ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ
by ನವೀನ್ ರಾಜ್ ಕನ್ನಡಿಗ ಗುಡಿಬಂಡೆ
ಗುಡಿಬಂಡೆ: ಪರಿಸರ ಪ್ರೇಮ, ಜನಸ್ನೇಹಿ, ಹಸಿರು ಪೊಲೀಸ್ ಠಾಣೆ ಎಂದೇ ಹೆಸರಾದ ಗುಡಿಬಂಡೆ ಪೊಲೀಸ್ ಠಾಣೆಗೆ ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಎಸ್’ಪಿ ನಾಗೇಶ್ ಅವರು ಭೇಟಿ ನೀಡಿದ್ದರು.
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಾಲ್ಕೈದು ದಿನಗಳಲ್ಲೇ ತಾಲೂಕುಗಳಿಗೆ ಭೇಟಿ ನೀಡುತ್ತಿರುವ ಅವರು, ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಪ್ರಮಾಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ, ಠಾಣೆಗಳಲ್ಲಿ ಇರುವ ಸಿಬ್ಬಂದಿ, ಮೂಲಸೌಕರ್ಯ, ಪ್ರಕರಣಗಳ ಮಾಹಿತಿ, ರೌಡಿ ಶೀಟರ್ʼಗಳ ವಿವರ ಇತ್ಯಾದಿಗಳನ್ನು ಎಸ್ ಪಿ ಅವರು ಪಡೆದುಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;
ಚಿಕ್ಕಬಳ್ಳಾಪುರ ಎಸ್’ಪಿಯಾಗಿ ಬಂದ ಬಳಿಕ ಪ್ರಥಮ ಬಾರಿಗೆ ಗುಡಿಬಂಡೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದೇನೆ. ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವಂಥ ಎಲ್ಲಾ ಗ್ರಾಮಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಭೂ ವ್ಯಾಜ್ಯಗಳನ್ನು ನಿರ್ವಹಿಸುವ ಬಗ್ಗೆಯೂ ಠಾಣಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದೇನೆ.
ಜನರು ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡಬೇಕು. ಕಾನೂನು ಉಲ್ಲಂಘನೆ ಮಾಡುವವರಿಗೆ ಶಾಸ್ತಿ ತಪ್ಪಿದ್ದಲ್ಲ. ಶಾಂತಿ ಸುವ್ಯವಸ್ಥೆಗೆ ಭಂಗ ತರುವವರನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಗುಡಿಬಂಡೆ ತಾಲೂಕಿನ ಠಾಣೆಯಲ್ಲಿ ದಾಖಲಾಗಿರುವ ಪ್ರಮುಖ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಪ್ರಮುಖವಾಗಿ ಪೊಲೀಸರ ಕುಂದುಕೊರತೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದಾಗ ಅವರೊಂದಿಗೆ ಸೌಜನ್ಯದಿಂದ ನಡೆದುಕೊಂಡು ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದೇನೆ.
ಎಸ್ ಪಿ ಅವರು ಭೇಟಿ ನೀಡಿದಾಗ ಗುಡಿಬಂಡೆ ಠಾಣೆಯ ಇನಸ್ಪೆಕ್ಟರ್ ಲಿಂಗರಾಜು ಹಾಗೂ ಸಿಬ್ಬಂದಿ ಹಾಜರಿದ್ದರು.