ಭಕ್ತರಿಗೆ ಸಿಹಿಸುದ್ದಿ
ಮೈಸೂರು: ಕಳೆದ ಎರಡು ವರ್ಷಗಳಿಂದ ಆಷಾಢಮಾಸದಲ್ಲಿ ಶಕ್ತಿದೇವತೆಯನ್ನು ಕಾಣಲಾಗದೆ ಬೇಸರಪಟ್ಟುಕೊಂಡಿದ್ದ ಭಕ್ತರಿಗೆ ಸಿಹಿ ಸುದ್ದಿ.
ಈ ಬಾರಿ ಮೈಸೂರು ಜಿಲ್ಲಾಡಳಿತ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜಾ ಕೈಂಕರ್ಯವನ್ನು ಮಾಮೂಲಿನಂತೆ ನಡೆಸಲು ನಿರ್ಧರಿಸಿರುವುದು ಭಕ್ತರಿಗೆ ಸಂತಸ ತಂದಿದೆ.
ಸರ್ಕಾರಿ ಅತಿಥಿ ಗೃಹದಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಭೆ ನಡೆಸಿ ಈ ಬಾರಿ ಚಾಮುಂಡೇಶ್ವರಿಗೆ ಆಷಾಢ ಮಾಸದ ಶುಕ್ರವಾರಗಳಂದು ಅದ್ಧೂರಿಯಾಗಿ ವಿಶೆಷ ಪೂಜೆ ಸಲ್ಲಿಸಿ ಭಕ್ತಾದಿಗಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕೆಂದು ತಿಳಿಸಿದ್ದಾರೆ.
ಎಲ್ಲಾ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನಡೆಸಬೇಕು. ಭಕ್ತಾದಿಗಳಿಗೆ ತಾಯಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಬೇಕು. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.
ಈ ಕುರಿತು ಜೂ. 25ರಂದು ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ರೂಪು ರೇಷೆ ನಿರ್ಧರಿಸಿ ಭಕ್ತಾದಿಗಳಿಗೆ ಮಾಹಿತಿ ನೀಡುವುದಾಗಿ ಸಚಿವರು ಸಭೆಯ ನಂತರ ಮಾಧ್ಯಮ ಪ್ರತಿ ನಿಧಿಗಳಿಗೆ ತಿಳಿಸಿದರು.
ಪ್ರತಿವರ್ಷದಂತೆ ಈ ಬಾರಿಯೂ ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಚಾಮುಂಡಿಬೆಟ್ಟಕ್ಕೆ ಕರೆದೊಯ್ಯಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಶುಕ್ರವಾರಗಳಂದು ಸಾರ್ವಜನಿಕರಿಗೆ ತಮ್ಮ ವಾಹನಗಳಲ್ಲಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗುವುದು ಎಂದು ಹೇಳಿದರು.
ಜುಲೈ 1, 8, 15 ಹಾಗೂ 22ರಂದು ಆಷಾಢ ಶುಕ್ರವಾರದ ಪೂಜೆ ನಡೆಯಲಿದ್ದು ಜುಲೈ 20ರಂದು ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವ ನೆರವೇರಲಿದೆ.