ಆದರೂ.. ಹೊಂದಾಣಿಕೆ ವೆಚ್ಚದ ಲೆಕ್ಕದ ಸರಕಾರವನ್ನು ನಂಬೋ ಹಾಗಿಲ್ಲ
ಬೆಂಗಳೂರು: ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರಕಾರ ಯಾವುದೇ ಸೂಚನೆ ನೀಡಿಲ್ಲ. ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆ ದರ ಆಧರಿತ ಹೊಂದಾಣಿಕೆ ವೆಚ್ಚದಲ್ಲಿ ಮಾತ್ರ ವ್ಯತ್ಯಾಸವಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರಕಾರ ಮುಂದಾಗಿದೆ ಎಂಬ ಬಗ್ಗೆ ಕೆಲವೆಡೆ ತಪ್ಪು ಸಂದೇಶ ರವಾನೆಯಾಗಿದೆ. ಆದರೆ ರಾಜ್ಯ ಸರಕಾರದ ಮುಂದೆ ಅಂಥ ಯಾವುದೇ ಪ್ರಸ್ತಾಪವಿಲ್ಲ. ವಿದ್ಯುತ್ ದರವನ್ನು ವರ್ಷದಲ್ಲಿ ಒಮ್ಮೆ ಮಾತ್ರ ಪರಿಷ್ಕರಿಸುವುದು ವಾಡಿಕೆಯಾಗಿದೆ. ಹೀಗಾಗಿ ದರ ಹೆಚ್ಚಳದ ವದಂತಿ ಬಗ್ಗೆ ಸಾರ್ವಜನಿಕರು ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ೧೩ ಉಷ್ಣ ವಿದ್ಯುತ್ ಸ್ಥಾವರಗಳಿವೆ. ಇವುಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಕಲ್ಲದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಅಗತ್ಯವಿರುತ್ತದೆ.ಇವುಗಳ ಮಾರುಕಟ್ಟೆ ದರದ ಏರಿಳಿತ ಆಧರಿಸಿ ಎಲ್ಲ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ನಡೆಸುವುದು ನಿರಂತರ ಪ್ರಕ್ರಿಯೆ ಆಗಿರುತ್ತದೆ. ಈ ಸಂಬಂಧ ಎಸ್ಕಾಂಗಳು ಸಲ್ಲಿಸಿದ ಹೊಂದಾಣಿಕೆ ವೆಚ್ಚ ( fuel cost adjustment charges ) ಪ್ರಸ್ತಾಪ ಹಿನ್ನೆಲೆಯಲ್ಲಿ ಕೆಇಆರ್ ಸಿ ಈ ದರ ಪರಿಷ್ಕರಿಸಿದೆ.
ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಕೆಇಆರ್ ಸಿ ವಿವೇಚನಾಧಿಕಾರವಾಗಿದ್ದು ಕಲ್ಲಿದ್ದಲು ದರ ಆಧರಿಸಿ ಈ ಹೊಂದಾಣಿಕೆ ವೆಚ್ಚ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು. ಹೀಗಾಗಿ ಈ ಪ್ರಕ್ರಿಯೆಯನ್ನು ವಾರ್ಷಿಕ ದರ ಪರಿಷ್ಕರಣೆ ಜತೆ ಥಳುಕು ಹಾಕುವ ಅಗತ್ಯವಿಲ್ಲ ಎಂದು ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಬಿಸ್ನೆಸ್ ಕ್ಲಾಸಿನ ಕಾಮಧೇನು: ಹೆಚ್‌ಡಿಕೆ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇದೆ. ಈಗ ಬೆಲೆ ಏರಿಸಿ, ಇನ್ನೇನು ಚುನಾವಣೆ ದಿನಾಂಕ ಹತ್ತಿರದಲ್ಲಿದೆ ಎನ್ನುವಾಗ ದರ ಇಳಿಸುವ ಸ್ಟಂಟ್ ಇದರ ಹಿಂದೆ ಇದೆ. ವೆಚ್ಚ ಹೊಂದಾಣಿಕೆಯ ಹೊಸ ಐಡಿಯಾ ಅಂದರೆ ಇದೇನಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ವಿದ್ಯುತ್ ಉತ್ಪಾದನೆಯೂ ಚೆನ್ನಾಗಿದೆ. ಹೆಚ್ಚುವರಿ ವಿದ್ಯುತ್ ಇದೆ ಎಂದು ಸರ್ಕಾರವೇ ಹೇಳುತ್ತಿದೆ. ಹೀಗಿದ್ದರೂ ದರ ಏರಿಕೆ!! ಇದರ ಹಿಂದಿನ ಹುನ್ನಾರ ಏನು? ಎಂದು ಪ್ರಶ್ನಿಸಿದ್ದಾರೆ.
