ಪತ್ರಿಕಾ ಮತ್ತು ನೋಂದಣಿ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ನಿರ್ಧಾರ
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನಿಯತಕಾಲಿಕೆಗಳ ಪತ್ರಿಕಾ ಮತ್ತು ನೋಂದಣಿ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
155 ವರ್ಷಗಳಷ್ಟು ಹಳೆಯದಾದ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಫ್ ಬುಕ್ಸ್ ಆಕ್ಟ್ ಅನ್ನು ಸರಳೀಕೃತ ಆವೃತ್ತಿಯೊಂದಿಗೆ ಬದಲಿಸಲು ಕೇಂದ್ರ ಆಸಕ್ತಿ ಹೊಂದಿದೆ.
ವಿವಿಧ ನಿಬಂಧನೆಗಳನ್ನು ಅಪರಾಧವಲ್ಲ ಎಂದು ಘೋಷಿಸುವ ಮತ್ತು ಡಿಜಿಟಲ್ ಮಾಧ್ಯಮವನ್ನು ಮುಖ್ಯವಾಹಿನಿಯಲ್ಲಿ ಗುರುತಿಸುವ ಮಸೂದೆಯನ್ನು ಪರಿಚಯಿಸಲಾಗುತ್ತಿದೆ.
ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನಿಯತಕಾಲಿಕೆಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ- 2022 ಅನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಮ – ಸಣ್ಣ ಪ್ರಕಾಶಕರ ಹಿತದೃಷ್ಟಿಯಿಂದ ಅಸ್ತಿತ್ವದಲ್ಲಿರುವ ಕಾಯಿದೆಯ ಕಾರ್ಯವಿಧಾನಗಳನ್ನು ಸರಳವಾಗಿಸಲು ಮತ್ತು ಪತ್ರಿಕಾ ಮೌಲ್ಯಗಳನ್ನು ಎತ್ತಿಹಿಡಿಯಲು ತಿದ್ದುಪಡಿ ಸಹಾಯವಾಗಲಿದೆ.
ಪಿ ಆರ್ ಬಿ ಕಾಯಿದೆ ಪ್ರಕಾರ ಪತ್ರಿಕೆ ಅಥವಾ ನಿಯತಕಾಲಿಕೆಗಳಲ್ಲಿ ಪ್ರಿಂಟರ್ಸ್ ಹೆಸರನ್ನು ಮುದ್ರಿಸದಿದ್ದಲ್ಲಿ ಅಥವಾ ಪ್ರಿಂಟಿಂಗ್ ಪ್ರೆಸ್‌ಗಳ ಕಾರ್ಯಾಚರಣೆ ಬಗ್ಗೆ ಮ್ಯಾಜಿಸ್ಟ್ರೇಟ್ ಮುಂದೆ ಘೋಷಣೆ ಮಾಡದಿದ್ದರೆ ಪ್ರಕಾಶಕರಿಗೆ ದಂಡ ವಿಧಿಸಲು ಅವಕಾಶಗಳಿತ್ತು.
ಪ್ರಸ್ತಾವಿತ ಕಾಯ್ದೆಯಲ್ಲಿ ಆ ನಿಬಂಧನೆಯನ್ನು ಸರಳೀಕರಿಸಲಾಗಿದೆ. ಜೊತೆಗೆ ಡಿಜಿಟಲ್ ಮಾಧ್ಯಮವನ್ನು ಪ್ರೆಸ್ ಮತ್ತು ಮಾಧ್ಯಮ ವ್ಯಾಪ್ತಿಗೆ ತರಲಾಗುತ್ತಿದೆ.
2019 ರ ಕರಡು ಮಸೂದೆಯ ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿ ಎಂದು ವ್ಯಾಖ್ಯಾನಿಸಿತ್ತು.
ಇಂಟರ್ನೆಟ್, ಕಂಪ್ಯೂಟರ್, ಮೊಬೈಲ್ ನೆಟ್ ವರ್ಕ್ ಗಳ ಮೂಲಕ ಪ್ರಸಾರ ಮಾಡಬಹುದಾದ ಅಕ್ಷರ,ಆಡಿಯೋ, ವಿಡಿಯೋ ಮತ್ತು ಗ್ರಾಫಿಕ್ಸ್ ಅನ್ನು ಒಳಗೊಂಡಿರುವ ಡಿಜಿಟೈಸ್ಡ್ ಫಾರ್ಮ್ಯಾಟ್‌ನ ಪ್ರಚಾರವನ್ನು ಸುದ್ದಿ ಎಂದು ವ್ಯಾಖ್ಯಾನಿಸಲಾಗಿದೆ.
ಪತ್ರಿಕೆಗಳಲ್ಲಿ ಸರ್ಕಾರಿ ಜಾಹಿರಾತುಗಳನ್ನು ನೀಡುವ ಮಾನದಂಡಗಳು ಅಥವಾ ಷರತ್ತುಗಳಿಗೆ ಸೂಕ್ತ ನಿಯಮಗಳನ್ನು ರೂಪಿಸಲು ಮತ್ತು ಅವುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾಲನೆ ಮಾಡಲು ನೂತನ ಮಸೂದೆಯಲ್ಲಿ ಅವಕಾಶಗಳಿವೆ.
ಇ – ಪೇಪರ್ ಗಳ ನೋಂದಣಿಯ ಸರಳ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.