ನ್ಯಾ.ಭೀಮನಗೌಡ ಸಂಗನಗೌಡ ಪಾಟೀಲ್ ನೂತನ ನೂತನ ಲೋಕಾಯುಕ್ತ
ಬೆಂಗಳೂರು: ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಂದ ತೆರವಾಗಿದ್ದ ಲೋಕಾಯುಕ್ತ ಹುದ್ದೆಗೆ ರಾಜ್ಯ ಸರಕಾರ ಕೊನೆಗೂ ನೇಮಕ ಮಾಡಿದೆ.
ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಹಾಲಿ ಉಪ ಲೋಕಾಯುಕ್ತರಾಗಿರುವ ನ್ಯಾ.ಭೀಮನಗೌಡ ಸಂಗನಗೌಡ ಪಾಟೀಲ್ ಅವರೇ ನೂತನ ಲೋಕಾಯುಕ್ತರು.
ನ್ಯಾ.ಪಾಟೀಲ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿದ್ದ ಶಿಫಾರಸನ್ನು ಅಂಗೀಕಾರ ಮಾಡಿರುವ ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಅವರು ನೇಮಕಕ್ಕೆ ಮಂಗಳವಾರ ಅಂಕಿತ ಹಾಕಿದ್ದಾರೆ.
ಬಿಎಸ್ ಪಾಟೀಲ್ ಅವರು ನಾಳೆ ಬೆಳಗ್ಗೆ ರಾಜಭವನದಲ್ಲಿ ನೂತನ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು 2022ರ ಜನವರಿ 27ರಂದು ನಿವೃತ್ತರಾಗಿದ್ದರು. ಅಂದಿನಿಂದ ಈ ಹುದ್ದೆ ಖಾಲಿ ಇತ್ತು. ಈ ಹುದ್ದೆಗೆ ಈಗ ಬಿ.ಎಸ್. ಪಾಟೀಲ್ ಅವರನ್ನು ನೇಮಕ ಮಾಡಲಾಗಿದ್ದು, ಅವರು 2019ರ ನವೆಂಬರ್ನಿಂದ ಉಪ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇಮಕಾತಿ ನಿಯಮಾವಳಿಯಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ವಿಧಾನಸಭೆ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಜತೆ ಸಮಾಲೋಚಿಸಿದ ಬಳಿಕ ನ್ಯಾ.ಪಾಟೀಲ್ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿದ್ದರು.