ಪ್ರಧಾನಿ ಮುಂದೆ ಡಜನ್ ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್
ಬೆಂಗಳೂರು: ಬಿಬಿಎಂಪಿ ಚುನಾವಣೆ ಹಾಗೂ ವಿಧಾನ ಸಭೆ ಚುನಾವಣೆಗಳು ಸಮೀಪಿಸುತ್ತಿರುವ ಹೊತ್ತಲ್ಲಿ ಎರಡು ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರು ಡಜನ್ ಪ್ರಶ್ನೆಗಳನ್ನು ಕೇಳಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಎಲ್ಲಾ ಮಾಜಿ ಮೇಯರ್ ಗಳ ಜತೆ ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ ಅವರು, ಪ್ರಶ್ನೆಗಳ ಸುರಿಮಳೆಗೈದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;
‘ಪ್ರಧಾನಮಂತ್ರಿಗಳು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಂತೋಷ. ಆದರೆ ಈ ಸಂದರ್ಭದಲ್ಲಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳ ಬಯಸುತ್ತೇನೆ.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಂದರೆ 2018 ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್ ಸರ್ಕಾರ 10 % ಕಮಿಷನ್ ಸರ್ಕಾರ, ಸೀದಾರಮಯ್ಯ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದ್ದರು. ಆಗ ಸಿದ್ದರಾಮಯ್ಯ ಅರ ವಿರುದ್ಧವಾಗಲಿ, ಸಂಪುಟ ಸಚಿವರ ವಿರುದ್ಧ ಯಾವುದೇ ಆರೋಪ ಹಾಗೂ ದೂರು ದಾಖಲಾಗಿರಲಿಲ್ಲ. ಆದರೂ ರಾಜಕೀಯ ಕಾರಣಗಳಿಗೆ ಕಾಂಗ್ರೆಸ್ ಸರ್ಕಾರವನ್ನು 10% ಸರ್ಕಾರ ಎಂದಿದ್ದರು. ಆದರೆ ಈಗ, ರಾಜ್ಯದಲ್ಲಿರುವ ನಿಮ್ಮ ಸರ್ಕಾರ 40 % ಸರ್ಕಾರ ಎಂದು ವಿಶ್ವವಿಖ್ಯಾತಿ ಪಡೆದಿದ್ದು, ಈ ಅಮೋಘ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಲು ಬಯಸುತ್ತೇನೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಒಂದು ವರ್ಷದ ಹಿಂದೆ ನೇರವಾಗಿ ನಿಮಗೆ ಪತ್ರ ಬರೆಯುತ್ತಾರೆ. ಇನ್ನು ಆತ್ಮಹತ್ಯೆಗೂ ಮುನ್ನ ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ 40 % ಕಮಿಷನ್ ಕಿರುಕುಳ ಕುರಿತು ನಿಮ್ಮನ್ನು ಭೇಟಿ ಮಾಡಲು ಪ್ರಯತ್ನಿಸಿ ಸಾಧ್ಯವಾಗದೇ ಪತ್ರ ಬರೆದರೂ ಈ ಭ್ರಷ್ಟಾಚಾರಗಳ ನೀವು ಮೌನಿ ಬಾಬಾ ಆಗಿದ್ದು ಯಾಕೆ?
ಪಿಎಸ್ಐ, ಸಹಾಯಕ ಪ್ರಾಧ್ಯಪಕರು, ಅರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ತಾಂಡವವಾಡುತ್ತಿದೆ. ಆದರೂ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳಿಂದ ತನಿಖೆ ಯಾಕಿಲ್ಲ? ನಿಮಗೆ ನಿಮ್ಮ ಸಚಿವರ ಭ್ರಷ್ಟಾಚಾರ ಕಾಣಿಸುತ್ತಿಲ್ಲವೇ? ಭ್ರಷ್ಟಾಚಾರ ವಿರುದ್ಧದ ಹೋರಾಟ ಎಂದರೆ, ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು ಮಾತ್ರವೇ?
2022 ರ ವೇಳೆಗೆ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ನೀವು ಹೇಳಿದ್ದ ಮಾತು ನೆನಪಿದೆಯೇ? ರೈತರ ಆದಾಯದ ಬದಲು 700 ರೂ. ಇದ್ದ ರಸಗೊಬ್ಬರ 2 ಸಾವಿರ ಮುಟ್ಟಿದೆ, ಯಂತ್ರೋಪರಣಗಳ ಬಳಕೆ ವೆಚ್ಚ ಡಬಲ್ ಆಗಿರುವುದರ ಬಗ್ಗೆ ಏನು ಹೇಳುತ್ತೀರಿ ಮೋದಿಯವರೇ? ಇವರು ಕೊಡುವ ಸಬ್ಸಿಡಿ ರಸಗೊಬ್ಬರಕ್ಕೆ ಸಾಲುವುದಿಲ್ಲ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ನೀವು ಹೇಳಿದ್ದಿರಿ, ಆದರೆ ರಾಜ್ಯದಲ್ಲಿ ಹಿಜಾಬ್, ಆಜಾನ್, ಹಲಾಲ್, ಆರ್ಥಿಕ ಜಿಹಾದ್ ಹೆಸರಿನಲ್ಲಿ ಅಲ್ಪ ಸಂಖ್ಯಾತರ ಮೇಲೆ ನಿಮ್ಮ ಸಂಘಪರಿವಾರದವರೇ ಕೋಮು ದೌರ್ಜನ್ಯ ನಡೆಯುತ್ತಿದ್ದು, ಈ ವಿಚಾರದಲ್ಲಿ ನಿಮ್ಮ ನಿಲುವೇನು?
ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯಲ್ಲಿ ತೇಲಿಸಲಿದೆ ಎಂದು ಬೀಗಿದ್ದಿರಿ ಅಲ್ಲವೇ? ರಾಜ್ಯದಲ್ಲಿ ನಿಮ್ಮ ಸರ್ಕಾರದ 5 ಸಾಧನೆ ಪಟ್ಟಿ ನೀಡುವಿರಾ?
ಕೋವಿಡ್ ಸಮಯದಲ್ಲಿ ನೀವು ಹೇಳಿದಂತೆ ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆದು, ದೀಪ ಹಚ್ಚಿದೆವು. ಆದರೆ ತುರ್ತು ಸಮಯದಲ್ಲಿ ಆಕ್ಸಿಜನ್ ಪೂರೈಸದೇ ರಾಜ್ಯದ ಚಾಮರಾಜನಗರದಲ್ಲಿ 34 ಮಂದಿ ಪ್ರಾಣ ನುಂಗಿದ್ದು ಯಾಕೆ? ಆಕ್ಸಿಜನ್, ರೆಮಡಿಸಿವಿಯರ್, ಬೆಡ್, ವೆಂಟಿಲೇಟರ್ ಸಿಗಲಿಲ್ಲ. ಕಡೆಗೆ ಸ್ಮಾಶಾನದಲ್ಲೂ ಜಾಗಸಿಗಲಿಲ್ಲ. ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತೇ ಇಲ್ಲ ಎಂದು ನಿಮಗೆ ಸುಳ್ಳು ವರದಿ ಕೊಟ್ಟ ನಿಮ್ಮ ಸರ್ಕಾರದ ವಿರುದ್ಧ ಕ್ರಮ ಇಲ್ಲ ಯಾಕೆ? ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಗೆ ಬಲಿಯಾಗಿದ್ದರೂ 40 ಸಾವಿರ ಎಂದು ಸುಳ್ಳು ಲೆಕ್ಕ ತೋರಿದ್ದು ಯಾಕೆ?
