ಸ್ಟಾರ್ ಹೋಟೆಲ್ ಲಾಬಿಯಲ್ಲೇ ಭಕ್ತರ ಸೋಗಿನಲ್ಲಿ ನೆತ್ತರು ಹರಿಸಿದ ಹಂತಕರು
ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಭಕ್ತರ ಸೋಗಿನಲ್ಲಿ ಬಂದು, ಚಾಕುವಿನಿಂದ ಚುಚ್ಚಿ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಸರಳ ವಾಸ್ತು ಸಲಹೆ ನೀಡುವ ಮೂಲಕ ಈ ಗುರೂಜಿ ಹಲವರ ಬಾಳಿಗೆ ಬೆಳಕಾಗಿದ್ದರು. ಚಂದ್ರಶೇಖರ್ ಗುರೂಜಿ ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ ಅವರು ಮನೆಮಾತಾಗಿದ್ದರು.
ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮೀಷನರ್ ಲಾಬೂರಾಮ್ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಗುರೂಜಿ ಅವರನ್ನು ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಸಧ್ಯಕ್ಕೆ ಲಭ್ಯವಾಗಿಲ್ಲ. ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಹೋಟೆಲ್ ನ ರಿಸೆಪ್ಶನ್‌ನಲ್ಲಿಯೇ ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ. ಇಬ್ಬರು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜುಲೈ 2ರಂದು ಹೋಟೆಲ್‌ಗೆ ಆಗಮಿಸಿದ್ದ ಚಂದ್ರಶೇಖರ್ ಗುರೂಜಿ, ಇಂದು ಬೆಳಗ್ಗೆ ಭಕ್ತರಂತೆ ಬಂದ ಇಬ್ಬರು ಹಂತಕರನ್ನು ಭೇಟಿಯಾಗಲು ಗುರೂಜಿ ಬಂದಾಗ ಹತ್ಯೆ ಮಾಡಲಾಗಿದೆ.
ಗುರೂಜಿ ಅವರು ಬುಧವಾರ ಹೋಟೆಲ್ ರೂಮ್ ಖಾಲಿ ಮಾಡಬೇಕಿತ್ತು. ಆದರೆ ದುರದೃಷ್ಟವಶಾತ್ ರಿಶಪ್ಶನ್‌ನಲ್ಲಿ ಕುಳಿತಿದ್ದ ವೇಳೆ ಭಕ್ತರಂತೆ ಬಂದ ದುಷ್ಕರ್ಮಿಗಳು ಕಾಲಿಗೆ ನಮಸ್ಕಾರ ಮಾಡುವಂತೆ ನಟಿಸಿ ಅವರಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.
ತಲ್ಲಣ ಉಂಟು ಮಾಡಿದ ಹತ್ಯೆಯ ದೃಶ್ಯಗಳು
ಇದೇ ವೇಳೆ ಗುರೂಜಿ ಅವರನ್ನು ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಚುಚ್ಚಿ ಕೊಲ್ಲುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಎಲ್ಲ ಕೋನಗಳಿಂದ ಸೆರೆಯಾಗಿವೆ. ಅದೇ ದೃಶ್ಯಗಳು ರಾಜ್ಯದ ಕೆಲ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಯಿತು. ಆ ದೃಶ್ಯಗಳು ರಾಜ್ಯದಲ್ಲಿ ತೀವ್ರ ತಲ್ಲಣ ಉಂಟು ಮಾಡಿವೆ.
ಸರಳ ಜೀವನ, ಸರಳ ವಾಸ್ತು, ಸರಳ ಅಕಾಡೆಮಿ, ಮನೆಗಾಗಿ ವಾಸ್ತು, ವಾಸ್ತು ಪರಿಹಾರದ ಮೂಲಕ ಅವರು ಕರ್ನಾಟಕದ ಮನೆಮಾತಾಗಿದ್ದರು. ಈವರೆಗೂ 2 ಸಾವಿರಕ್ಕೂ ಅಧಿಕ ಸೆಮಿನಾರ್‌ಗಳಲ್ಲಿ ಮಾತನಾಡಿರುವ ಚಂದ್ರಶೇಖರ್, ಈವರೆಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 16 ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ.
ಸಿವಿಲ್ ಎಂಜಿನಿಯರಿಂಗ್ ಜೊತೆಗೆ ಕಾಸ್ಮಿಕ್ ಆರ್ಕಿಟೆಕ್ಚರ್ ನಲ್ಲಿ ಡಾಕ್ಟರೇಟ್ ಪದವಿಯನ್ನೂ ಅವರು ಸಂಪಾದಿಸಿದ್ದರು. ಸಿಜಿ ಪರಿವಾರ್ ಗ್ಲೋಬಲ್ ವಿಷನ್‌ನ ಚೇರ್ಮನ್ ಕೂಡ ಆಗಿದ್ದ ಚಂದ್ರಶೇಖರ್ ಗುರೂಜಿ 2016ರಲ್ಲಿ ಸರಳ ಜೀವನ ಎನ್ನುವ ಇನ್ಫೋ ಎಂಟರ್‌ಟೇನ್‌ಮೆಂಟ್ ಟಿವಿ ಚಾನೆಲ್ ಅನ್ನೂ ಆರಂಭ ಮಾಡಿದ್ದರು.