ಮಿಂಚು ಸಹಿತ ಮಳೆಗೆ ತತ್ತರಿಸಿದ ತಾಲೂಕು, ಅಪಾರ ಪ್ರಮಾಣದ ಬೆಳೆ ಹಾನಿ
by GS Bharath Gudibande
ಗುಡಿಬಂಡೆ: ಕಳೆದ ಎರಡು ದಿನಗಳಿಂದ ಬಿರುಗಾಳಿ, ಮಳೆ, ಗುಡುಗು, ಮಿಂಚು ಸಹಿತ ಮಳೆಗೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಬುಡಸಮೇತ ಮರಗಳು ಧರೆಗುರಳಿದ್ದು, ಅಪಾರ ಪ್ರಮಾಣದ ಹಾನಿಯಾದೆ. ತಕ್ಷಣವೇ ಬೆಳೆ ಸಮೀಕ್ಷೆ ಮಾಡಿಸಿ ಪರಿಹಾರ ನೀಡಬೇಕು ಎಂದು ರೈತರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಬುಧವಾರ ಅಪರಾಹ್ನ ಹಾಗೂ ಗುರುವಾರ ಮಧ್ಯಾಹ್ನವೂ ಸುರಿದ ಭಾರೀ ಮಳೆಗೆ ತಾಲೂಕಿನ ಜನರು ತತ್ತರಿಸಿದ್ದಾರೆ. ಗುಡಬಂಡೆ ಪಟ್ಟಣದ ಮುಖ್ಯರಸ್ತೆ, ರಾಜಕಾಲುವೆ ಸೇರಿದಂತೆ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತವಾಗಿದ್ದವು. ಕೆಲ ರಸ್ತೆಗಳಲ್ಲಿ ದೊಡ್ಡ ಮರಗಳು ಬೇರು ಸಮೇತ ಉರುಳಿಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿತ್ತು. ತಾಲೂಕು ಆಡಳಿತ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಸಿಬ್ಬಂದಿ ಜೆಸಿಬಿ ಮೂಲಕ ಮರಗಳನ್ನು ತೆರವುಗೊಳಿಸಿ ಸಮಸ್ಯೆಯನ್ನು ಬಗೆಹರಿಸಿದರು.
ದೇವಸ್ಥಾನಕ್ಕೆ ಹಾನಿ
ಗುಡಿಬಂಡೆಯಿಂದ ರಾಮಪಟ್ಟಣಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿ ರಾಮಪ್ಪ ಕೆರೆ ಪಕ್ಕದಲ್ಲಿರುವ ಗಂಗಮ್ಮ ದೇವಸ್ಥಾನದ ಮೇಲೆ ಮರವೊಂದು ಬಿದ್ದು ದೇವಸ್ಥಾನಕ್ಕೆ ಹಾನಿಯಾಗಿದೆ. ಆದರೆ, ದೇವಸ್ಥಾನದ ಮುಂದೆ ಇರುವ ವಿಗ್ರಹಗಳಿಗೆ ಹಾನಿಯಾಗಿಲ್ಲ. ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳೆ ಸಮೀಕ್ಷೆ ಮಾಡಿಸಿ
ಸತತವಾಗಿ ಎರಡು ದಿನಗಳಿಂದ ಸುರಿದ ಆಲಿಕಲ್ಲು ಮಿಶ್ರಿತ ಗಾಳಿ ಮಳೆಗೆ ರೈತರು ಬೆಳೆದ ತೋಟಗಾರಿಕೆ ಬೆಳೆಗಳು ಸೇರಿದಂತೆ ಎಲ್ಲವೂ ನೀರುಪಾಲಾಗಿದೆ. ರೈತರಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೆಳೆ ಸಮೀಕ್ಷೆ ಮಾಡಿಸಿ ಪರಿಹಾರ ಕೊಡಿಸಬೇಕು ಎಂದು ತಾಲೂಕು ರೈತರು, ರೈತಸಂಘದ ಮುಖಂಡರು ಒತ್ತಾಯ ಮಾಡಿದ್ದಾರೆ.
ಬರಪೀಡಿತ ಜಿಲ್ಲೆಯಲ್ಲಿ ಭತ್ತ ಬೆಳೆಯುವುದೇ ಕಷ್ಟ. ಅಂತಹ ಸಂದರ್ಭದಲ್ಲಿ ಕಳೆದ ಹಲವು ತಿಂಗಳ ಹಿಂದೆ ಉತ್ತಮ ಮಳೆಯಾಗಿ ಕೆರೆ ಕುಂಟೆಗಳು ತುಂಬಿದ್ದವು, ಅದೇ ಸಂತೋಷದಲ್ಲಿ ನಾವು ಭತ್ತ ಬೆಳೆದು ಇನ್ನೇನು ಕಟಾವು ಮಾಡಬೇಕಿತ್ತು. ಇಂತಹ ಸಂದರ್ಭದಲ್ಲಿ ಅಕಾಲಿಕ ಆಲಿಕಲ್ಲು ಮಳೆಯಾದ್ದರಿಂದ ಅಪಾರ ಪ್ರಮಾಣದ ಭತ್ತ, ದ್ರಾಕ್ಷಿ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿವೆ. ಸರಕಾರ ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮಾಡಿಸಿ, ಪರಿಹಾರ ನೀಡಬೇಕು.
ಅರುಣ್ ರೆಡ್ಡಿ, ಯುವ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ, (ಕೆ.ಎಸ್,ಪುಟ್ಟಣಯ್ಯ ಬಣ) ಗುಡಿಬಂಡೆ
ಗುಡಿಬಂಡೆ ತಾಲೂಕಿನ ತಹಸೀಲ್ದಾರ್ ಸಿಗ್ಬತ್ ಉಲ್ಲಾ ಮತ್ತು ರಾಜಸ್ವ ನಿರೀಕ್ಷಕ ವಿ.ಲಕ್ಷ್ಮೀನಾರಾಯಣ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.