ಕಾಂಗ್ರೆಸ್ ಪ್ರತಿಭಟನೆಯಿಂದ ಕೋವಿಡ್ ಸೋಂಕು ಹರಡುತ್ತದೆ ಎಂದು ನಿಮ್ಮ ಸಚಿವ ಸುಧಾಕರ್ ಹೇಳುತ್ತಿದ್ದಾರೆ. ನೀವು ಬೆಂಗಳೂರಿನ ಕೊಮ್ಮಘಟ್ಟದಲ್ಲಿ 50 ಸಾವಿರ ಜನರನ್ನು ಸೇರಿಸಿ ಸಾರ್ವಜನಿಕ ಸಭೆ ಮಾಡುತ್ತಿದ್ದೀರಿ, 12 ಸಾವಿರಕ್ಕೂ ಹೆಚ್ಚು ಜನರ ಜತೆ ಮೈಸೂರಿನಲ್ಲಿ ಯೋಗ ಮಾಡಲಿದ್ದೀರಿ, ನಿಮ್ಮ ಈ ಕಾರ್ಯಕ್ರಮಗಳಿಂದ ಕೊರೋನಾ ಹರಡುವುದಿಲ್ಲವೇ? ಸುಧಾಕರ್ ಅವರೇ ಮಾಸ್ಕ್ ಇಲ್ಲದೆ ಮಕ್ಕಳ ಜತೆ ಇದ್ದಾರೆ. ಇನ್ನು 25 ಕಿ.ಮೀ ಗೂ ಹೆಚ್ಚು ರೋಡ್ ಶೋ ಮಾಡಲು ನಿರ್ಧರಿಸಿದ್ದರು, ನಿನ್ನೆ ಬಿದ್ದ ಮಳೆಗೆ ಗುಂಡ್ಡಿ ಹೆಚ್ಚಾಗಿರುವ ಕಾರಣ ಆ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಇವರು ಹಾಕಿದ ತೇಪೆ ಕಿತ್ತುಹೋಗಿದೆ. ಇವರಿಗಾಗಿ ಪಾಲಿಕೆಯವರು 12 ಕಿ.ಮೀ ರಸ್ತೆಗೆ ಡಾಂಬರ್ ಹಾಕಿ ಸಿದ್ಧಪಡಿಸಿದ್ದರು.
ಬೆಂಗಳೂರಿನಲ್ಲಿ 8 ಸಚಿವರಿದ್ದು, ಅವರು ಪ್ರಧಾನಿ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ನೋಡಿಕೊಳ್ಳಲಿ ತಪ್ಪಿಲ್ಲ. ಆದರೆ ನಗರದಲ್ಲಿ ಲಕ್ಷಾಂತರ ರಸ್ತೆಗುಂಡಿಗಳು ಬಿದ್ದಾಗ, ನೆರೆ ಬಂದಾಗ ಈ ಸಚಿವರುಗಳು ತಮ್ಮ ಕ್ಷೇತ್ರ ಬಿಟ್ಟು ಹೊರಗೆ ಬರಲಿಲ್ಲ.
ಇನ್ನು ಮೇಕೆದಾಟು ಹಾಗೂ ಮಹದಾಯಿ ನಮ್ಮ ರಾಜ್ಯಕ್ಕೆ ಅಗತ್ಯವಿರುವ ಎರಡು ಪ್ರಮುಖ ನೀರಾವರಿ ಯೋಜನೆ. ಈ ಯೋಜನೆಗೆ ಯಾವಾಗ ಅನುಮತಿ ಕೊಡಿಸುವಿರಿ? ಈ ಬಗ್ಗೆ ನಿಮ್ಮ ಸ್ಪಷ್ಟ ನಿಲುವು ತಿಳಿಸಿ.
ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಮತಬ್ಯಾಂಕ್ ಸೆಳೆಯಲು ಮೋದಿ ಅವರು ಬಸವಣ್ಣ, ಅಂಬೇಡ್ಕರ್, ಬುದ್ಧ, ಭಗತ್ ಸಿಂಗ್, ನಾರಾಯಣ ಗುರು, ಕನಕದಾಸರು, ಮಹಾವೀರರು ಸೇರಿದಂತೆ ಮಹನೀಯರ ಜಪ ಮಾಡುತ್ತೀರಿ. ಆದರೆ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಈ ಮಹನೀಯರಿಗೆ ಅಪಮಾನ ಮಾಡಿದ್ದು, ಈ ಬಗ್ಗೆ ನಿಮ್ಮ ಸಬುಬೂ ಏನು? ನಿಮ್ಮ ಸರ್ಕಾರ ಪೂರ್ವಯೋಜನೆ ಮಾಡಿ ಚಕ್ರತೀರ್ಥರನ್ನು ನೇಮಿಸಿ ಪಠ್ಯದಲ್ಲಿ ಅಪಮಾನ ಮಾಡಿ ಈಗ ಸಮಿತಿ ವಜಾ ಮಾಡಿದೆ. ಆದರೆ ಚಕ್ರತೀರ್ಥ ಹಾಗೂ ಪರಿಷ್ಕೃತ ಪಠ್ಯವನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ನಿಮ್ಮ ಸಮರ್ಥನೆ ಏನು?
