by GS Bharath Gudibande
ಗುಡಿಬಂಡೆ: ವಿಕಲಚೇತನ ಬಾಲಕ ಮೋಹನ್ ಕುಮಾರ್ ನೆರವಿಗೆ ಬನ್ನಿ ಎಂದು ಸಿಕೆನ್ಯೂಸ್ ನೌ ಕೂಗಿಗೆ ರಾಜ್ಯ ಸರಕಾರದ ಪರಿಶಿಷ್ಟ ವರ್ಗಗಳ ಅಧಿಕಾರಿಗಳು ಸ್ಪಂದಿಸಿದ್ದಾರೆ. ಬಾಲಕನ ಮನೆಗೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಸಹಾಯ ಹಸ್ತ ಚಾಚಿದ್ದಾರೆ.
ಬಾಲಕನ ಬಗ್ಗೆ ಸಿಕೆನ್ಯೂಸ್ ನೌ ವರದಿ ಮಾಡಿದ ಬೆನ್ನಲ್ಲೇ ರಾಜ್ಯ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಣಿ ಅವರು ಹಾಗೂ ಪರಿಶಿಷ್ಟ ವರ್ಷಗಳ ಕಲ್ಯಾಣ ಇಲಾಖೆ ನಿರ್ದೇಶಕರಾದ ಕಾಂತರಾಜು ಅವರಿಗೆ ದೂರವಾಣಿ ಕರೆ ಮಾಡಿ ಬಾಲಕನ ಬಗ್ಗೆ ಮಾಹಿತಿ ಪಡೆಯಲು ಸೂಚಿಸಿದ್ದರು. ಇವರು ಚಿಕ್ಕಬಳ್ಳಾಪುರದ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸಿ.ಶ್ರೀಧರ್ ಅವರಿಗೆ ವರದಿ ನೀಡುವಂತೆ ತಿಳಿಸಿದ್ದರು.
ಕೆಳಗಿನ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ..
ಮೋಹನ್ ಕುಮಾರ್ ಎಳೆ ವಯಸ್ಸಿನಿಂದಲೇ ಹಾಸಿಗೆಯಿಂದ ಹೊರಬರಲು ಸಾಧ್ಯವಾಗದಷ್ಟು ದೈಹಿಕವಾಗಿ ದುರ್ಬಲನಾಗಿದ್ದಾನೆ. ಇವರ ತಂದೆ ಕೋವಿಡ್-19ರ ಎರಡನೇ ಅಲೆಯಲ್ಲಿ ಮೃತಪಟ್ಟಿದ್ದರು. ಇವರ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳಲು ಅಜ್ಜನ ಮೇಲೆ ಬಿಟ್ಟಿದ್ದರು. ಆದರೆ, ದೇವರ ವಿಧಿ ಆಟವೋ ಅಥವಾ ದುರಾದೃಷ್ಟವೋ.. ಒಂದು ತಿಂಗಳ ಹಿಂದೆ ಹೃದಯಘಾತದಿಂದ ಅವರೂ ನಿಧನರಾಗಿದ್ದರು.
ಗುಡಿಬಂಡೆ ಪಟ್ಟಣದ ತಿರುಮಲ ನಗರದ ತಿಮ್ಮರಾಜು ಅವರ ಮಗನಾದ ಮೋಹನ್ ಕುಮಾರ್ 12 ವರ್ಷದ ಮಗು, ತಂದೆ -ಅಜ್ಜನನ್ನು ಕಳೆದುಕೊಂಡು ಅನಾಥವಾಗಿದ್ದು, ಇವರನ್ನು ನೋಡಿಕೊಳ್ಳಲು ಯಾರೂ ಇಲ್ಲದೇ, ಮೋಹನ್ ಕುಮಾರ್ ಅವರ ತಾಯಿ ಮತ್ತು ಅಜ್ಜಿ ನಿಸ್ಸಹಾಯದ ಸ್ಥಿತಿಯಲ್ಲಿದ್ದರು. ಇವರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಸ್ಪಂದಿಸಿದ್ದು, ಅವರ ಜೀವನಕ್ಕೆ ಬೇಕಾಗುವ ಅನುಕೂಲ ಮಾಡಿಕೊಡಲು ಮೇಲಿನ ಅಧಿಕಾರಿಗಳಿಗೆ ವರದಿ ಕಳಿಸಿ ಕೊಡುವುದಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಅಧಿಕಾರಿ ಸಿ.ಶ್ರೀಧರ್ ಸಿಕೆನ್ಯೂಸ್ ನೌ ಗೆ ಮಾಹಿತಿ ನೀಡಿದರು.