ಮಾಸಿಕ 100 ಯೂನಿಟ್ ಬಳಸುವ ಗ್ರಾಹಕರು ಹೆಚ್ಚು ಬೆಲೆ ತೆರಬೇಕು. ಅಂದರೆ; ಬಡವರು ಮತ್ತು ಮಧ್ಯಮ ವರ್ಗದ ಜನರು ವಿದ್ಯುತ್ ಬಳಸದೇ ಕತ್ತಲಲ್ಲಿ ಕೊಳೆಯಬೇಕೆ? ಗತಿಶಕ್ತಿ ಯೋಜನೆ ಮೂಲಕ ದೇಶಕ್ಕೆ ಹೊಸ ಗತಿ ಕಾಣಿಸುವುದು ಎಂದರೆ ಇದೇನಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇಂಧನ ಇಲಾಖೆಯ ಅಸಮರ್ಪಕ ನಿರ್ವಹಣೆ ಹಾಗೂ ವಿದ್ಯುತ್ ಸೋರಿಕೆಯನ್ನು ತಡೆಯಲಾಗದ ಅದಕ್ಷತೆ ಬಗ್ಗೆ ಜನಕ್ಕೆ ಗೊತ್ತಿದೆ. ಆ ಹೊರೆಯನ್ನು ಜನರ ಮೇಲೆ ಹೇರಿ ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಲೂಟಿಗೆ ತುತ್ತಾಗಿರುವ ಜನರನ್ನು ಮತ್ತಷ್ಟು ಸುಲಿಗೆ ಮಾಡುವ ಪ್ರಯತ್ನ ಇದಾಗಿದೆ ಎಂದು ಹೆಚ್ ಡಿಕೆ ಟೀಕಿಸಿದ್ದಾರೆ.
ಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ. ಬಲಿಷ್ಟರು, ಬಲ್ಲಿದರ ಆಡಂಬೋಲ. ಬಿಸ್ನೆಸ್ ಕ್ಲಾಸಿನ ಕಾಮಧೇನು. ಬಡವರು & ಮಧ್ಯಮ ವರ್ಗದ ಜನರ ಪಾಲಿಗೆ ರಕ್ತಪಿಪಾಸು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇದೆ. ಈಗ ಬೆಲೆ ಏರಿಸಿ, ಇನ್ನೇನು ಚುನಾವಣೆ ದಿನಾಂಕ ಹತ್ತಿರದಲ್ಲಿದೆ ಎನ್ನುವಾಗ ದರ ಇಳಿಸುವ ಸ್ಟಂಟ್ ಇದರ ಹಿಂದೆ ಇದೆ. ವೆಚ್ಚ ಹೊಂದಾಣಿಕೆಯ ಹೊಸ ಐಡಿಯಾ ಅಂದರೆ ಇದೇನಾ? ಎಂದು ಸರ್ಕಾರವನ್ನು ಕುಟುಕಿದ್ದಾರೆ.
ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು. ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ, ನಿಯಮಿತ ವಿದ್ಯುತ್ ಪೂರೈಕೆ ಮಾಡದ ಸರ್ಕಾರಕ್ಕೆ ದರ ಏರಿಕೆ ಮಾಡುವ ನೈತಿಕ ಹಕ್ಕಿಲ್ಲ. ಒಂದು ವೇಳೆ ಏರಿಕೆ ಮಾಡಿದರೆ ಜನರನ್ನು ಒಗ್ಗೂಡಿಸಿ ಜನಾಂದೋಲನ ಇಳಿಯಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ.