ಗುಡಿಬಂಡೆಯಲ್ಲೊಬ್ಬರು ಜನಪರ ಅಧಿಕಾರಿ
ಗುಡಿಬಂಡೆ: ಸರಕಾರಿ ಕಚೇರಿಯ ಅಂದರೆ ಅದೆಷ್ಟೋ ಜನರು ಅತ್ತ ತಲೆಹಾಕಿ ಸಹ ಮಲಗುವುದಿಲ್ಲ. ಕಾರಣ, ಸುಮ್ಮನೆ ಅಲೆದಾಡಬೇಕು, ಅಲ್ಲಿ ಕೆಲಸ ಬೇಗ ಆಗುವುದಿಲ್ಲ ಎಂಬುವರಿಗೆ ಭರವಸೆ ಮೂಡಿಸದ ಯುವ ಅಧಿಕಾರಿಗೆ ತಾಲೂಕಿನ ಜನ ಫಿದಾ ಆಗಿದ್ದಾರೆ.
ಗುಡಿಬಂಡೆ ತಾಲೂಕಿಗೆ ಬಂದು ಕೇವಲ ಐದಾರು ತಿಂಗಳಾಗಿದ್ದರೂ ಎಲ್ಲಾ ಹಳ್ಳಿಗಳ ಬಗ್ಗೆ ಮಾಹಿತಿ, ಸಾರ್ವಜನಿಕರ ಸಮಸ್ಯೆ ಆಲಿಸಿ ಶೀಘ್ರವಾಗಿ ಪರಿಹಾರ ಮಾಡುವ ವಿಧಾನ ಇವೆಲ್ಲವೂ ಸಾರ್ವಜನಿಕರಿಗೆ ಧೈರ್ಯ ಕೊಡುತ್ತಿದ್ದು, ಜನರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಮನೆ ಬಾಗಿಲಿಗೇ ಸರಕಾರಿ ಸೌಲಭ್ಯ
ಎಲ್ಲ ಇಲಾಖೆಗಳ ಮಾತೃ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ವೃದ್ಧರಿಗೆ, ವಿಕಲಚೇತನರು ಸೇರಿ ತಾಲೂಕು ಕಚೇರಿಯ ವಿವಿಧ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಮಧ್ಯವರ್ತಿಗಳನ್ನು ಹತ್ತಿರ ಬಿಟ್ಟುಕೊಳ್ಳದೇ ಸ್ವತಃ ಗ್ರೇಡ್-2 ತಹಶೀಲ್ದಾರ್ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ಮಧ್ಯವರ್ತಿಗಳಿಗೆ ನೋ ಎಂಟ್ರಿ
ಸರಕಾರಿ ಕಚೇರಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಡಲು ಮಧ್ಯವರ್ತಿಗಳ ದಂಡೇ ಇರುತ್ತದೆ. ಆದರೆ, ಗುಡಿಬಂಡೆ ತಾಲೂಕು ಕಚೇರಿಯಲ್ಲಿ ಅಂಥ ದಲ್ಲಾಳಿಗಳಿಗೆ ಅವಕಾಶವೇ ಇಲ್ಲ, ಸಾರ್ವಜನಿಕರು ತಮ್ಮ ಕೆಲಸವನ್ನು ಮಾಡಿಕೊಳ್ಳಲು ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಬೇಕು ಹಾಗಾಗಿ ಮಧ್ಯವರ್ತಿಗಳ ಎಂಟ್ರಿಗೆ ಬ್ರೇಕ್ ಹಾಕಲಾಗಿದೆ.
ತಾಲೂಕಿನಲ್ಲಿ ನೂರಾರು ಜನರಿಗೆ ಇನ್ನೂ ಸರಕಾರದ ವಿವಿಧ ಸೌಲಭ್ಯಗಳು ಸೇವೆ ಸಿಗುತ್ತಿಲ್ಲ, ಅನೇಕ ಜನ ತಮ್ಮ ವೃದ್ಧಾಪ್ಯ ವೇತನ, ಅಂಗವೈಕಲ್ಯ ವೇತನ ಸೇರಿ ಇತರೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲ್ಲ. ಅದಕ್ಕೆ ಅನೇಕ ಕಾರಣಗಳು ಇರಬಹುದು. ಈಗ ಗ್ರೇಡ್-2 ತಹಶೀಲ್ದಾರ್ ಅವರು ಯುವಕರಾಗಿದ್ದು, ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ. ಅವರಿಗೆ ಧನ್ಯವಾದಗಳು.
