೆಯ ಬಗ್ಗೆ ಅರಿವೇ ಇಲ್ಲದ ಮುಗ್ಧರಂತೆ ಇರುವ ಸಹೋದರಿಯರಿಬ್ಬರೂ ತಮ್ಮ ಮುಂದಿನ ಗುರಿಯ ಕಡೆ ಗಮನ ಹರಿಸಿದ್ದಾರೆ. ಶ್ಲಾಘನೆ, ಮೆಚ್ಚುಗೆಯನ್ನು ಮೀರಿದ ಅವರ ಸಾಧನೆ ಸ್ಥಳೀಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಇಂಥವರ ಬಗ್ಗೆ ಜಿಲ್ಲಾಡಳಿತ ಗಮನ ಹರಿಸದೇ ಇರುವುದು ತುಂಬಾ ನೋವಿನ ಸಂಗತಿ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ತಾಲೂಕಿನ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿರುವುದು ಸಂತಸದ ಸಂಗತಿ. ವಿವಿಯ ಘಟಿಕೋತ್ಸ್ವದಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿರುವುದು ಹೆಮ್ಮೆಯ ವಿಚಾರ. ಇಂತಹ ವಿಚಾರವನ್ನು ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತ ನನ್ನ ಗಮನಕ್ಕೆ ತಂದಿಲ್ಲ. ಆದರೂ ನಾನು ಕೂಡಲೇ ಆ ವಿದ್ಯಾರ್ಥಿಗಳನ್ನು ಮಾತನಾಡಿಸಿ ಅವರ ಮುಂದಿನ ಶಿಕ್ಷಣಕ್ಕೆ ಸಹಕಾರ ನೀಡುತ್ತೇನೆ.
ಎಸ್.ಎನ್ ಸುಬ್ಬಾರೆಡ್ಡಿ ಶಾಸಕರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ.
ಕುಗ್ರಾಮದಲ್ಲಿ ಹುಟ್ಟಿ, ಬಡತನದಲ್ಲಿಯೇ ಬೆಳೆದ ಈ ಇಬ್ಬರು ಸಹೋದರಿಯರ ಸಾಧನೆ ಅಭೂತಪೂರ್ವ. ಆದರೆ ಸ್ಥಳೀಯ ತಾಲೂಕು ಆಡಳಿತ ಅಥವಾ ಜಿಲ್ಲಾಡಳಿತ ಈ ಚಿನ್ನದ ಸಹೋದರಿಯರಿಗೆ ಪ್ರೋತ್ಸಾಹ ನೀಡುವ ಮೂಲಕ ಇನ್ನಷ್ಟು ಹೆಣ್ಣುಮಕ್ಕಳಿಗೆ ಸ್ಫೂರ್ತಿ ನೀಡಬೇಕಾಗಿತ್ತು. ಆದರೆ, ಅಂತಹ ಯಾವುದೇ ಕೆಲಸ ಆಗದಿರುವುದು ಬೇಸರದ ಸಂಗತಿ. ಜಿಲ್ಲಾಡಳಿತ ಕೇವಲ ಸಚಿವರ ಬಾಲಂಗೋಚಿಯಾಗಿದೆ. ಇನ್ನಾದರೂ ಜಿಲ್ಲಾಡಳಿತ ಬಡವರ, ಹೆಣ್ಣುಮಕ್ಕಳ ಪರ ಕೆಲಸ ಮಾಡಲು ಮುಂದಾಗಬೇಕು. ಸರಕಾರದಲ್ಲಿ ಹೆಣ್ಣುಮಕ್ಕಳಿಗೆ ಹಲವು ಕಾರ್ಯಕ್ರಮಗಳಿವೆ. ಅವೆಲ್ಲವನ್ನೂ ಕಾಲಕಾಲಕ್ಕೆ ತಕ್ಕಂತೆ ಅನುಷ್ಠಾನ ಮಾಡಬೇಕು.
ಜಿ.ವಿ ಗಂಗಪ್ಪ, ಜಿಲ್ಲಾ ಖಜಾಂಚಿ, ದಲಿತ ಸಂಘರ್ಷ ಸಮಿತಿ, ಗುಡಿಬಂಡೆ
- ಕೆಳಗಿನ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ
Comments 1