ಕಳೆದ ಎಂಟು ವರ್ಷದಿಂದ ರಾಜ್ಯದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಮೂಲಕ 19 ಲಕ್ಷ ಕೋಟಿ ಸಂಗ್ರಹವಾಗಿದ್ದು, ವಿವಿಧ ಯೋಜನೆಗಳ ಮೂಲಕ ಕೊಟ್ಟಿರೋದು ಕೇವಲ 4.5 ಲಕ್ಷ ಕೋಟಿ. ಇನ್ನೂ ರಾಜ್ಯಕ್ಕೆ ಜಿಎಸ್ ಟಿ ಪಾಲು ನೀಡದೆ ಸಾಲ ನೀಡಿ, ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡುತ್ತಿರುವುದೇಕೆ? ರಾಜ್ಯಕ್ಕೆ ಈ ರೀತಿ ಅನ್ಯಾಯ ಮಾಡುತ್ತಿರುವುದೇಕೆ? ರಾಜ್ಯದಿಂದ 25 ಸಂಸದರಿದ್ದರು ರಾಜ್ಯದ ನೆಲ, ಜಲ, ಭಾಷೆ ವಿಚಾರವಾಗಿ ಒಬ್ಬರೂ ಗಟ್ಟಿ ಧ್ವನಿ ಎತ್ತುತ್ತಿಲ್ಲ.
ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದು 10 ತಿಂಗಳಾದರೂ ಸರಿಯಾಗಿ ನಗರ ಪ್ರದಕ್ಷಿಣೆ ಹಾಕಿರಲಿಲ್ಲ. ಆದರೆ ಪ್ರಧಾನಿ ಬರುತ್ತಿದ್ದಾರೆ ಎಂದು ಇಡೀ ನಗರದ ವ್ಯವಸ್ಥೆಯನ್ನು ಪರಿಶೀಲನೆಯನ್ನು ಖುದ್ದಾಗಿ ತಾವೇ ಮಾಡುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿ ಎಂದರೆ ಕೇವಲ ಬಿಜಪಿ ಶಾಸಕರಿರುವ ಕ್ಷೇತ್ರಗಳ ಅಭಿವೃದ್ಧಿಯೇ? ಅಥವಾ 28 ಕ್ಷೇತ್ರಗಳ ಅಭಿವೃದ್ದಿಯೇ? ಬೆಂಗಳೂರಿನ 15 ಬಿಜೆಪಿ ಶಾಸಕರಿಗೆ ನಿಮ್ಮ ಸರ್ಕಾರ ₹9890 ಕೋಟಿ ಅನುದಾನ ನೀಡಿದರೆ, ಕಾಂಗ್ರೆಸ್ ನ 12 ಶಾಸಕರಿಗೆ ₹2165 ಕೋಟಿ ಮಾತ್ರ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಯಲ್ಲಿ ರಾಜಕೀಯ ತಾರತಮ್ಯ ಎಷ್ಟು ಸರಿ? ನೀವು ಬೆಂಗಳೂರು ಅಭಿವೃದ್ಧಿ ಎಂದು ಹೇಳುವ ಮುನ್ನ ಬಿಜೆಪಿ ಶಾಸಕರ ಕ್ಷೇತ್ರದ ಅಭಿವೃದ್ಧಿ ಎಂದು ಹೇಳಿ. ದಯವಿಟ್ಟು ನಿಮಗೊಂದು ಕಳಕಳಿಯ ಮನವಿ. ಇಡೀ ಬೆಂಗಳೂರು ಒಂದು ರೌಂಡ್ ಬರುವ ಕಾರ್ಯಕ್ರಮ ಹಾಕಿಕೊಳ್ಳಿ. ಆಗ ಎಲ್ಲ ರಸ್ತೆಗಳೂ ದುರಸ್ಥಿ ಆಗುತ್ತವೆ.’
ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈ ತಂತ್ರ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ಬಿಜೆಪಿಯವರು ಹೈದರಾಬಾದ್ ನಲ್ಲೂ ಇದೇ ರೀತಿ ಮಾಡಿದ್ದರು. ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಪ್ರಧಾನಮಂತ್ರಿಗಳು ಬರಲು ಸಾಧ್ಯವಿಲ್ಲ ಎಂದು ಚುನಾವಣೆ ಸಮಯದಲ್ಲಿ ರೋಡ್ ಶೋ ಮಾಡಿದ್ದರು. ಅದೇ ರೀತಿ ಇಲ್ಲೂ ಮಾಡಲು ಪ್ರಯತ್ನಿಸುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಮಗೆ ಒಂದೂ ಸ್ಥಾನವಿಲ್ಲದಿದ್ದರೂ 2 ಸ್ಥಾನವನ್ನು ನಾವು ಗೆದ್ದಿದ್ದೇವೆ. ಇನ್ನು ಹೊರಟ್ಟಿಯವರು ತಮ್ಮ ವರ್ಚಸ್ಸಿನ ಮೇಲೆ ಗೆದ್ದಿದ್ದು, ಅದು ಬಿಜೆಪಿ ಗೆಲುವಾಗುವುದಿಲ್ಲ. ಹಾಗಾಗಿ ಬಿಜೆಪಿ ಗೆದ್ದಿರುವುದು ಕೇವಲ 1 ಕ್ಷೇತ್ರದಲ್ಲಿ ಮಾತ್ರ. ಇನ್ನು ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ಶೇ.75ರಷ್ಟು ಗೆದ್ದಿದ್ದಾರೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿತ್ತು. ಆದರೆ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ.48ರಷ್ಟು ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದೆಲ್ಲವೂ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದು ಅರ್ಥ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಅದರಲ್ಲಿ ಸಂಶಯವೇ ಬೇಡ’ ಎಂದರು.
ಇನ್ನು ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿರುವ SBM ನಾಯಕರ ವಿರುದ್ಧ ಟೀಕೆ ಮಾಡಿದ್ದರು. ಈಗ ಅವರನ್ನೇ ಪಕ್ಕ ಕೂರಿಸಿಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರಲ್ಲವೇ ಎಂಬ ಪ್ರಶ್ನೆಗೆ, ‘ನಿಜ, ಮತದಾರ ಗುರುತಿನ ಚೀಟಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಈ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಈಗ ಈ ಬಗ್ಗೆ ಅವರೇ ಉತ್ತರ ನೀಡಲಿ’ ಎಂದರು.
ಕೋವಿಡ್ ಹರಡಲಿದೆ ಎಂದು ಹೇಳಿರುವ ಸುಧಾಕರ್ ಅವರು ಮೋದಿ ಅವರ ಕಾರ್ಯಕ್ರಮಕ್ಕೆ ಹೋಗುವುದು ಎಷ್ಟು ಸರಿ ಎಂಬ ಪ್ರಶ್ನೆಗೆ, ‘ಈ ಪ್ರಶ್ನೆಯನ್ನು ಮಾಧ್ಯಮಗಳೇ ಅವರನ್ನು ನೇರವಾಗಿ ಕೇಳುವುದು ಉತ್ತಮ. ನಾನು ಹೇಳುವುದನ್ನು ಮಾಧ್ಯಮಗಳು ತೋರಿಸಬೇಕು ಅಷ್ಟೇ’ ಎಂದು ಉತ್ತರಿಸಿದರು.
ಅಭಿವೃದ್ಧಿ ಕಾರ್ಯಕ್ಕಾಗಿ ಮಾಡುವ ಕಾರ್ಯಕ್ರಮ ತಪ್ಪು ಎಂದು ಹೇಗೆ ಹೇಳುತ್ತೀರಿ, ‘ಅಭಿವೃದ್ಧಿ ಮಾಡಲಿ, ಶಂಕುಸ್ಥಾಪನೆ ಮಾಡಿ ಹೋಗಲಿ. ಈ ಹಿಂದೆ ಮೋದಿ ಅವರು ಸುರಂಗ ರಸ್ತೆ ಉದ್ಘಾಟನೆ ಮಾಡಿ ಜನರಿಲ್ಲದಿದ್ದರೂ ಕ್ಯಾಮೆರಾ ಮುಂದೆ ಟಾಟಾ ಮಾಡುತ್ತಾ ಪೋಸ್ ಕೊಟಟಿರಲಿಲ್ಲವೇ? ಅದೇ ರೀತಿ ಈಗಲೂ ಟಾಟಾ ಮಾಡಿ ಹೋಗಲಿ. ಮೋದಿ ಅವರು ಫೋಟೋದಲ್ಲಿ ಅವರೊಬ್ಬರು ಇರುತ್ತಾರೆಯೇ ಹೊರತು, ಮುಖ್ಯಮಂತ್ರಿಗಳು, ಸಚಿವರು, ಇಲಾಖೆ ಅಧಿಕಾರಿಗಳು ಇರುವುದಿಲ್ಲ’ ಎಂದರು.