ಇಮ್ರಾನ್ ಖಾನ್, ಗುಡಿಬಂಡೆ ನಿವಾಸಿ
ಹಗಲು ರಾತ್ರಿ ಎನ್ನದೇ ಸದಾ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಯುವ ಅಧಿಕಾರಿಗೆ ನಮ್ಮ ಮೆಚ್ಚುಗೆ ಇದೆ. ಗ್ರಾಮಗಳಿಗೆ ಭೇಟಿ ನೀಡಿ ಸರಕಾರದ ಯೋಜನೆಗಳಾದ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಮೈತ್ರಿ, ಮನಸ್ವಿನಿ ಮುಂತಾದವುಗಳ ಬಗ್ಗೆ ಜನತೆಗೆ ತಿಳಿಸಿ, ದಲ್ಲಾಳಿಗಳ ಪ್ರಮೇಯ ಇಲ್ಲದೆ ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ. ಸಹಾಯವಾಣಿಗೆ ಕರೆ ಮಾಡಿ ಮನೆಯಿಂದಲೇ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳುವುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ.
ಬಾಲಗಂಗಾಧರ್ ತಿಲಕ್, ಗುಡಿಬಂಡೆ
ನಾನು ಅತ್ಯಂತ ಕಡು ಬಡತನದಿಂದ ವಿದ್ಯಾಭ್ಯಾಸ ಮಾಡಿ ಈ ಸ್ಥಾನಕ್ಕೆ ಬಂದಿದ್ದೇನೆ. ನಮ್ಮ ಮನೆಯಲ್ಲಿ ನಾನು 12ನೇ ತರಗತಿಗೆ ಬರುವವರೆಗೂ ವಿದ್ಯುತ್ ಇರಲಿಲ್ಲ. ಅಂತಹ ಪರಿಸ್ಥಿತಿ ಇತ್ತು. ಅದರ ನೋವು ನನಗೆ ಚನ್ನಾಗಿ ಗೊತ್ತಿದೆ. ಗುಡಿಬಂಡೆ ತಾಲೂಕಿನಲ್ಲಿ ಅನೇಕ ಸಾರ್ವಜನಿಕರು ಸರಕಾರಿ ಕಚೇರಿಗೆ ಬರಲು ಭಯಪಡುತ್ತಾರೆ. ಅದನ್ನು ಹೋಗಲಾಡಿಸಿ ಸಾರ್ವಜನಿಕ ಸ್ನೇಹಿ ಕಚೇರಿಯನ್ನು ನಿರ್ಮಾಣ ಮಾಡಬೇಕು, ಅರ್ಹ ಫಲಾನುಭವಿಗಳಿಗೆ ಕೆಲ ನಿಮಿಷಗಳಲ್ಲಿಯೇ ಪಿಂಚಣಿ ವ್ಯವಸ್ಥೆ ಮಾಡುತ್ತಿದ್ದೇವೆ. ಗ್ರಾಮಮಟ್ಟದಲ್ಲಿ ಗ್ರಾಮ ಒನ್, ಗ್ರಾಮ ಸಹಾಯಕರು, ಗ್ರಾಮ ಲೆಕ್ಕಾದಿಕಾರಿಗಳು ಮಾಡುವ ಕೆಲಸಕ್ಕೆ ಪ್ರೋತ್ಸಾಹ ನೀಡಬೇಕು. ಆಗ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ. ನಮ್ಮ ಮೇಲಿನ ಅಧಿಕಾರಿಗಳ ಸಂಪೂರ್ಣ ಸಹಕಾರದಿಂದ ಈ ಕೆಲಸ ಮಾಡಲು ಸಾಧ್ಯವಾಯಿತು.
ಮಹೇಶ್, ಗ್ರೇಡ್-2 ತಹಶೀಲ್ದಾರ್, ಗುಡಿಬಂಡೆ