ಪದೇಪದೆ ಭೂಕಂಪನ ಏಕೆ?
by GS Bharath Gudibande
ಚಿಕ್ಕಬಳ್ಳಾಪುರ: ಪದೇಪದೆ ಜಿಲ್ಲೆಯಲ್ಲಿ ಭೂಮಿ ನಡುಗುತ್ತಿದೆ. ಭಾರೀ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಮನೆಗಳಿಂದ ಹೊರಗೆ ಓಡಿ ಬಂದ ಜನರು ಇಡೀ ರಾತ್ರಿ ಬೀದಿಯಲ್ಲೇ ಜಾಗರಣೆ ಮಾಡಿರುವ ಘಟನೆ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರ ಹಾಗೂ ಗುಡಿಬಂಡೆ ತಾಲೂಕಿನ ಕೆಲ ಗ್ರಾಮ ಗ್ರಾಮಗಳಲ್ಲಿ ಭೂಕಂಪನದ ಸದ್ದು ಕೇಳಿ ಬಂದಿತ್ತು. ಈಗ ಬಾಗೇಪಲ್ಲಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಇದೇ ಶಬ್ದ ಕೇಳಿ ಬಂದಿದ್ದು, ಜನರು ತಲೆ ಕಡೆಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಏನು ಎಂಬುದನ್ನು ಅಧಿಕಾರಿಗಳು ಇನ್ನೂ ಕಂಡುಕೊಳ್ಳುವಲ್ಲಿ ನಿರತರಾಗಿದ್ದಾರೆ.
ತಾಲೂಕಿನ ಯಲ್ಲಂಪಲ್ಲಿ, ದೇವರಗುಡಿಪಲ್ಲಿ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ಪೆದ್ದ ತುಮಕೇಪಲ್ಲಿ, ಲಗುಮದ್ದೇಪಲ್ಲಿ, ಗುರಾಲದಿನ್ನೆ, ಶಂಖವಾರಂಪಲ್ಲಿ, ಯಲ್ಲಂಪಲ್ಲಿ, ಮದ್ದಲಖಾನೆ, ನೀರಗಂಟಿಪಲ್ಲಿ, ಟೆಂಕಮಾಕಲಪಲ್ಲಿ ಸೇರಿ ಹಲವು ಹಳ್ಳಿಗಳಲ್ಲಿ ಭೂಮಿ ನಡುಗಿದೆ.
ರಾತ್ರಿ 9.30ರಿಂದ 9.45ರ ನಡುವೆ ಎರಡು ಬಾರಿ ಶಬ್ಧ ಕೇಳಿ ಆತಂಕ ಶುರುವಾಗಿದ್ದು, ಶಬ್ಧ ಕೇಳಿದ ಜನರು ಮನೆಯಿಂದ ಹೊರಬಂದಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ನಿರಂತರವಾಗಿ ಭೂಕಂಪದ ಅನುಭವವಾಗುತ್ತಲೇ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ 3.1 ತಿವ್ರತೆ ದಾಖಲಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ. ಭೂಮಿ ಅಂತರ್ಭಾಗದಲ್ಲಿ ಆಗುತ್ತಿರುವ ಬದಲಾವಣೆಗಳು, ಅಂತರ್ಜಲದ ಪಲ್ಲಟ, ಭೂ ಪದರಗಳ ಪಲ್ಲಟ ಇತ್ಯಾದಿಗಳ ಕಾರಣಕ್ಕೆ ಭೂಮಿ ಕಂಪಿಸುತ್ತಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಮತ್ತಷ್ಟು ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕುವ ಪ್ರಯತ್ನವನ್ನು ಸಿಕೆನ್ಯೂಸ್ ನೌ ಮಾಡುತ್ತಿದೆ.
ರಾಜ್ಯದ ರಾಜಧಾನಿ ಬೆಂಗಳೂರು ನಗರಕ್ಕೆ 70 ಕಿ.ಮೀ. ದೂರದಲ್ಲಿಯೇ ಭೂಕಂಪನ ಆಗಿದ್ದು, ತೀವ್ರ ಕಳವಳಕ್ಕೆ ಕಾರಣವಾಗಿದೆ. ಅಲ್ಲದೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಬಾಗೇಪಲ್ಲಿಗೆ ಸಮೀಪದಲ್ಲೇ ಇದೆ.