ಸಬ್ ಅರ್ಬನ್ ರೈಲು ಯೋಜನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ಹಿಂದೆ ರೈಲ್ವೇ ಯೋಜನೆಗಳಿಗೆ ಭೂಮಿ ನಮ್ಮದು ಯೋಜನಾ ವೇಚ್ಚ ಅವರದು ಎಂದಿತ್ತು, ನಂತರ ಕೇಂದ್ರ ಸರ್ಕಾರ ಶೇ.75 ಹಾಗೂ ರಾಜ್ಯ ಸರ್ಕಾರ ಶೇ.25 ರಷ್ಟು ವೆಚ್ಚ ಭರಿಸುವಂತಿತ್ತು. ಈಗ ಅದು 40:60ಗೆ ಬಂದಿದೆ. ಜತೆಗೆ ಭೂಮಿ ವಶಪಡಿಸಿಕೊಳ್ಳುವ ಜವಾಬ್ದಾರಿಯೂ ರಾಜ್ಯ ಸರ್ಕಾರದ್ದೇ ಆಗಿದ್ದು, ಇದರಿಂದ ಸಹಜವಾಗಿ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೆರೆ ಹೆಚ್ಚಾಗಲಿದೆ. ಈ ಹಿಂದೆ ಕೇವಲ 1 ಕೋಟಿ ಮಾತ್ರ ಬಜೆಟ್ ನಲ್ಲಿ ಮೀಸಲಿಟ್ಟಿದ್ದರು’ ಎಂದರು.
ಅಗ್ನಿಪತ್ ಯೋಜನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸೇನೆಯಲ್ಲಿ 17ರಿಂದ 23 ವಯೋಮಿತಿಯವರನ್ನು ಸೇನೆಗೆ 4 ವರ್ಷಗಳ ಕಾಲಕ್ಕೆ ತೆಗೆದುಕೊಂಡು ನಂತರ ಮನೆಗೆ ಕಳುಹಿಸುತ್ತಾರೆ. ನಾಲ್ಕು ವರ್ಷದ ನಂತರ ಅವರಿಗೆ ಉದ್ಯೋಗವೂ ಇಲ್ಲ, ಪಿಂಚಣಿ ಹಾಗೂ ಯಾವುದೇ ಸೌಲಭ್ಯಗಳೂ ಇರುವುದಿಲ್ಲ. ಅವರಿಗೆ ಶಿಕ್ಷಣವೂ ಸರಿಯಾಗಿ ಆಗುವುದಿಲ್ಲ. ಅಲ್ಲಿಂದ ಬಂದವರಿಗೆ ಯಾರು ಉದ್ಯೋಗ ನೀಡುತ್ತಾರೆ? ಕೇಂದ್ರ ಸರ್ಕಾರದ 60 ಲಕ್ಷ ಉದ್ಯೋಗಗಳು ಖಾಲಿ ಇದ್ದು, ಕಳೆದ 3 ವರ್ಷದಿಂದ ಸೇನೆಯಲ್ಲೂ ನೇಮಕಾತಿ ಮಾಡಿರಲಿಲ್ಲ. ಇದು ಉದ್ಯೋಗವಲ್ಲ, ಹೊರಗುತ್ತಿಗೆ ಅಥವಾ ಗುತ್ತಿಗೆ ಆಧಾರದಲ್ಲಿ ಯೋಧರನ್ನು ನೇಮಿಸಿಕೊಳ್ಳುವಂತಾಗುತ್ತದೆ. ಮೋದಿ ಹಾಗೂ ಅಮಿತ್ ಶಾ ಅವರು ಮುಂದೆ ಏನೆಲ್ಲಾ ತಹ ಹೊಸ ಕ್ರಮಗಳನ್ನು ತರುತ್ತಾರೋ ಗೊತ್ತಿಲ್ಲ. ಎಲ್ಲ ಕಡೆಯೂ ಇದೇ ರೀತಿ ಮಾಡುತ್ತಿದ್ದಾರೆ’ ಎಂದರು.