ಸರಕಾರದಿಂದ ನೆರವು
ರಾಜ್ಯಮಟ್ಟದ ಅಧಿಕಾರಿಗಳ ನಿರ್ದೇಶನದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಕ್ಷಣ ಗುಡಿಬಂಡೆ ಪಟ್ಟಣದ ಬಾಲಕನ ಮನೆಗೆ ಭೇಟಿ ಮಾಡಿ ಮಗುವಿನ ತಾಯಿ ಮತ್ತು ಅಜ್ಜಿಯ ಜತೆ ಸಮಸ್ಯೆಯನ್ನು ಚರ್ಚಿಸಿದರು, ಅವರ ಜೀವನ ನಡೆಸಲು ಆರ್ಥಿಕವಾಗಿ ತೊಂದರೆ ಆಗದಂತೆ ಅಗತ್ಯವಾಗಿ ಬೇಕಾದ ಸಹಾಯದ ಬಗ್ಗೆ ಮಾಹಿತಿ ಪಡೆದು, ಕುಟುಂಬಕ್ಕೆ ಧೈರ್ಯ ತುಂಬಿದರು.
ಉನ್ನತ ಅಧಿಕಾರಿಗಳು ಸೂಚನೆ ಮೆರೆಗೆ ನಾವು ಬಾಲಕನ ಮನೆಗೆ ಭೇಟಿ ನೀಡಿದ್ದೇವೆ. ಬಾಲಕನಿಗೆ ಅಂಗವೈಕಲ್ಯ ಮಾಶಾಸನ 1,400 ರೂ. ಬರುತ್ತಿದೆ. ಶಾಲೆಯಿಂದ ಬರಬೇಕಾದ ಪ್ರೋತ್ಸಾಹ ಹಣ ಕೋವಿಡ್ ಕಾರಣದಿಂದ ಬರುತ್ತಿಲ್ಲ. ಬಾಲಕನನ್ನು ನೋಡಿಕೊಂಡು ಜೀವನ ನಡೆಸಲು ಅವಶ್ಯಕವಾದ ಆಧಾರದ ಬಗ್ಗೆ ಮಾಹಿತಿ ಕಲೆ ಹಾಕಿ ನಮ್ಮ ಮೇಲಿನ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಹಾಗೂ ಅತಿ ಶೀಘ್ರದಲ್ಲಿ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡುತ್ತೇವೆ.
ಸಿ.ಶ್ರೀಧರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಚಿಕ್ಕಬಳ್ಳಾಪುರ
ಅಧಿಕಾರಿಗಳು ನಮ್ಮ ಮನೆಗೆ ಭೇಟಿ ನೀಡಿ ನಮ್ಮ ಪರಿಸ್ಥಿತಿಯನ್ನು ಆಲಿಸಿದರು. ಆರ್ಥಿಕವಾಗಿ ಸಹಾಯ ಮಾಡಲು ಮನವಿ ಮಾಡಿದ್ದೇವೆ. ನನ್ನ ಗಂಡ ತಿಮ್ಮರಾಜು ಅವರು ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ. ಕೆಲ ತಿಂಗಳಲ್ಲೇ ನಮ್ಮ ಮಾವ ಕೂಡ ದೇವರ ವಿಧಿಯಾಟಕ್ಕೆ ಬಲಿಯಾದರು. ನನ್ನ ಮಗ ಹುಟ್ಟಿದಾಗಿನಿಂದ ಅಂಗವೈಕಲ್ಯತೆ ಹೊಂದಿದ್ದಾನೆ. ಪ್ರಸ್ತುತ ನಾವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮಗೆ ಸರಕಾರದಿಂದ ನೆರವು ನೀಡಲು ಮನವಿ ಮಾಡುತ್ತೇನೆ.
ಗಂಗರತ್ನಮ್ಮ, ಮೋಹನ್ ತಾಯಿ