ಬಿಜೆಪಿ ಮೇಲೆ ಗಂಭೀರ ಆರೋಪ ಮಾಡಿದ ಯಶವಂತ ಸಿನ್ಹಾ
ಭೋಪಾಲ್: ರಾಷ್ಟ್ರಪತಿ ಚುನಾವಣೆಯ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಶಾಸಕರನ್ನು ಖರೀದಿ ಮಾಡುತ್ತಿದೆ ಎಂದು ನೇರವಾಗಿ ಆರೋಪ ಮಾಡಿರುವ ಅವರು, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಚುನಾವಣೆಯಲ್ಲಿ ಕೂಡ ಬಿಜೆಪಿ ಆಪರೇಶನ್ ಕಮಲ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.
ರಾಜ್ಯಗಳಲ್ಲಿ ಆಪರೇಶನ್ ಕಮಲ ಮಾಡಿ ಚುನಾಯಿತ ಸರಕಾರಗಳನ್ನು ಉರುಳಿಸಿ ಅಧಿಕಾರವನ್ನು ಕಬ್ಜ ಮಾಡುತ್ತಿರುವ ಬಿಜೆಪಿ, ಬಿಜೆಪಿಯೇತರ ಶಾಸಕರಿಗೆ ದೊಡ್ಡ ಮೊತ್ತದ ಹಣ ನೀಡುತ್ತಿದೆ ಎಂದು ದೂರಿದ್ದಾರೆ.ಮಧ್ಯಪ್ರದೇಶದ ಭೋಪಾಲ್ ನಗರಕ್ಕೆ ಭೇಟಿ ನೀಡಿರುವ ಅವರು, ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅವರು ಹೇಳಿದ್ದಿಷ್ಟು;”ಇವತ್ತು ಬೆಳಗ್ಗೆ ಮಧ್ಯಪ್ರದೇಶದ ಪ್ರಮುಖ ಪತ್ರಿಕೆಯಲ್ಲಿ ಒಂದು ಸುದ್ದಿಯನ್ನು ಓದಿದೆ. ‘ಬಿಜೆಪಿ ಕಾಂಗ್ರೆಸ್‌ನ 26 ಬುಡಕಟ್ಟು ಶಾಸಕರ ಮೇಲೆ ಕಣ್ಣಿಟ್ಟಿದೆ, ಅಡ್ಡ ಮತದಾನಕ್ಕೆ ಸಿದ್ಧತೆ’ ಎಂಬ ಶೀರ್ಷಿಕೆಯ ಒಂದು ಸುದ್ದಿ ಪ್ರಕಟವಾಗಿತ್ತು. ನಾನು ಅತ್ಯಂತ ಸಂಕಟದಿಂದ ಈ ಸುದ್ದಿಯನ್ನು ಓದಿದ್ದೇನೆ.”
ಯಶವಂತ ಸಿನ್ಹಾ ಅವರ ಆರೋಪ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನಡೆಸುತ್ತಿರುವ ರಾಜಕೀಯದ ಮೇಲೆ ಬೆಳಕು ಚೆಲ್ಲಿವೆ ಎಂದು ಕೆಲ ಮಾಧ್ಯಮಗಳು ಕಳವಳ ವ್ಯಕ್ತಪಡಿಸಿವೆ. ಅಲ್ಲದೆ, ಈ ತಿಂಗಳ 18ರಂದು ನಡೆಯಲಿರುವ ಈ ಚುನಾವಣೆ ಬಗ್ಗೆ ನೂರೆಂಟು ಪ್ರಶ್ನೆಗಳು ಏಳುವಂತೆ ಮಾಡಿದೆ.