ಅಧಿಕೃತ ಕಾರ್ಯಕ್ರಮಗಳನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವ ಬಿಜೆಪಿ ತಂತ್ರ ವಿಫಲ
ಬೆಂಗಳೂರು: ಕಾಂಗ್ರೆಸ್ ಪ್ರತಿಭಟನೆ ಎಚ್ಚರಿಕೆ ಹಾಗೂ ಸಾರ್ವಜನಿಕರು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಳೂರು ರೋಡ್ ಶೋವನ್ನು ರದ್ದು ಮಾಡಲಾಗಿದೆ.
ಬಿಬಿಎಂಪಿ ಚುನಾವಣೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಗೆ ಪ್ರಧಾನಿ ರೋಡ್ ಶೋ ಮೂಲಕವೇ ಟೇಕಾಫ್ ನೀಡುವ ಕನಸು ಕಂಡಿದ್ದ ರಾಜ್ಯ ಬಿಜೆಪಿ ಘಟಕಕ್ಕೆ ಇದರಿಂದ ನಿರಾಶೆ ಉಂಟು ಮಾಡಿದೆ. ಪ್ರಧಾನಮಂತ್ರಿಗಳ ಸರಕಾರಿ ಕಾರ್ಯಕ್ರ,ಗಳನ್ನೇ ತನ್ನ ಕಾರ್ಯಕ್ರಮಗಳನ್ನಾಗಿ ಮಾಡಿಕೊಳ್ಳುವ ಆ ಪಕ್ಷದ ಪ್ರಯತ್ನಗಳಿಗೆ ತಣ್ಣೀರು ಬಿದ್ದಿದೆ.
ಅಲ್ಲದೆ, ಪಂಜಾಬ್ ಚುನಾವಣೆ ಸಂದರ್ಭದಲ್ಲಿ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿಗಳು ರಸ್ತೆಯ ಮೇಲು ಸೇತುವೆಯ ಮೇಲೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ನಿಮಿಷ ಕಾಲ ಉಳಿಯಬೇಕಾಯಿತು. ಹೀಗಾಗಿ ಪ್ರಧಾನಿ ಭದ್ರತಾ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ರೋಡ್ ಶೋವನ್ನು ರದ್ದು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ರೋಡ್ ಶೋ ರದ್ದುಗೊಂಡಿದೆ. ರಸ್ತೆ ಮಾರ್ಗದ ಬದಲು ವಾಯುಮಾರ್ಗದಲ್ಲೇ ಬಂದು ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಒಂದು ಹೆಚ್ಚುವರಿ ಕಾರ್ಯಕ್ರಮವನ್ನು ಸೇರ್ಪಡೆ ಮಾಡಲಾಗಿದೆ.
ಯಲಹಂಕ ವಾಯುನೆಲೆಯಿಂದ ಕೊಮ್ಮಘಟ್ಟ ಮತ್ತು ಕೊಮ್ಮಘಟ್ಟದಿಂದ ಬೇಸ್ ಕ್ಯಾಂಪಸ್‍ಗೆ ಮೋದಿ ಅವರ ರೋಡ್ ಶೋ ನಡೆಸಬೇಕು ಎಂಬ ರಾಜ್ಯ ಬಿಜೆಪಿ ಆಶಯಕ್ಕೆ ಎಸ್‍ಜಿಪಿ ತಣ್ಣೀರೆರಚಿದೆ. ರೋಡ್ ಶೋ ಪ್ರಸ್ತಾಪವನ್ನು ಪರಿಶೀಲಿಸುವುದಾಗಿ ತಿಳಿಸಿದ್ದ ಎಸ್‍ಜಿಪಿ ಭದ್ರತೆ ಕಾರಣದಿಂದ ಅನುಮತಿ ನೀಡಿಲ್ಲ.
ಈ ಮೊದಲು ಸಿದ್ಧವಾಗಿದ್ದ ಕಾರ್ಯಕ್ರಮ ಪಟ್ಟಿಯಲ್ಲಿ ಐಐಎಸ್‍ಸಿ ಕಾರ್ಯಕ್ರಮ ಇರಲಿಲ್ಲ, ಹೊಸದಾಗಿ ಈ ಕಾರ್ಯಕ್ರಮ ಸೇರ್ಪಡೆಯಾಗಿದೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೊಮ್ಮಘಟ್ಟಕ್ಕೆ ಆಗಮಿಸಲಿದ್ದು, ಅದಕ್ಕಾಗಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ.
ನಂತರ ಹೆಲಿಕಾಪ್ಟರ್ ಮೂಲಕ ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಸ್ಸ್ ಯೂನಿವರ್ಸಿಟಿ (ಬೇಸ್)ಗೆ ತೆರಳಲಿದ್ದು, ಅಲ್ಲಿಯೂ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ.