ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಬಿಜೆಪಿಯನ್ನು ಬೆನ್ನಬಿಡದೇ ಕಾಡುತ್ತಿದೆ. ಕಾರ್ಯಕರ್ತರಿಗೆ ರಕ್ಷಣೆ ನೀಡದ ಅಸಹಾಯಕ ಪಕ್ಷ ಎನ್ನುವ ಅಪಹಾಸ್ಯಕ್ಕೂ ಗುರಿಯಾಗಿದೆ. ಇನ್ನೊಂದೆ ನಾಯಕರ ವರ್ತನೆಗಳು ಕಾರ್ಯಕರ್ತರಿಗೆ ರೇಜಿಗೆ ಹುಟ್ಟಿಸಿವೆ. ಓದಿ ಇದು ದು.ಗು.ಲಕ್ಷ್ಮಣ ಅವರ ಅಂಕಣ.
ಬೆಳ್ಳಾರೆಯಲ್ಲಿ ಪ್ರವೀಣ ನೆಟ್ಟಾರ್ ಎಂಬ ಹಿಂದು ಕಾರ್ಯಕರ್ತನೊಬ್ಬನ ಹತ್ಯೆ. ಅನಂತರ ನಡೆದ ವಿಷಮ ವಿದ್ಯಮಾನಗಳು ಹಿಂದು ಸಮಾಜದ ಸಾಕ್ಷಿ ಪ್ರಜ್ಞೆಯನ್ನೇ ಬಡೆದೆಬ್ಬಿಸುವಂತೆ ಮಾಡಿರುವುದು ಸುಳ್ಳಲ್ಲ. ಬಿಜೆಪಿಯ ಯುವಮೋರ್ಚಾ ಕಾರ್ಯಕರ್ತನೂ ಆಗಿದ್ದ, ದೇಶಧರ್ಮಗಳ ಕಾರ್ಯದ ಬಗ್ಗೆ ಅತೀವ ಶ್ರದ್ಧೆ, ನಿಷ್ಠೆ ಇಟ್ಟುಕೊಂಡಿದ್ದ ಆ ಕಾರ್ಯಕರ್ತನ ಹತ್ಯೆಯಾಗಿ ಸರಿಯಾಗಿ 13 ದಿನಗಳೇ ಉರುಳಿವೆ. ಯಾರೋ ಕೆಲವರನ್ನು ಪೊಲೀಸರು ಬಂಧಿಸಿದ್ದು ಬಿಟ್ಟರೆ ನಿಜವಾದ ಕೊಲೆಪಾತಕಿಯನ್ನು ಪತ್ತೆಹಚ್ಚಿ, ಆತನ ಮೇಲೆ ಕಾನೂನುಕ್ರಮ ಜರುಗಿಸುವ ಯಾವುದೇ ಗಂಭೀರ ಕ್ರಮಗಳೂ ಜರುಗಿಲ್ಲ.
ಪ್ರವೀಣನ ಹತ್ಯೆಯ ಮರುದಿನ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರ ಭಾರಿ ಆಕ್ರೋಶವೇ ಸ್ಫೋಟಗೊಂಡಿತ್ತು. ʼಕೇಂದ್ರವೂ ನಮ್ಮದೇ, ರಾಜ್ಯವೂ ನಮ್ಮದೇ, ಸಾವೂ ನಮ್ಮದೇʼ ಎಂಬ ಈ ಒಂದು ಸಂದೇಶವೇ ಸಾಕು – ಕಾರ್ಯಕರ್ತರ ಆಕ್ರೋಶ ಯಾವ ಪರಿಯಲ್ಲಿತ್ತು ಎಂಬುದಕ್ಕೆ. ಅದಕ್ಕೂ ಕಾರಣವಿದೆ. ಈ ಹತ್ಯೆಯ ಘಟನೆಗೆ ಕೆಲವೇ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಹರ್ಷನೆಂಬ ಹಿಂದು ಕಾರ್ಯಕರ್ತನ ಕಗ್ಗೊಲೆ ನಡೆದಿತ್ತು. ಆರೋಪಿಗಳನ್ನು ಬಂಧಿಸಲಾಗಿದೆಯಾದರೂ ಜೈಲಿನಲ್ಲಿ ವಿಡಿಯೋ ಕಾಲ್ ಮೂಲಕ ಅವರೆಲ್ಲ ಸಂಭ್ರಮದಲ್ಲಿರುವ ವಿದ್ಯಮಾನ ಹಿಂದು ಕಾರ್ಯಕರ್ತರ ಸಹನೆಯನ್ನು ಕೆಣಕಿತ್ತು. ಈಗ ಇನ್ನೊಬ್ಬ ಕಾರ್ಯಕರ್ತ ಹತ್ಯೆಗೀಡಾದಾಗಲೂ ಸರ್ಕಾರ ʼಕಠಿಣಕ್ರಮʼದ ಭರವಸೆ ನೀಡುವುದಕ್ಕಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡಿದ್ದು ಕಾರ್ಯಕರ್ತರ ಕೋಪಾಗ್ನಿ ಕೊತಕೊತ ಕುದಿಯುವಂತೆ ಮಾಡಿದೆ.
ಮುಖ್ಯವಾಗಿ ಬಹುತೇಕ ಕಾರ್ಯಕರ್ತರ ಮನಸ್ಸಿನಲ್ಲಿ ಕುದಿಯುವ ಪ್ರಶ್ನೆಗಳೆಂದರೆ: ಸಿದ್ದರಾಮಯ್ಯ ಸರ್ಕಾರವಿದ್ದಾಗಲೂ 23 ಹಿಂದು ಕಾರ್ಯಕರ್ತರ ಬರ್ಬರ ಹತ್ಯೆಗಳಾದವು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರಿದ ಬಳಿಕವೂ ಕಾರ್ಯಕರ್ತರ ಹತ್ಯಾಸರಣಿ ನಿಂತಿಲ್ಲ. ಸಾಲುಸಾಲು ಹತ್ಯೆಗಳು ಜರುಗುತ್ತಲೇ ಇವೆ. ಹಾಗಿದ್ದರೆ ನಮ್ಮ ಪರವಾದ ಸರ್ಕಾರ ಇದೆಂದು ಯಾವ ಬಾಯಲ್ಲಿ ಹೇಳಿಕೊಳ್ಳುವುದು? ʼಹತ್ಯೆ ಮಾಡಿದವರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು, ಪಾತಾಳದಲ್ಲಿ ಅಡಗಿದ್ದರೂ ಬಿಡುವುದಿಲ್ಲʼ ಎಂಬ ಮುಖ್ಯಮಂತ್ರಿ, ಗೃಹಮಂತ್ರಿ ಮತ್ತಿತರ ಬಿಜೆಪಿ ಮುಖಂಡರ ಘೋಷಣೆಗಳೆಲ್ಲ ಬರಿದೇ ಬೊಗಳೆ. ಕೇವಲ ಕಣ್ಣೊರೆಸುವ ತಂತ್ರ, ಬೀಸುವ ದೊಣ್ಣೆಯಿಂದ ಸದ್ಯಕ್ಕೆ ಪಾರಾಗುವ ರಣಹೇಡಿ ತಂತ್ರ ಎಂದು ಬೊಗಸೆಯಷ್ಟು ವಿವೇಕ ಇರುವ ಯಾವ ಕಾರ್ಯಕರ್ತನಿಗಾದರೂ ಅರ್ಥವಾಗದೆ ಇರುತ್ತದೆಯೆ? ಗೃಹಮಂತ್ರಿಗಳು ತಾನೊಬ್ಬ ಸಮರ್ಥ ಗೃಹಮಂತ್ರಿಯೆಂದು ತಮಗೆ ತಾನೇ ಬೆನ್ನುತಟ್ಟಿಕೊಳ್ಳುತ್ತಿರಬಹುದು, ಆದರೆ ಅವರು ಗೃಹಮಂತ್ರಿಯಾದ ಬಳಿಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಅವರಿಗೆ ಗೊತ್ತೇ ಆಗಿಲ್ಲ. ತನ್ನ ಸುತ್ತಲಿನ ಭಟ್ಟಂಗಿಗಳ ಮಾತನ್ನೇ ವೇದವಾಕ್ಯವೆಂದು ನಂಬುವವರಿಗೆ ಗ್ರೌಂಡ್ ರಿಯಾಲಿಟಿ ಗೊತ್ತಾಗುವುದಾದರೂ ಹೇಗೆ? ಇನ್ನೂ ವಿಪರ್ಯಾಸದ ಸಂಗತಿಯೆಂದರೆ, ಗೃಹಸಚಿವರ ಬೆಂಗಳೂರಿನ ಅಧಿಕೃತ ನಿವಾಸದ ಮುಂದೆ ಸಂಘಪರಿವಾರದ ಸಂಘಟನೆಯಾಗಿರುವ ಎಬಿವಿಪಿ ಕಾರ್ಯಕರ್ತರೇ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆಯೂ ನಡೆದಿದೆ.
ಇದಕ್ಕಿಂತಲೂ ಅಸಹ್ಯ ಹುಟ್ಟಿಸುವ ವಿದ್ಯಮಾನಗಳು ನಡೆದಿರುವುದು ಬಿಜೆಪಿ ಪಾಲಿಗೆ ಯಾವ ಶೋಭೆಯನ್ನೂ ಖಂಡಿತ ತರುವುದಿಲ್ಲ. ಪಕ್ಷದಲ್ಲಿ 12 ಕೋಟಿ ಕಾರ್ಯಕರ್ತರಿದ್ದಾರೆ. ಒಂದಿಬ್ಬರು ಹೋದರೆ ಕೊರತೆಯೇನಿಲ್ಲ ಎಂದು ದಾವಣಗೆರೆಯ ಬಿಜೆಪಿ ಸಂಸದ ಸಿದ್ದೇಶ್ ನೀಡಿದ ಹೇಳಿಕೆ, ಒಬ್ಬ ಕಾರ್ಯಕರ್ತ ಹೋದರೆ ಮತ್ತೊಬ್ಬ ಬರುತ್ತಾನೆ ಅಂತ ಶಿವಮೊಗ್ಗದ ಹಿರಿಯ ಶಾಸಕ, ಮಾಜಿ ಮಂತ್ರಿ ಈಶ್ವರಪ್ಪ ಅವರ ಹೇಳಿಕೆ ಯಾವುದೇ ಪ್ರಾಮಾಣಿಕ ಕಾರ್ಯಕರ್ತನೊಬ್ಬನ ಅಂತಃಕರಣವನ್ನು ಚುಚ್ಚದೆ ಇರಲು ಸಾಧ್ಯವೆ? ಕಾರ್ಯಕರ್ತನೊಬ್ಬನ ದಾರುಣ ಹತ್ಯೆ ನಡೆದ ಸಂದರ್ಭದಲ್ಲಿ ಏನು ಮಾತನಾಡಬೇಕು, ಏನನ್ನು ಮಾತನಾಡಬಾರದು ಎಂಬ ಕನಿಷ್ಠ ಸಾಮಾನ್ಯ ತಿಳುವಳಿಕೆಯೂ ಈ ಮುಖಂಡರಿಗಿಲ್ಲವೆಂದರೆ ಇವರಿಗೂ ಕಾಂಗ್ರೆಸ್ ಮುಖಂಡರಿಗೂ ಏನು ವ್ಯತ್ಯಾಸ? ಕಾಂಗ್ರೆಸ್ ಮುಖಂಡರಿಗಿರದ ಸಂಸ್ಕಾರ, ಸಭ್ಯತೆ ಇವರಲ್ಲಿ ಏನಿದೆ? ಎಂದೆನಿಸುವುದು ತೀರಾ ಸಹಜ.
ಬಿಜೆಪಿ ಮುಖಂಡರ ಮಕ್ಕಳೇ ಹೀಗೆ ಬರ್ಬರ ಹತ್ಯೆಗೀಡಾಗಿದ್ದರೆ ಇಂತಹ ಉಡಾಫೆಯ, ನಿಷ್ಕರುಣೆಯ ಹೇಳಿಕೆ ನೀಡುತ್ತಿದ್ದರೆ? ಬಿಜೆಪಿಯ ಮುಖಂಡರ ಮಕ್ಕಳ್ಯಾರೂ ಅಂತಹ ಬರ್ಬರ ಹತ್ಯೆಗೀಡಾಗುವುದಿಲ್ಲ, ಬಿಡಿ (ಆಗುವುದೂ ಬೇಡ!). ಏಕೆಂದರೆ ಅವರೆಲ್ಲ ಯಾವಾಗಲೂ Comfort Zone ನಲ್ಲೇ ಬದುಕುವವರು. ಅಧಿಕಾರವನ್ನೂ ಅಷ್ಟೇ ಸುಲಲಿತವಾಗಿ ಕೈವಶ ಮಾಡಿಕೊಳ್ಳಬಲ್ಲ ಸಾಮರ್ಥ್ಯ ಇರುವಂಥವರು! ಕಾರ್ಯಕರ್ತರಿಗೆ ಮಾತ್ರ ಹುದ್ದೆ, ಅಧಿಕಾರವೂ ಇಲ್ಲ. ಇತ್ತ ವಿರೋಧಿಗಳಿಂದ ಹತ್ಯೆಗೀಡಾಗುವ ʼಶಿಕ್ಷೆʼಯೂ ತಪ್ಪಿಲ್ಲ. ಇದು ಕಾರ್ಯಕರ್ತರ ಗ್ರಹಚಾರವಲ್ಲದೆ ಮತ್ತೇನು?
ಕೇರಳದಲ್ಲಿ ಬಿಜೆಪಿಯ ಸರ್ಕಾರವಿಲ್ಲ. ಅಲ್ಲಿರುವ ಕಮ್ಯುನಿಸ್ಟ್ ಸರ್ಕಾರದಡಿಯಲ್ಲಿ ಹಿಂದು ಕಾರ್ಯಕರ್ತರ ಹತ್ಯೆ ಈಗಲೂ ನಿರಂತರ ನಡೆಯುತ್ತಲೇ ಇದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸರ್ಕಾರವಿಲ್ಲ. ಅಲ್ಲಿರುವ ಮಮತಾ ದೀದಿಯ ಟಿಎಂಸಿ ಸರ್ಕಾರದಡಿಯಲ್ಲಿ ಹಿಂದು ಕಾರ್ಯಕರ್ತರು…ಭೀಕರ ಸಾವಿಗೀಡಾಗುತ್ತಲೇ ಇದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯದೇ ಸರ್ಕಾರವಿದ್ದರೂ ಹಿಂದು ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ ಎಂದರೆ ಬಿಜೆಪಿಗೆ ಹಿಂದುತ್ವದ ಬಗ್ಗೆ, ಹಿಂದು ಕಾರ್ಯಕರ್ತರ ಬಗ್ಗೆ ಇರುವ ಕಾಳಜಿ ಕೇವಲ ಸೋಗಲಾಡಿತನದ್ದು ಎಂದು ಹೇಳಲು ಪಾಂಡಿತ್ಯ ಬೇಕೆ?
ಹಿಂದುತ್ವದ ಬಗ್ಗೆ, ಹಿಂದು ಕಾರ್ಯಕರ್ತರ ಬಗ್ಗೆ, ಬಿಜೆಪಿ ಮುಖಂಡರಿಗೆ ನೈಜವಾದ ಕಾಳಜಿ, ಕಳಕಳಿ ಇದ್ದಿದ್ದೇ ಆಗಿದ್ದರೆ ಒಬ್ಬನಾದರೂ ಬಿಜೆಪಿ ಜನಪ್ರತಿನಿಧಿ ತನ್ನ ಸ್ಥಾನಕ್ಕೆ ರಾಜೀನಾಮೆ ಎಸೆದು ಹೊರಗೆ ಬರುವ ಪ್ರಾಮಾಣಿಕ ಧೈರ್ಯ ಪ್ರದರ್ಶಿಸಬೇಕಾಗಿತ್ತು. ಆ ನೈತಿಕತೆ ಒಬ್ಬರಿಗೂ ಇಲ್ಲ. ಯಾರೋ ಯುವಮೋರ್ಚಾದ ಕೆಳಗಿನ ಸ್ತರದ ಕೆಲವು ಪದಾಧಿಕಾರಿಗಳು ತಮ್ಮ ಸಣ್ಣಪುಟ್ಟ ಹುದ್ದೆಗಳಿಗೆ ರಾಜೀನಾಮೆ ನೀಡಿದರೇನು ಬಂತು ಭಾಗ್ಯ? ಬೊಮ್ಮಾಯಿ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವ ಸಂಘಪರಿವಾರದ ವ್ಯಕ್ತಿಯೊಬ್ಬರಿಗೆ ಪ್ರವೀಣ್ ಹತ್ಯೆಯ ಸಂದರ್ಭದಲ್ಲಿ ಯಾಕೆ ಹೀಗಾಗುತ್ತಿದೆ ಎಂದು ಕೇಳಿದಾಗ ಅವರು ಅಸಹಾಯಕರಾಗಿ ಹೇಳಿದ್ದು: “ಏನೂ ಮಾಡಲು ತೋಚುತ್ತಿಲ್ಲ. ನಮ್ಮ ಆಡಳಿತ ವ್ಯವಸ್ಥೆ – ಅದರಲ್ಲೂ ಗೃಹ ಇಲಾಖೆ ಖಡಕ್ ಆಗಿಲ್ಲ. ನಮ್ಮ ಇಂಟೆಲಿಜೆನ್ಸ್ ಕೂಡ ಸರಿ ಇಲ್ಲ ಅನ್ನೋದು ಸ್ಪಷ್ಟ”, ಅಷ್ಟು ಹೇಳಿ ಅವರೂ ಕೈತೊಳೆದುಕೊಂಡುಬಿಟ್ಟರು!
ಬೆಳ್ಳಾರೆಯಲ್ಲಿ ಪ್ರವೀಣನ ಬರ್ಬರ ಹತ್ಯೆ ನಡೆದ ಸುದ್ದಿ ಕೇಳಿದಾಕ್ಷಣ ರಾಜ್ಯ ಬಿಜೆಪಿ ಮುಖಂಡರು ಸ್ಥಳಕ್ಕೆ ಧಾವಿಸಿ ಬರಬೇಕಿತ್ತು. ಏಕೆಂದರೆ ಹತ್ಯೆಗೀಡಾದ ವ್ಯಕ್ತಿ ಬಿಜೆಪಿ ಯುವು ಮೋರ್ಚಾದ ಒಬ್ಬ ಸಕ್ರಿಯ ಪದಾಧಿಕಾರಿ. ಆದರೆ ಮುಖಂಡರು ಅಲ್ಲಿಗೆ ಬಂದಿದ್ದು ಮಾತ್ರ ಪ್ರವೀಣನ ಪಾರ್ಥಿವ ಶರೀರದ ಅಂತಿಮಯಾತ್ರೆ ಇನ್ನೇನು ಮುಗಿಯುವ ಹಂತದಲ್ಲಿದ್ದಾಗ! ಬಿಜೆಪಿ ಮುಖಂಡರ ಈ ಬೇಜವಾಬ್ದಾರಿತನವು ಕಾರ್ಯಕರ್ತರನ್ನು ಕೆರಳಿಸದೆ ಇರಲು ಸಾಧ್ಯವೆ? ಅದಕ್ಕೇ ಅವರು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಅವರಿದ್ದ ಕಾರನ್ನು ಘೇರಾಯಿಸಿ ಹಿಡಿದು ಅಲ್ಲಾಡಿಸಿದ್ದು. ಕಾರಿನ ಬಾಗಿಲನ್ನೇನಾದರೂ ತೆರೆಯಲು ಸಾಧ್ಯವಾಗಿದ್ದಿದ್ದರೆ ಕಟೀಲ್ ಕಾರ್ಯಕರ್ತರ ಕಪಾಳಮೋಕ್ಷಕ್ಕೆ ಖಂಡಿತ ಒಳಗಾಗಬೇಕಿರುತ್ತಿತ್ತು. ರಾಜ್ಯಾಧ್ಯಕ್ಷರು ಏನೇ ಕೆಲಸಗಳಿದ್ದರೂ ಹತ್ಯೆಯಾದ ದಿನವೇ ಬೆಳ್ಳಾರೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಿದ್ದರೆ, ಕಾರ್ಯಕರ್ತರೊಡನೆ ಮಾತನಾಡಿ ವಿಶ್ವಾಸ, ಭರವಸೆ ತುಂಬಿದ್ದರೆ ಮರುದಿನದ ಅಂತಿಮಯಾತ್ರೆಯ ದೃಶ್ಯದ ಖದರೇ ಬದಲಾಗಿರುತ್ತಿತ್ತು. ಆದರೆ ಕಟೀಲ್ ಆ ಕೆಲಸ ಮಾಡಲಿಲ್ಲ. ಉಳಿದ ಶಾಸಕರು, ಸಚಿವರೂ ಹಾಗೆ ನಡೆದುಕೊಳ್ಳಲಿಲ್ಲ. ಪ್ರತಿಯೊಬ್ಬರೂ ತಮ್ಮ ʼಸುರಕ್ಷತೆʼಯ ಬಗ್ಗೆಯೇ ಕಾಳಜಿ ವಹಿಸಿ ದೂರವೇ ಉಳಿದರು. ಕಾರ್ಯಕರ್ತನೊಬ್ಬನ ಬರ್ಬರ ಹತ್ಯೆಯಾದಾಗ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಲಿ, ಅ.ಭಾ.ಸಂಘಟನಾ ಕಾರ್ಯದರ್ಶಿಯಾಗಲಿ, ತಮ್ಮೆಲ್ಲ ʼತುರ್ತುʼ ಕೆಲಸ ಬದಿಗಿಟ್ಟು ಬೆಳ್ಳಾರೆಗೆ ಧಾವಿಸಿ ಬರಬೇಕಾಗಿತ್ತು. