ಚಿಕ್ಕಬಳ್ಳಾಪುರ ವಿಭಾಗ ತಡೆರಹಿತ ಬಸ್ಸುಗಳಲ್ಲಿ ವಿಕಲಚೇತನಿರಿಗೆ ಪ್ರವೇಶವಿಲ್ಲ; ಸಾರಿಗೆ ಸಚಿವರಿಗೆ ದೂರು ನೀಡಲು ಮುಂದಾದ ನೊಂದ ವಿಕಲಚೇತನರು; ಮುಖ್ಯಮಂತ್ರಿಗೆ ದೂರು; ಕ್ರಮದ ಭರವಸೆ
By Siddhu Devanahalli
ದೇವನಹಳ್ಳಿ: ವಿಕಲಚೇತನರಿಗೆ ರಾಜ್ಯ ಸರಕಾರ ವಿವಿಧ ಕಲ್ಯಾಣ ಸೌಲಭ್ಯಗಳ ಅಡಿಯಲ್ಲಿ ಉಚಿತ ಬಸ್ ಪಾಸ್ ನೀಡಿದ್ದರೂ ಕೆಎಸ್’ಆರ್’ಟಿಸಿ ಚಾಲಕ, ನಿರ್ವಾಹಕರು ನಿರ್ದಯವಾಗಿ ವಿಕಲಚೇತನರನ್ನು ಬಸ್ಸುಗಳಿಂದ ಹೊರದಬ್ಬುತ್ತಿರುವ ಅಮಾನುಷ ಘಟನೆಗಳು ನಡೆಯುತ್ತಿವೆ.
ಸಾರಿಗೆ ಬಸ್ಸುಗಳಲ್ಲಿ ವಿಕಲಚೇತನರ ಬಸ್ ಪಾಸ್ʼಗಳಿಗೆ ಅವಕಾಶ ಇದ್ದರೂ, ಅಂಥ ಪಾಸ್ʼಗಳಿಗೆ ಅವಕಾಶ ಇಲ್ಲ ಎನ್ನುವ ಕಾನೂನುಬಾಹಿರ ನೆಪವೊಡ್ಡಿ ದಾರಿ ಮಧ್ಯೆಯೇ ವಿಕಲಚೇತನರನ್ನು ಬಸ್ಸುಗಳಿಂದ ಹೊರದಬ್ಬಲಾಗುತ್ತಿದೆ. ಇಂಥ ಹಲವಾರು ಘಟನೆಗಳು ನಡೆದಿದ್ದು, ಆ ಬಗ್ಗೆ ಸಿಕೆನ್ಯೂಸ್ ನೌ ವೆಬ್ʼತಾಣಕ್ಕೆ ನಿಖರ ಮಾಹಿತಿ ಸಿಕ್ಕಿದೆ.
ರಾಜ್ಯ ಸರಕಾರದ ಹಲವು ಕಲ್ಯಾಣ ಯೋಜನೆಗಳ್ಳಲ್ಲಿ ಮುಖ್ಯವಾಗಿ ವಿಕಲ ಚೇತನರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಅವರ ಮನೋಸ್ಥೈರ್ಯ ಹೆಚ್ಚಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸಿ ಪಿಂಚಣಿ ಮತ್ತು ಅವರು ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಓಡಾಡಲು ಉಚಿತ ಬಸ್ ಪಾಸ್ ಸೌಲಭ್ಯ ನೀಡಿ ಸರಕಾರ ಅವಕಾಶ ನೀಡಿದೆ. ಆದರೆ, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನುವ ಹಾಗೆ ಆಗಿಬಿಟ್ಟಿದೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಎಸ್’ಆರ್’ಟಿಸಿ ವಿಭಾಗದ ನಿರ್ಲಕ್ಷ್ಯ ನೀತಿ.
ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಚಾಲಕ, ನಿರ್ವಾಹಕರ ಅಸಡ್ಡೆಯಿಂದ ತಮಗೆ ನ್ಯಾಯಯುತ ಹಕ್ಕಿನಿಂದ ವಂಚಿತರಾಗಿ ನಲುಗುತ್ತಿರುವವರು ವಿಕಲಚೇತನರು ಮಾತ್ರ. ಸಾರಿಗೆ ಇಲಾಖೆಯ ಅಂಧಾ ದರ್ಬಾರ್ʼಗೆ ಅನೇಕ ವಿಕಲಚೇತನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಏನಿದು ಯೋಜನೆ ಮತ್ತು ಸಮಸ್ಯೆ?
ಸರಕಾರ ರೂಪಿಸಿರುವ ವಿಕಲಚೇತನ ಬಸ್ ಪಾಸ್ ಯೋಜನೆ ಪ್ರಕಾರ ನೋಂದಾಯಿತ ಅರ್ಹ ವಿಕಲಚೇತನರು ವಾಸ ಇರುವ ಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ 660 ರೂ. ಮೌಲ್ಯದ ವಾರ್ಷಿಕ ಅವಧಿಯ ಪಾಸ್ ಪಡೆದು ಕೆಎಸ್‌ಆರ್‌ಟಿಸಿಯ ನಗರ, ಹೊರವಲಯ, ಸಾಮಾನ್ಯ, ವೇಗದೂತ ಸಾರಿಗೆ ಬಸ್ಸುಗಳಲ್ಲಿ ಸಂಚಾರ ಮಾಡಬಹುದು. ಇದು ಬೆಂಗಳೂರಿನ ಬಿಎಂಟಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮುಕ್ತವಾಗಿ ಪ್ರಯಾಣಿಸಬಹುದು.
ಅಷ್ಟೇ ಅಲ್ಲ, ವಿಕಲಚೇತನರ ಕೋರಿಕೆಯ ಮೇಲೆ ಅವರು ಕೇಳುವ ಸ್ಥಳಗಳಲ್ಲಿ ಬಸ್ಸನ್ನು ಕಡ್ಡಾಯವಾಗಿ ನಿಲುಗಡೆ ಮಾಡಬೇಕು, ಅವರನ್ನು ಸುರಕ್ಷಿತವಾಗಿ ಇಳಿಸಬೇಕು ಎಂಬ ನಿಯಮವೂ ಇದೆ. ಬಸ್ಸಿನಲ್ಲಿ ವಿಕಲಚೇತನರಿಗೆ ಇರುವ ಆಸನಗಳನ್ನು ನಿರ್ವಾಹಕರು ತೆರವುಗೊಳಿಸಿ ಕೊಡಬೇಕು.
ನಿರ್ದಯಿ ನಡವಳಿಕೆ
ಚಿಕ್ಕಬಳ್ಳಾಪುರದ ಕೆಎಸ್‌ಆರ್‌ಟಿಸಿ ಘಟಕವು ವಿಕಲಚೇನರಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿದೆ. ʼತಡೆರಹಿತʼ ಎಂಬ ನಾಮಫಲಕ ಹಾಕಿಕೊಂಡ ಬಸ್ಸುಗಳು ಹಾಗೂ ಏಕಗವಾಕ್ಷಿ ಸೇವೆ (ನಿರ್ವಾಹಕ ರಹಿತ ಅಥವಾ ಡ್ರೈವರ್ ಕಂ ಕಂಡಕ್ಟರ್) ಒಳಗೊಂಡ ಬಸ್ಸಿಗೆ ವಿಕಲಚೇತನರನ್ನು ಹತ್ತಲು ಬಿಡುತ್ತಿಲ್ಲ. ಒಂದು ಅವರು ಹತ್ತಿಕೊಂಡರೂ ನಡುದಾರಿಯಲ್ಲೇ ಇಳಿಸಲಾಗುತ್ತಿದೆ. ಇಂಥ ದೋರಣೆಯಿಂದ ವಿಕಲಚೇತನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ರಾತ್ರಿ ವೇಳೆಯಲ್ಲೂ ನಿಷ್ಕಾರುಣ್ಯ ನಡೆ
ಭಾನುವಾರ ರಾತ್ರಿ 9 ಗಂಟೆಗೆ ಕೆಲಸ ಮುಗಿಸಿ ಹೆಬ್ಬಾಳದ ನಿಲ್ದಾಣಕ್ಕೆ ಬಂದ ವಿಕಲಚೇತನ ವ್ಯಕ್ತಿಯೊಬ್ಬರನ್ನು ಚಿಕ್ಕಬಳ್ಳಾಪುರ ಘಟಕದ ಬಸ್ಸು ನಿರ್ವಾಹಕ ಕಂ ಚಾಲಕ ಹತ್ತಿಸಿಕೊಳ್ಳಲು ನಿರಾಕರಿಸಿದ್ದಾನೆ. ಇದು ತಡೆರಹಿತ ಬಸ್ಸು ಎಂದು ಚಿಕ್ಕಬಳ್ಳಾಪುರದ ಘಟಕದ ಬಸ್ಸಿನ ಚಾಲಕ-ನಿರ್ವಾಹಕ ಹೇಳಿದರೆ, ಅದೇ ಮಾರ್ಗದಲ್ಲಿ ಸಂಚರಿಸುವ ವಾಯುವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸುಗಳ ಚಾಲಕ ಅಥವಾ ನಿರ್ವಾಹಕರು ವಿಕಲಚೇನ ವ್ಯಕ್ತಿಗೆ ಪಾಸ್ ಇದೆ ಎನ್ನುವ ಕಾರಣಕ್ಕೆ ಬಸ್ಸು ಹತ್ತಿಸಿಕೊಳ್ಳಲು ನಿರಾಕರಿಸಿದ್ದಾರೆ. ಕೆಲವೊಮ್ಮೆ ಇವರನ್ನು ಹತ್ತಿಸಿಕೊಂಡು ಸ್ವಲ್ಪ ದೂರ ಕ್ರಮಿಸಿದ ಮೇಲೆ ಪಾಸ್ ನಡೆಯುವುದಿಲ್ಲ ಎಂದು ಕಾರಣ ಕೊಟ್ಟ ಹೆದ್ದಾರಿ ಮಧ್ಯೆಯೇ ನಿರ್ದಯವಾಗಿ ಇಳಿಸಿ ಹೋಗಿರುವ ಘಟನೆಗಳು ಕೂಡ ನಡೆದಿವೆ.
ವಿಕಚೇತನರ ಪಾಸ್ ಪ್ರತಿಯ ಹಿಂದೆಯೇ ಆ ಪಾಸ್ ಬಳಕೆಯ ಬಗ್ಗೆ ನಿರ್ದಿಷ್ಟವಾಗಿ ಮಾರ್ಗಸೂಚಿಗಳನ್ನು ಬರೆಯಲಾಗಿದ್ದರೂ ಅವುಗಳನ್ನು ಓದಿಕೊಳ್ಳುವ ವ್ಯವಧಾನ ನಿರ್ವಾಹಕರಿಗೆ ಇಲ್ಲ. ಇನ್ನು ಹೆಚ್ಚು ಪ್ರಶ್ನೆ ಮಾಡಿದರೆ, “ನಮಗೆ ಗೊತ್ತಿಲ್ಲ. ವಿಕಲಚೇತನರ ಪಾಸ್ ಅನ್ನು ಈ ಬಸ್ಸಿನಲ್ಲಿ ಅಂಗೀಕರಿಸುವುದಿಲ್ಲ. ನೀವು ಬೇಕಾದರೆ ಡಿಪೋ ಮ್ಯಾನೇಜರ್ ಅವರಿಗೆ ದೂರು ಕೊಡಿ” ಎಂದು ಹೊರಟೇಬಿಡುತ್ತಾರೆ.
