ಬಾಗೇಪಲ್ಲಿ ನ್ಯಾಷನಲ್ ಕಾಲೇಜ್ʼನಲ್ಲೂ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು
ಬೆಂಗಳೂರು: ಬಸವನಗುಡಿ ಮತ್ತು ಜಯನಗರ ನ್ಯಾಷನಲ್ ಕಾಲೇಜ್ʼನ ವಿಶ್ರಾಂತ ಪ್ರಾಂಶುಪಾಲರಾಗಿದ್ದ ಪ್ರೊ.ಹೆಚ್.ಆರ್.ಕೃಷ್ಣಮೂರ್ತಿ ಅವರು ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಶನಿವಾರ ರಾತ್ರಿ ಅವರು ನಿಧನರಾಗಿದ್ದು, ಭಾನುವಾರ ಸಂಜೆ ಬನಶಂಕರಿ ಚಿತಾಗಾರದಲ್ಲಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಯಿತು.
ಅವರು ಪತ್ನಿ ಕಲ್ಪನಾ ಮೂರ್ತಿ, ಪುತ್ರಿ ಪ್ರಿಯಾಂಕಾ ಮತ್ತು ಅಭಿಷೇಕ್ ಅವರನ್ನು ಅಗಲಿದ್ದಾರೆ. ಸುಮಾರು 36 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಅರ್ಥಶಾಸ್ತ್ರ ಕೃತಿಗಳ ಬರವಣಿಗೆಯಲ್ಲಿ ಹೆಸರಾಗಿದ್ದರು. ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ಅವರು ಬರೆದಿದ್ದಾರೆ.
ಖ್ಯಾತ ಬರಹಗಾರರೂ ಆಗಿದ್ದ ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪಾಲಿಗೆ ಪ್ರೀತಿಯ ‘ಹೆಚ್ಚಾರ್ಕೆʼ ಆಗಿದ್ದರು. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅವರು ರಚನೆ ಮಾಡಿರುವ ಅರ್ಥಶಾಸ್ತ್ರ ಕುರಿತ ಅನೇಕ ಪುಸ್ತಕಗಳನ್ನು ಬೋಧನೆ ಮಾಡಲಾಗುತ್ತಿದೆ.
ಮೂಲತಃ ತೀರ್ಥಹಳ್ಳಿಯವರಾದ ಹೆಚ್ಚಾರ್ಕೆ ಅವರು, ಚಳವಳಿಗಳು ಹಾಗೂ ಕುವೆಂಪು ಪ್ರಭಾವದಲ್ಲಿ ಬೆಳೆದಿದ್ದರು. ತಮ್ಮ ಜೀವಿತಾವಧಿಯುದ್ದಕ್ಕೂ ಅವರು ಎಡಪಂಥೀಯ ವಿಚಾರಧಾರೆಯಲ್ಲೇ ಇದ್ದರಲ್ಲದೆ, ಬಾಗೇಪಲ್ಲಿಯಲ್ಲಿ ಪ್ರಜಾವಾಣಿ & ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ವರದಿಗಾರರಾಗಿದ್ದಾಗಲೂ ಬೋಧನೆ ಹಾಗೂ ಪತ್ರಕರ್ತನ ಹೊಣೆಗಾರಿಕೆಯನ್ನು ಸಮತೋಲಿತವಾಗಿ ನಿಭಾಯಿಸಿದ್ದರು.
ಹೆಚ್ಚಾರ್ಕೆ ಅವರ ನಿಧನಕ್ಕೆ ನ್ಯಾಷನಲ್ ಕಾಲೇಜುಗಳ ಸಿಬ್ಬಂದಿ, ಪ್ರಾಧ್ಯಾಪಕರು ಕಂಬನಿ ಮಿಡಿದಿದ್ದಾರೆ. ಅವರ ಒಡನಾಡಿಗಳೆಲ್ಲರೂ ಭಾರವಾದ ಹೃದಯದಿಂದ ಅವರನ್ನು ಬೀಳ್ಕೊಟ್ಟಿದ್ದಾರೆ.