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಬೇಕಾಗಿತ್ತು. ಪಾಪ, ಅವರ್ಯಾರಿಗೂ ಬಿಡುವೇ ಇರಲಿಲ್ಲ! ಪ್ರವೀಣ ಹತ್ಯೆಯಾಗಿ ೧೩ ದಿನ ಕಳೆದ ಮೇಲೂ ಈಗಲೂ ಅವರಿಗೆ ಬೆಳ್ಳಾರೆಗೆ ಬರಲು ಬಿಡುವಿಲ್ಲ! ಸಂಘಟನೆಯ ಅದ್ಯಾವ ಮಹತ್ತರ ಕಾರ್ಯಗಳಿವೆಯೋ..!
ಪ್ರವೀಣನ ಹತ್ಯೆಯ ಬಳಿಕ ನಡೆದ ಸುರತ್ಕಲ್ ಫಾಜಿಲನ ಹತ್ಯೆಯ ಆರೋಪಿಗಳನ್ನೆಲ್ಲ 24 ಗಂಟೆಯೊಳಗೇ ಪೊಲೀಸರು ಸೆರೆಹಿಡಿದಿದ್ದಾರೆ. ಆದರೆ ಪ್ರವೀಣನ ಹತ್ಯೆಯ ಪ್ರಮುಖ ಆರೋಪಿಗಳ ಬಂದನ ಈಗಲೂ ಆಗಿಲ್ಲ. ಈಗ ಬಂಧನಕ್ಕೊಳಗಾಗಿರುವವರು ಹತ್ಯೆಗೆ ನೆರವು ನೀಡಿದ ಕೆಲವರು, ಅಷ್ಟೇ. ಹಾಗಿದ್ದರೆ ಸರ್ಕಾರದ ʼಕಠಿಣ ಕ್ರಮʼ ದ ಭರವಸೆ ಠುಸ್ ಪಟಾಕಿಯಲ್ಲದೆ ಮತ್ತೇನು? ಗೃಹ ಇಲಾಖೆ, ಇಂಟಲಿಜೆನ್ಸ್ ಸಂಪೂರ್ಣ ವಿಫಲವಾಗಿರುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು?
1984ರಷ್ಟು ಹಿಂದೆಯೇ ಖ್ಯಾತ ಕವಿ ಗೋಪಾಲ ಕೃಷ್ಣ ಅಡಿಗರು ʼಕಟ್ಟುವೆವು ನಾವುʼ ಎಂಬ ಕವನವೊಂದರಲ್ಲಿ ಬರೆದಿದ್ದರು:
“ಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!”
ಅವರು ಆ ಕವನ ರಚಿಸಿದ್ದ ಹಿನ್ನೆಲೆ ಬೇರೆ. ಆದರೀಗ ಆ ಕವನದ ʼಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು/ ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲುʼ ಎಂಬ ಸಾಲುಗಳು ಹಿಂದು ಕಾರ್ಯಕರ್ತರನ್ನುದ್ದೇಶಿಸಿಯೇ ಬರೆದಂತಿದೆ, ಎಂದು ಈಗ ಯಾರಿಗಾದರೂ ಅನಿಸಿದರೆ ಆಶ್ಚರ್ಯವಿಲ್ಲ.
ರಾಜಕೀಯ ಪಕ್ಷಗಳ ಅಧಿಕಾರದ ಕೋಟೆಗೋಡೆಗೆ ಇನ್ನೆಷ್ಟು ಹೆಣಗಳು ಮೆಟ್ಟಿಲಾಗಬೇಕು? ಈ ಪ್ರಶ್ನೆಗೆ ಉತ್ತರಿಸುವರಾರು?
ದು.ಗು. ಲಕ್ಷ್ಮಣ
- ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.