ಅರ್ಹ ಪಾಸ್ ಇರುವ ವಿಕಲಚೇತನರೊಬ್ಬರು ಚಿಕ್ಕಬಳ್ಳಾಪುರ ಡಿಪೋದ ತಡೆರಹಿತ ಸಾರಿಗೆ ಬಸ್ಸು ಹತ್ತಲು ಯತ್ನಿಸಿದಾಗ ನಿರ್ದಯವಾಗಿ ವರ್ತಿಸುವ ಚಾಲಕ ಕಂ ನಿರ್ವಾಹಕ (ಕೆಳಗಿ ಟ್ವಿಟ್ಟರ್ ವಿಡಿಯೋ ಹಾಕಲಾಗಿದೆ)
ಅಲ್ಲಿಗೂ ತನ್ನ ಭಗೀರಥ ಪ್ರಯತ್ನ ಬಿಡದ ಕೆಲ ವಿಕಲಚೇತನರು ಚಿಕ್ಕಬಳ್ಳಾಪುರ ಘಟಕದ ಡಿಪೋ ಮ್ಯಾನೇಜರ್ ಮಲ್ಲಪ್ಪ ಎಂಬುವವರಿಗೆ ಕರೆ ಮಾಡಿ ದೂರು ನೀಡಿದರೆ, ಅವರಿಂದಲೂ ಹಾರಿಕೆಯ ಉತ್ತರ ಹಾಗೂ ತಡೆರಹಿತ ಬಸ್ಸುಗಳಲ್ಲಿ ವಿಕಲಚೇತನರ ಪಾಸ್ ನಡೆಯುವುದಿಲ್ಲ ಎನ್ನುವ ಮಾತು. ಸ್ವಲ್ಪ ಸಮಯದ ನಂತರ ಅವರೇ ಮೊಬೈಲ್ ಕರೆ ಮಾಡಿ; “ನಿಮ್ಮ ಪಾಸ್ʼಗೆ ತಡೆರಹಿತ ಬಸ್ಸುಗಳಲ್ಲಿ ಅನುಮತಿ ಇದೆ. ನೀವು ಪ್ರಯಾಣಿಸಿ” ಎಂದು ಹೇಳುತ್ತಾರೆ. ಇದಾದ ಮೇಲೆ ಮರುದಿನವೂ ತಡೆರಹಿತ ಬಸ್ಸುಗಳ ದೋರಣೆ ಬದಲಾಗಿರುವುದಿಲ್ಲ. ವಿಕಲಚೇತನರಿಗೆ ಕಿರುಕುಳ ನೀಡುವುದೂ ತಪ್ಪುವುದಿಲ್ಲ.
ಸಾರಿಗೆ ಸಚಿವರಿಗೆ ಮೊರೆ
ಸರಕಾರಿ ಬಸ್ಸುಗಳ ಡಿಪೋ ಮ್ಯಾನೇಜರುಗಳು, ಚಾಲಕರು ಮತ್ತು ನಿರ್ವಾಹಕರ ಅಸಡ್ಡೆಯಿಂದ ಬೇಸೆತ್ತ ವಿಕಲಚೇತನರು ಈಗ ಸಾರಿಗೆ ಸಚಿವರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಜತೆಗೆ, ವಿಕಲಚೇತನರೊಬ್ಬರು ಸಾರಿಗೆ ಇಲಾಖೆಯ ಟ್ವಿಟ್ಟರ್ ಖಾತೆಗೆ ಟ್ಯಾಗ್ ದೂರು ನೀಡಿದ್ದು, ಅಲ್ಲಿ ಇವರಿಗೆ ಸಮಸ್ಯೆ ಪರಿಹಾರದ ಉತ್ತರ ಸಿಕ್ಕಿದೆ. “ನಿಮ್ಮ ದೂರನ್ನು ದಾಖಲಿಸಲಾಗಿದೆ ಮತ್ತು ಪರಿಶೀಲನೆಗಾಗಿ ಸಂಬಂಧಿಸಿದ ವಿಭಾಗಕ್ಕೆ ಕಳುಹಿಸಲಾಗಿದೆ” ಎಂದು ಅವರಿಗೆ ಉತ್ತರಿಸಲಾಗಿದೆ. ಇನ್ನೊಂದೆಡೆ ಅನೇಕ ವಿಕಲಚೇತನರು ಒಂದೆರಡು ದಿನಗಳಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಭೇಟಿ ಮಾಡಿ ದೂರು ನೀಡಲು ನಿರ್ಧರಿಸಿದ್ದಾರೆ.
Comments 1