ಯುವಕನೊಬ್ಬ ಗುಡಿಬಂಡೆ ಪೊಲೀಸರ ವಶಕ್ಕೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡಿದ್ದ ಸಭೆಯಲ್ಲಿ ಚಾಕು ಹೊಂದಿದ್ದ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ʼಉಜ್ವಲ ಭಾರತ ಉಜ್ವಲ ಭವಿಷ್ಯʼ ಕಾರ್ಯಕ್ರಮದಲ್ಲಿ ಸಚಿವ ಡಾ.ಸುಧಾಕರ್ ಭಾಗವಹಿಸಿದ್ದರು. ಸಚಿವರು ಇನ್ನೇನು ಆ ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದಾಗ ಗಂಗರಾಜು ಎಂಬ ಯುವಕ ಚಾಕು ಹೊಂದಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಸಚಿವರು ಸಭೆ ಮುಗಿದ ನಂತರ ಸಾರ್ವಜನಿಕರ ಜತೆ ಮಾತನಾಡುತ್ತಿದ್ದಾಗ ಪೊಲೀಸರು ಭದ್ರತೆ ದೃಷ್ಟಿಯಿಂದ ಜನರನ್ನು ಹಿಂದಕ್ಕೆ ತಳ್ಳುತ್ತಿದ್ದರು. ಆ ವೇಳೆ, ಪೊಲೀಸ್ ಸಿಬ್ಬಂದಿ ಕರಿಬಾಬು ಅವರ ಕೈ ಗಂಗರಾಜು ಹೊಟ್ಟೆಗೆ ತಗುಲಿದಾಗ ಆತನ ಬಳಿ ಚಾಕು ಇರುವುದು ಪತ್ತೆಯಾಗಿದೆ.
ಗಂಗರಾಜು
ತಕ್ಷಣ ಚಾಕು ಹೊಂದಿದ್ದ ಆ ಯುವಕನನ್ನು ಗುಡಿಬಂಡೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಸಚಿವರು ಕಾರು ಹತ್ತಿ ಬೆಂಗಳೂರಿನತ್ತ ಹೊರಟಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಘಟನೆ ಸ್ಥಳದಲ್ಲಿದ್ದವರಿಗೆ ಕೊಂಚ ಆತಂಕ ಆಗುವಂತೆ ಮಾಡಿತು.
ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊಲೀಸರು ಆ ಯುವಕನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಅಲ್ಲದೆ, ಸಚಿವರ ವಿರುದ್ಧ ಯುವಕನ ಸಂಬಂಧ ಹಾಗೂ ಸಚಿವರ ಬಗ್ಗೆ ಏನಾದರೂ ಆತ ದ್ವೇಷ ಹೊಂದಿದ್ದಾನೆಯೇ ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ಅಂಶಗಳ ಸುತ್ತ ಅನುಮಾನದ ಹುತ್ತ
ಇನ್ನೊಂದೆಡೆ, ಪೇರೆಸಂದ್ರದ ಅರೂರು ಬಳಿ ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗುತ್ತಿದೆ. ಚಿಕ್ಕಬಳ್ಳಾಪುರ ಪಟ್ಟಣಕ್ಕೆ ಅತಿ ಸಮೀಪದಲ್ಲೇ ಕಾರ್ಯಗತವಾಗಬೇಕಿದ್ದ ಈ ಯೋಜನೆ ಅರೂರಿಗೆ ಶಿಫ್ಟ್ ಆದ ಮೇಲೆ ಪೇರೆಸಂದ್ರ ಸುತ್ತಮುತ್ತ ಹಾಗೂ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಉದ್ದಗಲಕ್ಕೂ ಭೂಮಿಗೆ ಬಂಗಾರಕ್ಕಿಂತ ಹೆಚ್ಚು ಬೆಲೆ ಬಂದಿದೆ. ಬೀಚಗಾನಹಳ್ಳಿ, ಬೀಚಗಾನಹಳ್ಳಿ ಕ್ರಾಸ್ ಸೇರಿದಂತೆ ಹೆದ್ದಾರಿಗೆ ಹೊಂದಿಕೊಂಡಿರುವ ವರಲಕೊಂಡೆ, ಚೆಂಡೂರು, ಪರಗೋಡು, ಬಾಗೆಪಲ್ಲಿಯ ಟಿಬಿ ಕ್ರಾಸ್ ಭಾಗಗಳಲ್ಲಿ ಖರೀದಿಗೆ ಭೂಮಿಯೇ ಸಿಗದ ಸ್ಥಿತಿ ಇದೆ.
ಯುವಕನ ಚಾಕು ಪತ್ತೆ ಹಿಂದೆ ಇಂಥ ಕಾರಣಗಳೇನಾದರೂ ಇವೆಯಾ? ಎನ್ನುವ ಅನುಮಾನವೂ ಇದೆ. ಅಲ್ಲದೆ, ಯುವಕ ಸಚಿವರನ್ನು ಟಾರ್ಗೆಟ್ ಮಾಡಿದ್ದನಾ? ಅಥವಾ ಆ ಸಭೆಯಲ್ಲಿ ಭಾಗಿಯಾಗಿದ್ದ ಇನ್ನಾರನ್ನೋ ಗುರಿ ಮಾಡಿಕೊಂಡಿದ್ದನಾ? ಅಥವಾ ಸುಖಾಸುಮ್ಮನೆ ಚಾಕು ಇಟ್ಟುಕೊಂಡಿದ್ದನಾ? ಎನ್ನುವುದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.
ಇನ್ನೊಂದು ಮೂಲ ಹೇಳುವ ಪ್ರಕಾರ, ಆ ಯುವಕ ತನ್ನ ಊರಿನಲ್ಲಿ ಯಾರೊಂದಿಗೋ ಗಲಾಟೆ ಮಾಡಿಕೊಂಡಿದ್ದ. ಸುರಕ್ಷತೆಗೆ ಇರಲಿ ಎಂದು ಚಾಕು ಇಟ್ಟುಕೊಂಡಿರಬಹುದು ಎಂದೂ ಹೇಳಲಾಗುತ್ತಿದೆ. ಆದರೆ, ಘಟನೆಯ ಬಗ್ಗೆ ಪೊಲೀಸರು ಈವರೆಗೂ ಯಾವ ಮಾಹಿತಿಯನ್ನೂ ಕೊಟ್ಟಿಲ್ಲ. ಆದರೆ, ಅವರು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದಷ್ಟೇ ಹೇಳಿದ್ದಾರೆ.